ವಕೀಲರ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ

ಅಂಕೋಲಾ, ಜೂ. 11: ಸೀಬರ್ಡ್ ನೌಕಾನೆಲೆ ನಿರಾಶ್ರಿತರು ಕಳೆದ 30 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಇವರ ಹೋರಾಟ ಮತ್ತು ಇನ್ನು ಕೆಲವು ಸಾಮಾಜಿಕ ಕಾರ್ಯಕರ್ತರ ಪ್ರಯತ್ನದ ಫಲವಾಗಿ ಸುಪ್ರೀಂ ಕೋರ್ಟ್ ಸೀಬರ್ಡ್ ನೌಕಾನೆಲೆಯವರು ಸ್ವಾಧೀನ ಪಡಿಸಿಕೊಂಡಿದ್ದ ಜಾಗಕ್ಕೆ ಗುಂಟೆಗೆ 11,500 ರೂ.ನಂತೆ ನಿಗದಿ ಮಾಡಿತ್ತು. ಅಂಕೋಲಾದಲ್ಲಿಯೇ ನಡೆಯುತ್ತಿದ್ದ ಈ ವಿಚಾರಣೆ ದಿಢೀರ್ ಕುಮಟಾಕ್ಕೆ ವರ್ಗಾಯಿಸಿರುವುದು ಖಂಡನೀಯ ಎಂದು ವಕೀಲರ ಸಂಘದ ಮಾಜಿ ಅಧ್ಯಕ್ಷ ಉಮೇಶ್ ನಾಯ್ಕ ಹೇಳಿದರು.
ಈ ಕುರಿತು ಸೂಕ್ತ ಕ್ರಮಕೈಗೊಂಡು ಅಂಕೋಲಾದಲ್ಲಿಯೇ ವಿಚಾರಣೆ ನಡೆಯುವಂತೆ ಆಗ್ರಹಿಸಿ ವಕೀಲರ ಸಂಘದವರು ಶುಕ್ರವಾರ ತಹಶೀಲ್ದಾರ್ ವಿ.ಜಿ. ಲಾಂಜೇಕರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಜಲ್ಲಿ ಸೀಬರ್ಡ್ ನೌಕಾನೆಲೆಯವರು ಗುಂಟೆಗೆ 180 ರೂ. ನೀಡಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಹೀಗಾಗಿ ಹೆಚ್ಚಿನ ಪರಿಹಾರಕ್ಕಾಗಿ ನಿರಾಶ್ರಿತರು ಹೋರಾಟ ನಡೆಸುತ್ತಿದ್ದರು. ಕುಮಟಾ ಉಪವಿಭಾಗಾಧಿಕಾರಿ ಅಂಕೋಲಾ ತಹಶೀಲ್ದಾರ್ ಕಚೆೇರಿಗೆ ಆಗಮಿಸಿ ವಿಚಾರಣೆ ನಡೆಸುತ್ತಿದ್ದರು. ಆದರೆ ಶುಕ್ರವಾರ ಅಂಕೋಲಾದಲ್ಲಿ ನಡೆಯಬೇಕಿದ್ದ ವಿಚಾರಣೆಗೆ ಕುಮಟಾಕ್ಕೆ ಬರುವಂತೆ ಹೇಳಿದ ಪರಿಣಾಮ ರೈತರು ಅತಂತ್ರರಾಗಿದ್ದಾರೆ. ಹೀಗಾಗಿ ಕುಮಟಾದಲ್ಲಿ ವಿಚಾರಣೆ ನಡೆಸುವುದನ್ನು ಕೈಬಿಟ್ಟು ಈ ಹಿಂದಿನಂತೆ ಅಂಕೋಲಾದಲ್ಲಿಯೇ ವಿಚಾರಣೆ ನಡೆಯಬೇಕು ಎಂದು ಅವರು ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಕೀಲರ ಸಂಘ ಉಪಾಧ್ಯಕ್ಷ ಗುರು ವಿ. ನಾಯ್ಕ, ನ್ಯಾಯವಾದಿಗಳಾದ ನಾಗಾನಂದ ಐ. ಬಂಟ, ಎನ್.ಎಸ್. ನಾಯಕ, ಎಲ್.ಜಿ. ನಾಯ್ಕ, ವಿ.ವಿ. ಶಾನುಬಾಗ್, ಎಂ.ವಿ. ಕೆರೆಮನೆ, ಪ್ರಕಾಶ ಗೌಡ ಸಕಲಬೇಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.







