‘ಪೋಷಕರ ಮೋಹಕ್ಕೆ ಸರಕಾರಿ ಶಾಲೆಗಳು ಮುಚ್ಚುಗಡೆ’

ತೀರ್ಥಹಳ್ಳಿ, ಜೂ.11: ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗುವ ಪೋಷಕರ ಮನಸ್ಥಿತಿ ಯಿಂದಾಗಿ ಸರಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದೆ ಎಂದು ಪತ್ರಕರ್ತ ಬಿ.ಗಣಪತಿ ಹೇಳಿದ್ದಾರೆ.
ತಾಲೂಕಿನ ಚಿಟ್ಟೇಬೈಲು ಸಹಿಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಾನಸಿಕ ಅಸ್ವಸ್ಥರಿಗೆ ‘ಆಸರೆ’ ಹಾಗೂ ‘ಶಾಲೆ ಕಡೆ ನಮ್ಮ ನಡೆ’ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಸರಕಾರ ತನ್ನ ಧೋರಣೆಯನ್ನು ಕೈಬಿಟ್ಟು ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಯನ್ನು ತೆರೆದರೆ ಮತ್ತೆ ಸರಕಾರಿ ಶಾಲೆಗಳು ತಮ್ಮ ಗತ ವೈಭವವನ್ನು ಮೆರೆಯಲಿದೆ ಎಂದು ಅಭಿಪ್ರಾಯಿಸಿದರು.
ನಾಯಿಕೊಡೆಗಳಂತೆ ಖಾಸಗಿ ಶಾಲೆಗಳು ತಲೆಯೆತ್ತಲು ಸರಕಾರ ಕಾರಣ ಎಂದ ಅವರು, ರಾಷ್ಟ್ರಕವಿ ಕುವೆಂಪು, ಯು.ಆರ್. ಅನಂತಮೂರ್ತಿ, ಹಾ.ಮಾ. ನಾಯಕ್ ಮುಂತಾದವರು ಓದಿರುವುದು ಸರಕಾರಿ ಶಾಲೆಗಳಲ್ಲಿ ಎಂಬುದು ನಾವು ಅರಿಯಬೇಕು ಎಂದರು.
ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಇಂದಿಗೂ ಮಕ್ಕಳನ್ನು ಶಾಲೆಗೆ ಸೇರಿಸದೆ ಕೂಲಿ ಕೆಲಸಕ್ಕೆ ಸೇರಿಸುವ ಪರಿಪಾಠ ನಡೆಯುತ್ತಿವೆ. ಇಲ್ಲಿ ಅನಕ್ಷರಸ್ಥರ ಸಂಖ್ಯೆಹೆಚ್ಚಿರುವ ಕಾರಣ ಮಕ್ಕಳು ಶಾಲೆಯಿಂದ ದೂರ ಉಳಿಯುವಂತಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ದಿನೇಶ್ ವಹಿಸಿದ್ದರು. ಹೊದಲ ಅರಳಾಪುರ ಗ್ರಾಪಂ ಉಪಾಧ್ಯಕ್ಷ ಚಂದ್ರಶೇಖರ ಹೆಗ್ಡೆ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ತಾಪಂ ಸದಸ್ಯ ಕುಕ್ಕೆ ಪ್ರಶಾಂತ್, ಎಸ್‌ಡಿಎಂಸಿ ಅಧ್ಯಕ್ಷರು, ಒಕ್ಕೂಟದ ಉಪಾಧ್ಯಕ್ಷ ಹಾಗೂ ಕೇಶವಮೂರ್ತಿ, ಉಪ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.







