ಸೈಯದ್ ಮುಶ್ತಾಕ್ ಅಲಿ ಟ್ರೋಫಿ ರೂಪುರೇಷೆ ಬದಲಿಸಲು ಬಿಸಿಸಿಐ ನಿರ್ಧಾರ
ಮುಂಬೈ, ಜೂ.10: ಭಾರತದ ದೇಶೀಯ ಟ್ವೆಂಟಿ-20 ಚಾಂಪಿಯನ್‌ಶಿಪ್ ಸೈಯದ್ ಮುಶ್ತಾಕ್ ಅಲಿ ಟ್ರೋಫಿ ಟೂರ್ನಿಯನ್ನು ಇನ್ನಷ್ಟು ಆಕರ್ಷಕವನ್ನಾಗಿಸಲು ಹೆಜ್ಜೆ ಇಟ್ಟಿರುವ ಬಿಸಿಸಿಐ ಅಂತರ್ ರಾಜ್ಯಗಳ ಬದಲಿಗೆ ಅಂತರ್-ವಲಯ ಸ್ಪರ್ಧಾವಳಿಯನ್ನಾಗಿ ಪರಿವರ್ತಿಸಲು ನಿರ್ಧರಿಸಿದೆ.
ಸೈಯದ್ ಮುಶ್ತಾಕ್ ಅಲಿ ಟ್ರೋಫಿ ಪ್ರಸ್ತುತ ಅಂತರ್-ರಾಜ್ಯ ಮಟ್ಟದ ಟೂರ್ನಿಯಾಗಿದ್ದು ನಾಲ್ಕು ಗುಂಪಿನ ಅಗ್ರ 2 ತಂಡಗಳು ಎರಡನೆ ಸುತ್ತಿಗೇರುತ್ತವೆ. ತಂಡಗಳನ್ನು ಮತ್ತೆ 2 ಗುಂಪುಗಳಾಗಿ ವಿಭಜಿಸಲಾಗುತ್ತದೆ. ಈ ಗುಂಪಿನಲ್ಲಿ ಜಯ ಸಾಧಿಸುವ ತಂಡ ಫೈನಲ್‌ಗೆ ತಲುಪಲಿದೆ.
ಆದರೆ, ಇದೀಗ ರಾಜ್ಯ ತಂಡಗಳನ್ನು ವಲಯಗಳಾಗಿ ವಿಭಜಿಸಲಾಗುತ್ತದೆ. ಪ್ರತಿ ವಲಯದಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರ ಹೊಸ ವಲಯ ತಂಡದಲ್ಲಿ ಸ್ಥಾನ ಪಡೆದು ಇತರ ತಂಡದ ವಿರುದ್ಧ ಆಡಲಿದ್ದಾರೆ. ಈಗ ಐದು ಪ್ರಮುಖ ವಲಯಗಳಾದ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಕೇಂದ್ರ ವಲಯದ ಜೊತೆಗೆ ಆರನೆ ತಂಡ ಸೇರ್ಪಡೆಯಾಗಲಿದೆ. ಈ ಹೊಸ ತಂಡದಲ್ಲಿ ಎಲ್ಲ ವಲಯದ ಶ್ರೇಷ್ಠ ಆಟಗಾರರು ಭಾಗವಹಿಸಲಿದ್ದಾರೆ.
‘‘ನಾವು ರಣಜಿ ಟ್ರೋಫಿಯನ್ನು ತಟಸ್ಥ ಸ್ಥಳದಲ್ಲಿ ನಡೆಸಲು ನಿರ್ಧರಿಸಿದ್ದೇವೆ.ದುಲೀಪ್ ಟ್ರೋಫಿಯಲ್ಲಿ ಪಿಂಕ್ ಚೆಂಡು ಬಳಸುವ ಯೋಚನೆಯಿದೆ. ಮುಶ್ತಾಕ್ ಅಲಿ ಟ್ರೋಫಿಯನ್ನು ವಲಯ ಮಟ್ಟವನ್ನಾಗಿಸುವ ಮೂಲಕ ಇನ್ನಷ್ಟು ಸ್ಪರ್ಧಾತ್ಮಕವಾಗಿಸಲು ಬಯಸಿದ್ದೇವೆ. ದೇಶೀಯ ಕ್ರಿಕೆಟ್‌ನ ಗುಣಮಟ್ಟ ಅಭಿವೃದ್ದಿಪಡಿಸುವುದು ನಮ್ಮ ಮುಖ್ಯ ಗುರಿ. ಹಿರಿಯ ಅಧಿಕಾರಿಗಳು ಈ ಎಲ್ಲ ಪ್ರಕ್ರಿಯೆ ನಡೆಸಲಿದ್ದಾರೆ’’ ಎಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹೇಳಿದ್ದಾರೆ.







