ತಾಳ್ಮೆ, ಸಂಯಮದಿಂದ ಒಳ್ಳೆಯ ತೀರ್ಪು ಸಾಧ್ಯ: ನ್ಯಾ. ಪ್ರಭಾವತಿ

ಚಿಕ್ಕಮಗಳೂರು, ಜೂ.11: ತಾಳ್ಮೆ, ಸಂಯಮವಿದ್ದಲ್ಲಿ ಒಳ್ಳೆಯ ತೀರ್ಪು ನೀಡಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಪ್ರಭಾವತಿ ಎಂ.ಹಿರೇಮಠ್ ಸಲಹೆ ನೀಡಿದರು.
ಅವರು ನಗರದ ವಕೀಲರ ಸಂಘದ ಸಭಾಂಗಣದಲ್ಲಿ ಜಿಲ್ಲಾ ವಕೀಲರ ಸಂಘ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ನ್ಯಾಯಾಧೀಶರಾದವರು ಕೆಲಸದ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳಬಾರದು. ಶಿಸ್ತು, ಸಂಯಮ ಬೆಳೆಸಿಕೊಳ್ಳಬೇಕು. ಎಂತಹ ಕಠಿಣ ಪರಿಸ್ಥಿತಿಯಲ್ಲಿದ್ದರೂ ನಗುಮೊಗದಿಂದ ಪ್ರತಿಯೊಬ್ಬರ ಪ್ರೀತಿ, ಸ್ನೇಹ ಸಂಪಾದಿಸಬೇಕು ಎಂದು ಕಿವಿ ಮಾತು ಹೇಳಿದರು.
ಬೆಳಗ್ಗೆಯಿಂದ ಸಂಜೆವರೆಗೆ ಒಂದೆ ಕಡೆ ಕುಳಿತು ಕೆಲಸ ನಿರ್ವಹಿಸುವ ಜವಾಬ್ದಾರಿ ಇರುತ್ತದೆ. ಯಾವುದೆ ಕಾರಣಕ್ಕೂ ಕೋಪದಿಂದ ಉತ್ತರಿಸದೆ ಶಾಂತ ಚಿತ್ತದಿಂದ ಬೆರೆತಲ್ಲಿ ಎಲ್ಲರಲ್ಲಿ ನಾವು ಒಬ್ಬರಾಗಬಹುದು ಎಂದು ಹೇಳಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್.ಎಚ್.ಕೃಷ್ಣಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ ಹಲವರು ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ, ನ್ಯಾಯಾಂಗ ಇಲಾಖೆಯ ಗೌರವ ಎತ್ತಿ ಹಿಡಿದಿದ್ದಾರೆ ಎಂದು ವಿಶ್ಲೇಷಿಸಿದರು.
ಹಿರಿಯ ನ್ಯಾಯಾಧೀಶರ ಮಾರ್ಗ ದರ್ಶನ ಪಡೆದು ನ್ಯಾಯಾಂಗ ಇಲಾಖೆಗೆ ವಿಧೇಯಕರಾಗಿ ನಡೆದುಕೊಳ್ಳಬೇಕು. ಜಿಲ್ಲೆ, ರಾಜ್ಯ, ದೇಶಕ್ಕೆ ಒಳ್ಳೆಯ ಹೆಸರು ತಂದು ಇಲಾಖೆಗೆ ಗೌರವ ಸಲ್ಲಿಸಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡ ಎಂ.ಕಿಶೋರ್ ಕುಮಾರ್ ಮತ್ತು ಮಾಲಾ ಅವರನ್ನು ಅಭಿನಂದಿಸಲಾಯಿತು. ವಕೀಲ ಎನ್.ಆರ್.ತೇಜಸ್ವಿ ಸ್ವಾಗತಿಸಿದರು. ವಕೀಲ ಸುಜೇಂದ್ರ ಕಾರ್ಯಕ್ರಮ ನಿರೂಪಿ ಸಿದರು. ವೀರೇಂದ್ರ ವಂದಿಸಿದರು.







