ದೇರಳಕಟ್ಟೆ: ಕೊಲ್ಯಶ್ರೀ ಪುಣ್ಯಸ್ಮರಣೆ

ಕೊಣಾಜೆ, ಜೂ.11: 1974ರಲ್ಲಿ ಪ್ರಥಮ ಬಾರಿಗೆ ಅಯ್ಯಪ್ಪ ಮುದ್ರಾಧಾರಣೆ ಧರಿಸಿದ ಕೊಲ್ಯ ಶ್ರೀ ಬಳಿಕ ನಿರಂತರ ಶಬರಿಮಲೆ ಯಾತ್ರೆ ಕೈಗೊಂಡಿದ್ದು ಆ ಕಾಲದಲ್ಲೇ ದಿವ್ಯಜ್ಞಾನ ಹೊಂದಿದ್ದರು, ಮುಂದಕ್ಕೆ ಕೊಲ್ಯ ಶ್ರೀ ಕ್ಷೇತ್ರ ಪವಾಡದ ತಾಣವಾಗಿ ಮಾರ್ಪಡಲಿ ಎಂದು ದೇರಳಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಗುರುಸ್ವಾಮಿ ವಿಶ್ವನಾಥ ಕಾಯರ್‌ಪಳಿಕೆ ಆಶಿಸಿದರು.
ದೇರಳಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಸಮಿತಿ ಹಾಗೂ ಭಕ್ತವೃಂದದಿಂದ ಶುಕ್ರವಾರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಕೊಲ್ಯ ಶ್ರೀ ರಮಾನಂದ ಸ್ವಾಮೀಜಿ ಅವರ ಪುಣ್ಯಸ್ಮರಣೆಯಲ್ಲಿ ಅವರು ಮಾತನಾಡಿದರು.
ಕೊಲ್ಯಶ್ರೀ ಅವರ ಸಂಪೂರ್ಣ ಅನುಗ್ರಹ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮೇಲಿತ್ತು, ಆ ಕಾರಣಕ್ಕೆ ಅವರು ಪ್ರತೀ ವಾರ್ಷಿಕೋತ್ಸವ ಸಂದರ್ಭ ಎಲ್ಲಿದ್ದರೂ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಪೂಜಾ ಕಾರ್ಯದಲ್ಲಿ ನಿರತರಾಗುತ್ತಿದ್ದರು ಎಂದು ನೆನಪಿಸಿಕೊಂಡರು.
ದೇರಳಕಟ್ಟೆ ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ, ಹಿಂದು ಸಮಾಜದ ಬಗ್ಗೆ ಸಿಂಹಘರ್ಜನೆಯಾಗುತ್ತಿದ್ದ ಕೊಲ್ಯ ಶ್ರೀ, ಇತರ ಸಮಾಜವನ್ನು ಸಮಾನವಾಗಿ ಕಾಣುತ್ತಿದ್ದರು. ಅವರು ಹರಿಪಾದ ಸೇರಿದ ಬಳಿಕ ಕೊಲ್ಯ ಶ್ರೀ ಕ್ಷೇತ್ರ ಶೂನ್ಯವಾಗಿದೆಯಾದರೂ, ಅವರು ಅನುಸರಿಸಿದ ನಡೆ, ನುಡಿ ನಮಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ನಿರಂತರ 18 ವರ್ಷ ಶಬರಿಮಲೆ ಯಾತ್ರೆ ಕೈಗೊಂಡಿದ್ದ ಕೊಲ್ಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಜೊತೆ ಇಟ್ಟಿದ್ದ ಪರಿಪೂರ್ಣ ಸಂಬಂಧದ ಫಲವಾಗಿ ಶ್ರೀಗಳೂ ಹರಿಪಾದ ಸೇರಿದ ಸೇರಿದ 18ನೆ ದಿನ ಪುಣ್ಯಸ್ಮರಣೆ ನಡೆಯುತ್ತಿದೆ. ಶ್ರೀಗಳು ಜನಸಂಪರ್ಕ ಹಾಗೂ ದೂರವಾಣಿಯಲ್ಲಿ ಮಾತನಾಡುವವರಾಗಿದ್ದರೆ ಇಂದು ಶ್ರೀ ಕ್ಷೇತ್ರಕ್ಕೆ ಸಾಕಷ್ಟು ಆಸ್ತಿ, ಸಂಪತ್ತು ಇರುತ್ತಿತ್ತು. ವಿವೇಕಾನಂದರು ಶ್ರೇಷ್ಠ ಗುರುವನ್ನು ಹುಡುಕುತ್ತಾ ಹೋಗಿ ಶ್ರೀರಾಮಕೃಷ್ಣ ಪರಮಹಂಸರನ್ನು ಸ್ವೀಕರಿಸಿದಂತೆ, ಕೊಲ್ಯ ಶ್ರೀಗಳು ಅದೇ ಮಾದರಿ ಅನುಸರಿಸಿದರು, ಆದರೆ ಅವರಿಗೆ ಶ್ರೇಷ್ಠ ಶಿಷ್ಯರು ಸಿಗದ ಕಾರಣ ದೀಕ್ಷೆ ನೀಡಲಿಲ್ಲ ಎಂದು ಧಾರ್ಮಿಕ ಮುಖಂಡ ಕೃಷ್ಣ ಶಿವಕೃಪಾ ಕುಂಜತ್ತೂರು ತಿಳಿಸಿದರು.
ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಅಡ್ಯಂತಾಯ ಅಧ್ಯಕ್ಷತೆ ವಹಿಸಿದ್ದರು.
ಅಧ್ಯಕ್ಷ ಸೀತಾರಾಮ ಶೆಟ್ಟಿ, ಸ್ವಾಮಿಗಳ ಪೂರ್ವಾಶ್ಮದ ಒಡನಾಡಿಗಳಾದ ಎಂ.ಪ್ರಕಾಶ್ ರೈ ದೆಪ್ಪುಣಿಗುತ್ತು, ಚಂದ್ರಶೇಖರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಶೆಟ್ಟಿ ಪಜೀರುಗುತ್ತು ಕಾರ್ಯಕ್ರಮ ನಿರೂಪಿಸಿದರು.







