ಮಹಾನಗರ ಪಾಲಿಕೆ ಆಡಳಿತ ವಿರುದ್ಧ ಕಾರ್ಪೊರೇಟರ್ ಮಾಲತೇಶ್ ಆರೋಪ
ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಾವಳಿಗಳ ಉಲ್ಲಂಘನೆ
ಶಿವಮೊಗ್ಗ, ಜೂ. 11: ಬೀದಿ ದೀಪಗಳ ನಿರ್ವಹಣೆಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆ ಆಡಳಿತ ನಡೆಸಿದ ಟೆಂಡರ್ ಪ್ರಕ್ರಿಯೆಯಲ್ಲಿ ಸಾಕಷ್ಟು ಲೋಪದೋಷಗಳಿವೆ. ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆ ಮಾಡಲಾಗಿದೆ. ಇದರಿಂದ ಪ್ರಸ್ತುತ ಬೀದಿ ದೀಪಗಳ ನಿರ್ವಹಣೆ ವ್ಯವಸ್ಥೆಯು ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ ಎಂದು ಪಾಲಿಕೆ ಸದಸ್ಯ ಎಚ್.ಸಿ. ಮಾಲತೇಶ್ ಆರೋಪಿಸಿದ್ದಾರೆ. ಶನಿವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀದಿ ದೀಪಗಳ ನಿರ್ವಹಣೆಗೆ ಸಂಬಂಧಿಸಿದಂತೆ ನಾಲ್ಕು ಪ್ಯಾಕೇಜ್‌ಗಳನ್ನು ಮಾಡಲಾಗಿದೆ. ಆದರೆ ಓರ್ವ ಗುತ್ತಿಗೆದಾರನಿಗೆ ಈ ನಾಲ್ಕು ಪ್ಯಾಕೇಜ್‌ಗಳನ್ನು ನೀಡಿರುವುದನ್ನು ತಾವು ಸೇರಿದಂತೆ ಕೆಲ ಪಾಲಿಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದೆವು. ಆದಾಗ್ಯೂ ಓರ್ವನಿಗೇ ಗುತ್ತಿಗೆನಿಡುವ ಬಗ್ಗೆ ಅನುಮೋದನೆ ನೀಡುವ ನಿರ್ಧಾರವನ್ನು ಮಾಡಲಾಗಿತ್ತು ಎಂದು ಆರೋಪಿಸಿದ್ದಾರೆ.
ಟೆಂಡರ್ ಪ್ರಕ್ರಿಯೆಯ ವೇಳೆ ಟೆಕ್ನಿಕಲ್ (ತಾಂತ್ರಿಕ) ಬಿಡ್ ತೆರೆದು ಜಿಲ್ಲಾಧಿಕಾರಿಯವರ ಅನುಮತಿ ಪಡೆಯಬೇಕು. ಆ ಬಳಿಕ ಫೈನಾನ್ಸಿಯಲ್ (ಹಣಕಾಸು) ಬಿಡ್ ನಡೆಸಬೇಕು. ಆದರೆ, ಬೀದಿ ದೀಪಗಳ ನಿರ್ವಹಣೆಯ ಟೆಂಡರ್ ಪ್ರಕ್ರಿಯೆಯಲ್ಲಿ ಏಕಕಾಲಕ್ಕೆ ತಾಂತ್ರಿಕ ಹಾಗೂ ಹಣಕಾಸು ಬಿಡ್ ತೆರೆಯಲಾಗಿದೆ. ಜಿಲ್ಲಾಧಿಕಾರಿಗಳ ಅನುಮತಿ ಪಡೆಯದೆ ಗುತ್ತಿಗೆದಾರನಿಗೆ ಕೆಲಸದ ಆದೇಶ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಗಳ ಸ್ಪಷ್ಟ ಉಲ್ಲಂಘನೆ ಯಾಗಿರುವುದನ್ನು ಪತ್ತೆ ಹಚ್ಚಿದ ಜಿಲ್ಲಾಧಿಕಾರಿಯವರು ಇದೀಗ ಎರಡು ಪ್ಯಾಕೇಜ್‌ಗಳಿಗೆ ಮರು ಟೆಂಡರ್ ಕರೆಯುವಂತೆ ಆದೇಶಿಸಿದ್ದಾರೆ. ಇದರಿಂದ ನಗರದ ಹಲವು ಬಡಾವಣೆಗಳಲ್ಲಿ ಬೀದಿ ದೀಪಗಳ ನಿರ್ವಹಣೆ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ನಾಗರಿಕರು ಕಾರ್ಪೊರೇಟರ್‌ಗಳ ವಿರುದ್ಧ ಆರೋಪ ಮಾಡುತ್ತಿದ್ದಾರೆ. ತಮ್ಮದಲ್ಲದ ತಪ್ಪಿಗೆ ನಾವು ನಾಗರಿಕರ ಆಕ್ರೋಶಕ್ಕೆ ಗುರಿಯಾಗುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಾವಳಿ ಉಲ್ಲಂಘಿಸಿದ್ದು ಗಂಭೀರ ಪ್ರಮಾದವಾಗಿದೆ. ಇನ್ನಾದರೂ ಪಾಲಿಕೆ ಆಡಳಿತ ಗೊಂದಲಕ್ಕೆ ಆಸ್ಪದ ನೀಡದೆ ಎಚ್ಚರವಹಿಸಬೇಕು. ತಕ್ಷಣವೇ ಬೀದಿ ದೀಪಗಳ ನಿರ್ವಹಣೆಗೆ ಕ್ರಮಕೈಗೊಳ್ಳಬೇಕು ಎಂದು ಎಚ್.ಸಿ. ಮಾಲತೇಶ್ ಒತ್ತಾಯಿಸಿದ್ದಾರೆ.







