ಸೌದಿ: ಬಂಧಿತರಲ್ಲಿ 19 ಭಾರತೀಯರು
ಭಯೋತ್ಪಾದನೆಯ ಆರೋಪ
ರಿಯಾದ್, ಜೂ. 11: ಭಯೋತ್ಪಾದನೆಯ ಆರೋಪದ ಮೇಲೆ ಸೌದಿಯಲ್ಲಿ ಬಂಧಿತರಾಗಿರುವ 823 ವಿದೇಶೀಯರಲ್ಲಿ 19 ಮಂದಿ ಭಾರತೀಯರು ಸೇರಿದ್ದಾರೆ. ಉಳಿದವರಲ್ಲಿ 29 ಮಂದಿ ಪಾಕಿಸ್ತಾನೀಯರು ಹಾಗೂ 8 ಮಂದಿ ಅಮೆರಿಕನ್ನರು, ಮೂವರು ಯುರೋಪಿಯನ್ನರು, ಇಬ್ಬರು ಇಂಡೋನೇಷ್ಯ ನಾಗರಿಕರು, 6 ಮಂದಿ ಫಿಲಿಪ್ಪೀನೀಯರು ಹಾಗೂ 18 ಮಂದಿ ಆಫ್ರಿಕನ್ನರು ಸೇರಿದ್ದಾರೆ. ಸೌದಿ ಜೈಲುಗಳಲ್ಲಿ ಕೊಳೆಯುತ್ತಿರುವ 4,409 ಸೌದಿ ನಾಗರಿಕರೊಂದಿಗೆ ಈ ವಿದೇಶೀಯರೂ ಈಗ ಸೇರಿಕೊಂಡಿದ್ದಾರೆ.
ಉಗ್ರವಾದ ಆರೋಪದ ಮೇಲೆ ಬಂಧಿತರಾಗಿರುವ ಕೆಲವು ವಿದೇಶೀಯರು ಅಪರಾಧಿಗಳೆಂದು ನ್ಯಾಯಾಲಯದಿಂದ ತೀರ್ಪು ಬಂದಿದ್ದರೆ, ಇನ್ನುಳಿದವರು ವಿಚಾರಣೆಯೆದುರಿಸುತ್ತಿದ್ದಾರೆ. ‘‘ಉಗ್ರ ಸಂಘಟನೆಗಳಿಗೆ ಹಣ ವರ್ಗಾವಣೆ ಮಾಡಲು ಉಪಯೋಗಿಸಲಾಗುತ್ತಿದ್ದ 117 ಬ್ಯಾಂಕ್ ಖಾತೆಗಳನ್ನು ಸೌದಿ ಸರಕಾರ ಮುಟ್ಟುಗೋಲು ಹಾಕಿದೆ ಹಾಗೂ ಚ್ಯಾರಿಟೇಬಲ್ ಸಂಸ್ಥೆಗಳ ನಿಧಿಗಳನ್ನು ಉಗ್ರವಾದ ಸಂಘಟನೆಗಳಿಗೆ ದುರುಪಯೋಗ ಪಡಿಸುವುದನ್ನು ತಡೆಯಲು ಸರಕಾರ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದೆ’’ಎಂದು ಆಂತರಿಕ ಸಚಿವಾಲಯದ ವಕ್ತಾರ ಮೇಜರ್ ಜನರಲ್ ಮನ್ಸೂರ್ ಅಲ್-ತುರ್ಕಿ ಕಾನ್ಫರೆನ್ಸ್ ಕಾಲ್ ಮೂಲಕ ವಾಷಿಂಗ್ಟನ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಉಗ್ರ ದಾಳಿಗಳಲ್ಲಿ 200 ನಾಗರಿಕರು ಹಾಗೂ ಪೊಲೀಸರು ಮೃತಪಟ್ಟಿದ್ದರೆ, 2015ರಿಂದ 2,800 ಶಂಕಿತರನ್ನು ಬಂಧಿಸಲಾಗಿದೆ ಎಂದು ಹೇಳಿದ ಅವರು, ಸೌದಿ ಅರೇಬಿಯ ಎಲ್ಲಾ ಉಗ್ರವಾದ ಸಂಬಂಧಿ ಚಟುವಟಿಕೆಗಳಿಗೆ ಹಾಗೂ ಉಗ್ರವಾದ ಪ್ರೋತ್ಸಾಹಿಸುವವರಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ಜಾರಿಗೊಳಿಸಿದೆ ಎಂದು ವಿವರಿಸಿದರು. ಸೌದಿಯಲ್ಲಿ ಬಂಧಿತರಾಗಿರುವ ಭಾರತೀಯರಲ್ಲಿ ಒಬ್ಬ ದೋಷಿಯೆಂದು ನ್ಯಾಯಾಲಯ ತೀರ್ಮಾನಿಸಿದ್ದರೆ, 14 ಮಂದಿ ವಿಚಾರಣೆಯೆದುರಿಸುತ್ತಿದ್ದಾರೆ.





