ಆರೋಗ್ಯಯುತ ಜಗತ್ತಿನ ನಿರ್ಮಾಣಕ್ಕೆ ಯೋಗ ಅಗತ್ಯ: ಸಚಿವ ಸದಾನಂದಗೌಡ

ಬೆಂಗಳೂರು,ಜೂ.11: ಯೋಗ ನಮ್ಮ ನೆಮ್ಮದಿ ಮನಸ್ಸು, ಆಚಾರ-ವಿಚಾರ ಹಾಗೂ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವವಾದ ಪಾತ್ರವನ್ನು ವಹಿಸುತ್ತದೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗತ್ತು ಬೆಳೆದಂತೆಲ್ಲಾ ಯಾಂತ್ರೀಕರಣ ಬೆಳೆದು, ಆರೋಗ್ಯ ಹದಗೆಡುತ್ತಿದೆ. ಈ ನಿಟ್ಟಿನಲ್ಲಿ ಆರೋಗ್ಯಯುತ ಜಗತ್ತು ನಿರ್ಮಾಣವಾಗಲು ಯೋಗ ಅತ್ಯಂತ ಅಗತ್ಯ. ಅಲ್ಲದೆ, ಯೋಗವು ಪರಿಸರ ಹಾಗೂ ಮನುಷ್ಯರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಹಾಗೂ ಮನುಷ್ಯರ ವ್ಯಕ್ತಿತ್ವ ವಿಕಸನಗೊಳಿಸುತ್ತದೆ ಎಂದು ಹೇಳಿದರು.
ಆರೋಗ್ಯಯುತವಾದ ದೇಶ ನಿರ್ಮಾಣಕ್ಕಾಗಿ ನಮ್ಮ ದೇಶ ವಿಶ್ವಕ್ಕೆ ಸಲಹೆ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಕಳೆದ ವರ್ಷ ಯೋಗ ದಿನಾಚರಣೆಯನ್ನು ಜೂ.21 ರಂದು ಅಂತಾರಾಷ್ಟ್ರೀಯ ಯೋಗದಿನವನ್ನಾಗಿ ಆಚರಿಸುವ ಮೂಲಕ ವಿಶ್ವಕ್ಕೆ ಯೋಗವನ್ನು ಪ್ರಧಾನಿ ಮೋದಿ ತೋರಿಸಿದ್ದಾರೆ. ಹಾಗಾಗಿ ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಜೂ.21 ರಂದು ನಗರದ 2 ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಯೋಗ ಪ್ರದರ್ಶನ ನಡೆಯುತ್ತಿದೆ. ಈ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿ ಗಳು, ಯುವಜನತೆ, ಮಹಿಳೆಯರು, ಸಾರ್ವಜನಿಕರು ಹೆಚ್ಚಾಗಿ ಭಾಗವಹಿ ಸಬೇಕು ಎಂದು ಕೋರಿದರು. ಪತ್ರಿಕಾಗೋಷ್ಠಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಮಿತಿ ಅಧ್ಯಕ್ಷ ಕೃಷ್ಣಗೌಡ, ಕಿರುತೆರೆ ನಟಿ ಮಾಳವಿಕ ಅವಿನಾಶ್, ಸ್ವಚ್ಛ ಬೆಂಗಳೂರು ಸಂಘಟನೆಯ ಎನ್.ಎಸ್.ರಮಾಕಾಂತ್ ಇನ್ನಿತರು ಉಪಸ್ಥಿತರಿದ್ದರು.





