ಇಂದಿರಾಗಾಂಧಿ ಮುಕ್ತ ವಿವಿಯಿಂದ ಆರ್‌ಟಿಐ ಕೋರ್ಸ್
ಹೊಸದಿಲ್ಲಿ, ಜೂ.11: ಜನರಿಗೆ ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮತ್ತು ಜನರನ್ನು ಈ ಬಗ್ಗೆ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆಯಲು ಉತ್ತೇಜಿಸುವ ಕ್ರಮವಾಗಿ ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾನಿಲಯ, ಮಾಹಿತಿ ಹಕ್ಕು ಕಾಯ್ದೆ ವಿಚಾರದಲ್ಲಿ ಡಿಪ್ಲೊಮಾ ಕೋರ್ಸ್ ಆರಂಭಿಸಲು ನಿರ್ಧರಿಸಿದೆ.
ಕೇಂದ್ರ ಮಾಹಿತಿ ಆಯೋಗ ಈ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯ ಜೊತೆ ಕೈಜೋಡಿಸಿ, ಕೋರ್ಸ್‌ಗಳ ಪಠ್ಯವನ್ನು ರೂಪಿಸಲು ಸಹಕರಿಸಲಿದೆ. ಇದನ್ನು ಎಲ್ಲ ಕೇಂದ್ರ ಸರಕಾರಿ ನೌಕರರಿಗೆ ಕಡ್ಡಾಯಗೊಳಿಸಲು ಕೂಡಾ ಸಿಐಸಿ ನಿರ್ಧರಿಸಿದೆ.
ಜನರಿಗೆ ಆರ್‌ಟಿಐ ಮಹತ್ವ ತಿಳಿದಿದ್ದರೂ, ಅದನ್ನು ಹೇಗೆ ಪಡೆಯಬೇಕು ಎಂಬ ಬಗ್ಗೆ ವಿಸ್ತೃತ ಜ್ಞಾನ ಇಲ್ಲ. ಇದರ ತಾಂತ್ರಿಕ ಅಂಶಗಳೇನು, ಪ್ರಶ್ನೆಗಳನ್ನು ಹೇಗೆ ಕೇಳಬೇಕು, ಮೇಲ್ಮನವಿಯನ್ನು ಹೇಗೆ ಹಾಗೂ ಎಲ್ಲಿ ಸಲ್ಲಿಸಬೇಕು ಎಂಬ ಬಗ್ಗೆ ಜ್ಞಾನ ಇಲ್ಲ ಎಂದು ವಿಶ್ವವಿದ್ಯಾನಿಲಯದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ನಾವು ಕೋರ್ಸ್ ಆರಂಭಿಸಲು ನಿರ್ಧರಿಸಿದ್ದು, ಸಿಐಸಿಯನ್ನು ಸಂಪರ್ಕಿಸಿದ್ದು, ಕೋರ್ಸ್‌ನ ಪಠ್ಯವಿಷಯ ನಿಗದಿಪಡಿಸಲು ಮತ್ತಿತರ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಇಂದಿರಾಗಾಂಧಿ ಮುಕ್ತ ವಿವಿಯ ಸ್ಕೂಲ್ ಆಫ್ ಸೋಶಿಯಲ್ ಸೈನ್ಸ್‌ನ ಸಾರ್ವಜನಿಕ ಆಡಳಿತ ವಿಭಾಗದ ಸಿಬ್ಬಂದಿ ಪಠ್ಯ ಸೃಷ್ಟಿ ಮತ್ತಿತರ ವಿಷಯಗಳ ಬಗ್ಗೆ ಕಾರ್ಯನಿರತರಾಗಿದ್ದಾರೆ ಎಂದು ಮೂಲಗಳು ವಿವರಿಸಿವೆ.





