ಸಮವಸ್ತ್ರ ಶಿಸ್ತಿನ ಪ್ರತೀಕ, ಆತ್ಮವಿಶ್ವಾಸ ಹೆಚ್ಚಿಸುತ್ತದೆ: ರೇಣುಕಾಮೈಲಾರಿ

ಚಿಕ್ಕಮಗಳೂರು, ಜೂ.11: ಸಮವಸ್ತ್ರ ಶಿಸ್ತಿನ ಪ್ರತೀಕ ಜೊತೆಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಮಹಿಳೆಯರು ಸಾಧ್ಯ ವಾದ ಅಳಿಲು ಸೇವೆಯನ್ನು ಸಮಾಜಕ್ಕೆ ಸಲ್ಲಿಸುವ ಉದ್ದೇಶದಿಂದ ವಿವಿಧ ಗುಂಪುಗಳನ್ನು ರಚಿಸಿಕೊಂಡು ಶಾಲೆ, ವಸತಿ ನಿಲಯ, ವೃದ್ಧಾಶ್ರಮ ಮತ್ತಿತರ ಸೇವಾ ಚಟುವಟಿಕೆ ನಡೆಯುವ ತಾಣಗಳಿಗೆ ನೆರವು ನೀಡಲಾಗುತ್ತದೆ ಎಂದು ಮಹಿಳಾ ಜಾಗೃತಿ ಸಂಘದ ನಿರ್ದೇಶಕಿ ರೇಣುಕಾಮೈಲಾರಿ ನುಡಿದರು.
ಅವರು ಶನಿವಾರ ನಗರದ ಸ್ಪೆನ್ಸಾರ್ ರಸ್ತೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 30 ವಿದ್ಯಾರ್ಥಿಗಳಿಗೆ ಮಹಿಳಾ ಜಾಗೃತಿ ಸಂಘದ ಕೋಟೆ ಬಡಾವಣೆ ತಂಡದ ವತಿಯಿಂದ ಸುಮಾರು 8ಸಾವಿರ ರೂ. ವೌಲ್ಯದ ಸಮವಸ್ತ್ರಗಳನ್ನು ವಿತರಿಸಿ ಮಾತನಾಡಿದರು.
ನಗರದ ಮಧ್ಯಭಾಗದಲ್ಲಿರುವ, ವಿಶೇಷವಾಗಿ ದೀನ ದುರ್ಬಲ ವರ್ಗದ ಮಕ್ಕಳೇ ಅಧಿಕವಾಗಿ ಕಲಿಯುತ್ತಿರುವ ಈ ಶಾಲೆಗೆ ಪ್ರಸಕ್ತ ಸಾಲಿನಲ್ಲಿ ದಾಖಲಾಗಿರುವ 30ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡುವ ಮೂಲಕ ಸಣ್ಣ ಉತ್ತೇಜನ ನೀಡಲಾಗುತ್ತಿದೆ ಎಂದರು.
ಮಹಿಳಾ ವಿವಿದ್ಧೋದ್ದೇಶ ಸಹಕಾರ ಸಂಘದ ಅಧ್ಯಕ್ಷೆ ಶೈಲಾಚೆಲುವಯ್ಯ ಮಾತನಾಡಿ, 33ವರ್ಷಗಳಿಂದಲೂ ಜಾಗೃತಿ ಸಂಘದ ನೇತೃತ್ವದಲ್ಲಿ ನಿರಂತರವಾಗಿ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಮಹಿಳೆಯರು ಮನೆಗಷ್ಟೇ ಸೀಮಿತರಾಗದೆ ಸುತ್ತಲಿನ ಸಮಾಜದ ಆಗುಹೋಗುಗಳಿಗೆ ಸ್ಪಂದಿಸಲು ಇಂತಹ ಯೋಜನೆಗಳುಸಹಕಾರಿಯಾಗುತ್ತಿವೆ ಎಂದರು.
ಶಾಲಾ ಮುಖ್ಯ ಶಿಕ್ಷಕ ಅಣ್ಣೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ನಿರ್ದೇಶಕಿ ಸಿ.ಎಂ.ಸುಲೋಚನಾ, ಸಿ.ಎಂ.ಹೇಮಾ ಮತ್ತು ಭವಾನಿವಿಜಯಾನಂದ ಮಾತನಾಡಿದರು. ಯೋಜನೆಯ ಸದಸ್ಯರಾದ ಭಾರತಿ ನಾಗರಾಜ್, ಆಶಾನಿರಂಜನ್, ಶಶಿಕಲಾಶ್ರೀಧರ್, ಸುಮಿತ್ರಾಶಾಸ್ತ್ರಿ, ನೇತ್ರಾವೆಂಕಟೇಶ್ ಉಪಸ್ಥಿತರಿದ್ದರು. ಶಿಕ್ಷಕರಾದ ಪ್ರೇಮಾ ಸ್ವಾಗತಿಸಿದರು. ಕಲ್ಮರುಡಪ್ಪ ಪ್ರಾಸ್ತಾವಿಸಿದರು. ಲತಾ ವಂದಿಸಿದರು.







