ಉಸಿರಾಟಕ್ಕೆ ಹಸಿರು ಮುಖ್ಯ: ಡಾ.ದಿನೇಶ್ ಕುಮಾರ್
ಮೂಡಿಗೆರೆಯಲ್ಲಿ ವನ ಮಹೋತ್ಸವ ಕಾರ್ಯಕ್ರಮ

ಮೂಡಿಗೆರೆ, ಜೂ.11: ನಿತ್ಯ ಉಸಿರಾಡಬೇಕಾದರೆ ಹಸಿರು ಮುಖ್ಯ. ಆದ್ದರಿಂದ ಹಸಿರನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪರಿಸರ ದಿನಾಚರಣೆ ಜೂನ್‌ಗೆ ಮಾತ್ರ ಸೀಮಿತವಾಗಬಾರದು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ.ದಿನೇಶ್ ಕುಮಾರ್ ಹೇಳಿದರು. ಅವರು ಇಲ್ಲಿನ ಹ್ಯಾಂಡ್‌ಪೋಸ್ಟ್ ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಸಂಶೋಧನಾ ಕೇಂದ್ರ, ತೋಟಗಾರಿಕಾ ಮಹಾವಿದ್ಯಾನಿಲಯ ಹಾಗೂ ಅರಣ್ಯ ಇಲಾಖೆ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ವನ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಕುಟುಂಬದವರು ಆಚರಿಸುವ ಹುಟ್ಟುಹಬ್ಬಗಳಲ್ಲಿ ನಾವು ಗಿಡಗಳನ್ನು ನೆಡುವ ಮೂಲಕ ಆಚರಿಸಿದರೆ ಸಾರ್ಥಕವಾಗುತ್ತದೆ. ರಾಜ್ಯದಲ್ಲಿ ಇಂದಿನ ದಿನಗಳಲ್ಲಿ ಕಾಡುಗಳು ನಾಶವಾಗಿ ಕಾಂಕ್ರಿಟ್ ಕಟ್ಟಡಗಳು ನಿರ್ಮಾಣಗೊಳ್ಳುತ್ತಿರುವ ಪರಿಣಾಮ ಶುದ್ಧ ಗಾಳಿ ಇಲ್ಲದೆ ಬರಗಾಲ ಪ್ರಾರಂಭವಾಗಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದನ್ನು ಕಂಡಿದ್ದೇವೆ. ಮುಂದಾಗುವ ಭಾರಿ ಅನಾಹುತದಿಂದ ತಪ್ಪಿಸುವ ಸಲುವಾಗಿ ಗಿಡಗಳನ್ನು ಬೆಳೆಸಿ ಪರಿಸರ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಮನುಷ್ಯನ ಸ್ವಾರ್ಥಕ್ಕೆ ಪರಿಸರ ನಾಶ: ಮನುಷ್ಯ ಭೂಮಿಯ ಮೇಲೆ ನೆಮ್ಮದಿಯಿಂದ ಬದುಕಬೇಕಾದರೆ ಭೂ ಪ್ರದೇಶದ ಶೇ. 33ರಷ್ಟು ಅರಣ್ಯವಿರಬೇಕು. ಆದರೆ, ಜನಸಂಖ್ಯೆ ಹೆಚ್ಚಾದಂತೆ ಮತ್ತು ಮನುಷ್ಯ ತನ್ನ ಆವಶ್ಯಕತೆಗೂ ಮೀರಿ ಅರಣ್ಯ ಪ್ರದೇಶವನ್ನು ನಾಶ ಮಾಡುತ್ತಿರುವ ಕಾರಣ ಇಂದು ಅರಣ್ಯ ಸಂಪತ್ತು ಶೇ. 21ರಷ್ಟಿದೆ. ಇದರಿಂದಾಗಿಯೇ ಪ್ರಕೃತಿಯ ಅಸಮತೋಲನಕ್ಕೆ ಕಾರಣವಾಗಿದೆ. ಇನ್ನಾದರೂ ಎಚ್ಚೆತ್ತು ಮರ,ಗಿಡಗಳನ್ನು ಬೆಳೆಸದೇ ಹೋದರೆ ಮುಂದಿನ ಕೆಲವೇ ವರ್ಷಗಳಲ್ಲಿ ಪರಿಸರವೇ ನಮಗೆ ತಕ್ಕ ಪಾಠ ಕಲಿಸಲಿದೆ.
ವಿಷಾತೀತ ತಾಪಮಾನದಿಂದ ಹಿಮಪರ್ವತಗಳು ಕರಗಿ ಸಮುದ್ರದ ಅಂಚಿನಲ್ಲಿರುವ ನಗರ ಮತ್ತು ದೇಶಗಳು ಮುಳುಗುವ ಮುನ್ಸೂಚನೆ ಗೋಚರವಾಗಿದೆ. ಆದ್ದರಿಂದ ಉತ್ತಮ ಪರಿಸರ ನಿರ್ಮಾಣಕ್ಕೆ ಎಲ್ಲೆಡೆ ವೈವಿಧ್ಯಮಯ ಮರ, ಗಿಡಗಳನ್ನು ನೆಟ್ಟು ಪೋಷಿಸಿದಾಗ ಮಾತ್ರ ತಾಪಮಾನವನ್ನು ತಡೆಗಟ್ಟಬಹುದು ಎಂದರು.
ಕೃಷಿ ವಿಶ್ವವಿದ್ಯಾನಿಲಯದ ಎಡಿಆರ್ ದೇವರಾಜ್, ಮೀನುಗಾರಿಕೆ ವಿಭಾಗದ ಸ್ವಾಮಿ, ಕೆವಿಕೆಯ ರವಿಕುಮಾರ್, ಗಿರೀಶ್, ಅರಣ್ಯ ಇಲಾಖೆ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.







