ವಿಮಾನ ಪ್ರಯಾಣಿಕರಿಗೆ ಬಂಪರ್ ಕೊಡುಗೆ
ಹೊಸದಿಲ್ಲಿ, ಜೂ.11: ಐದು ಕೆ.ಜಿ.ವರೆಗೆ ಹೆಚ್ಚುವರಿ ಬ್ಯಾಗೇಜ್ ಒಯ್ಯುವುದಕ್ಕೆ ವಿಧಿಸುವ ಶುಲ್ಕದಲ್ಲಿ ಭಾರೀ ಕಡಿತ ಹಾಗೂ ವಿಮಾನಯಾನ ಸಂಸ್ಥೆಯು ಪ್ರಯಾಣಿಕರಿಗೆ ವಿಮಾನ ಏರಲು ನಿರಾಕರಿಸಿದಲ್ಲಿ ನೀಡಲಾಗುವ ಪರಿಹಾರಧನದ ಮೊತ್ತದಲ್ಲಿ ಭಾರೀ ಹೆಚ್ಚಳ ಸೇರಿದಂತೆ ಪ್ರಯಾಣಿಕರಿಗೆ ಭರಪೂರ ಕೊಡುಗೆಗಳನ್ನು ಕೇಂದ್ರ ನಾಗರಿಕ ವಾಯುಯಾನ ಸಚಿವಾಲಯವು ಶನಿವಾರ ಘೋಷಿಸಿದೆ. ವಿಕಲಾಂಗರು ಹಾಗೂ ರೋಗಿಗಳಿಗೆ ವಿಮಾನ ಹಾಗೂ ವಿಮಾನನಿಲ್ದಾಣಗಳಲ್ಲಿ ಕೆಲವು ವಿಶೇಷ ಸೌಲಭ್ಯಗಳನ್ನು ಒದಗಿಸುವುದಾಗಿಯೂ ಅದು ತಿಳಿಸಿದೆ.
ಭಾರತದಿಂದ ಕಾರ್ಯನಿರ್ವಹಿಸುವ ಅಂತರ್‌ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು, ಟಿಕೆಟ್ ರದ್ದತಿಗಾಗಿ ಪ್ರಯಾಣಿಕರಿಗೆ ವಿಧಿಸುವ ಶುಲ್ಕದ ಮೊತ್ತವು ಟಿಕೆಟ್‌ನ ಮೂಲ ದರಕ್ಕಿಂತ ಹೆಚ್ಚಾಗಿರಕೂಡದು. ಕೆಲವು ಪ್ರಕರಣಗಳಲ್ಲಿ ವಿಮಾನಯಾನ ಸಂಸ್ಥೆಗಳು ಟಿಕೆಟ್ ರದ್ದತಿಗಾಗಿ, ಮೂಲ ಟಿಕೆಟ್ ದರಕ್ಕಿಂತಲೂ ಅಧಿಕ ಶುಲ್ಕವನ್ನು ವಿಧಿಸುತ್ತಿರುವ ಹಿನ್ನೆಲೆಯಲ್ಲಿ ನಾಗರಿಕ ವಾಯುಯಾನ ಇಲಾಖೆ (ಡಿಜಿಸಿಎ)ಯ ಈ ಕ್ರಮವನ್ನು ಕೈಗೊಂಡಿದೆ.
ವಿಮಾನನಿಲ್ದಾಣ ಅಭಿವೃದ್ಧಿ ಶುಲ್ಕ ಅಥವಾ ಪ್ರಯಾಣಿಕ ಸೇವಾ ಶುಲ್ಕ ಸೇರಿದಂತೆ ರದ್ದು ಗೊಂಡ ಟಿಕೆಟ್‌ನಲ್ಲಿ ನಮೂದಿಸಲಾದ ಎಲ್ಲಾ ರೀತಿಯ ಶಾಸನಾತ್ಮಕ ತೆರಿಗೆಗಳನ್ನು ಗ್ರಾಹಕನಿಗೆ ಮರುಪಾವತಿಸುವಂತೆ ಸರಕಾರವು ಏರ್‌ಲೈನ್ಸ್ ಕಂಪೆನಿಗಳಿಗೆ ಸೂಚಿಸಿದೆ. ಅಂತರ್‌ದೇಶೀಯ ವಿಮಾನಯಾನದಲ್ಲಿ 15 ದಿನಗಳೊಳಗೆ ಹಾಗೂ ಅಂತಾರಾಷ್ಟ್ರೀಯ ಯಾನದಲ್ಲಿ 30 ಕೆಲಸದ ದಿನಗಳೊಳಗೆ ಮರುಪಾವತಿ ಪ್ರಕ್ರಿಯೆ ಪೂರ್ಣಗೊಳ್ಳಬೇಕೆಂದು ಅದು ಆದೇಶಿಸಿದೆ.
‘ದಿ ಹಿಂದೂ’ ಆಂಗ್ಲ ದಿನಪತ್ರಿಕೆಯು ಈ ವಾರದ ಆರಂಭದಲ್ಲಿ ಪ್ರಕಟಿಸಿದ ವರದಿಯೊಂದರ ಪ್ರಕಾರ, ಜೂನ್ 15 ರಿಂದ ವಿಮಾನದಲ್ಲಿ 5 ಕೆ.ಜಿ. ಹೆಚ್ಚುವರಿ ಬ್ಯಾಗೇಜ್ ಒಯ್ಯುವ ಪ್ರಯಾಣಿಕರಿಗೆ ಏರ್‌ಲೈನ್ಸ್ ಸಂಸ್ಥೆಗಳು ಕೇವಲ 100 ರೂ.ಹೆಚ್ಚುವರಿ ಶುಲ್ಕವನ್ನು ವಿಧಿಸಬಹುದಾಗಿದೆ. ಪ್ರಸ್ತುತ ಪ್ರಯಾಣಿಕರು 15 ಕೆ.ಜಿ. ಲಗ್ಗೇಜನ್ನು ಉಚಿತವಾಗಿ ಕೊಂಡೊಯ್ಯಬಹುದಾಗಿದೆ. ಆದರೆ ಸರಕಾರಿ ಸ್ವಾಮ್ಯದ ಏರ್‌ಇಂಡಿಯಾ ಹಾಗೂ ಇಂಡಿಯನ್ ಏರ್‌ಲೈನ್ಸ್‌ಗಳಲ್ಲಿ ಪ್ರ.ಯಾಣಿಕರು ಯಾವುದೇ ಶುಲ್ಕವಿಲ್ಲದೆ 25 ಕೆ.ಜಿ. ಲಗ್ಗೇಜನ್ನು ಒಯ್ಯಬಹುದಾಗಿದೆ. ಆದರೆ ಖಾಸಗಿ ಏರ್‌ಲೈನ್ಸ್ ಸಂಸ್ಥೆಗಳು ತಮ್ಮ ವಿಮಾನಗಳಲ್ಲಿ ಪ್ರತಿ ಕೆ.ಜಿ. ಹೆಚ್ಚುವರಿ ಲಗ್ಗೇಜ್‌ಗೆ 250ರಿಂದ 350 ರೂ. ಶುಲ್ಕವನ್ನು ವಿಧಿಸುತ್ತವೆ.
ವಿಮಾನವೇರಲು ನಿರಾಕರಿಸಿದಲ್ಲಿ ಏರ್‌ಲೈನ್ ಸಂಸ್ಥೆಗಳಿಗೆ ದಂಡ
ವಿಮಾನದ ನಿಗದಿತ ನಿರ್ಗಮನ ಸಮಯಕ್ಕೆ ಮೊದಲು ವಿಮಾನನಿಲ್ದಾಣದಲ್ಲಿ ಹಾಜರಿದ್ದ ಪ್ರಯಾಣಿಕರಿಗೆ, ಏರ್‌ಲೈನ್ಸ್ ಸಂಸ್ಥೆಯು ವಿಮಾನವೇರಲು ಅನುಮತಿ ನಿರಾಕರಿಸಿದಲ್ಲಿ ಅವರು ಮೂಲ ಟಿಕೆಟ್ ದರ ಹಾಗೂ ಟಿಕೆಟ್‌ನಲ್ಲಿ ನಮೂದಿಸಲಾದ ಇಂಧನ ಶುಲ್ಕದ ಎರಡು ಪಟ್ಟು ಅಧಿಕ ಮೊತ್ತವನ್ನು 10 ಸಾವಿರ ರೂ. ಮೀರದಂತೆ ಪರಿಹಾರವಾಗಿ ನೀಡಬೇಕಾಗುತ್ತದೆ. ಏರ್‌ಲೈನ್ಸ್ ಸಂಸ್ಥೆಯು ಪರಿಹಾರದ ಮೊತ್ತವನ್ನು ಮುಂದಿನ ವಿಮಾನಯಾನದ 24 ತಾಸುಗಳೊಳಗೆ ನೀಡಬೇಕಾಗುತ್ತದೆ. ಒಂದು ವೇಳೆ ಪ್ರಯಾಣಿಕರಿಗೆ ಅವರು ಪ್ರಯಾಣಿಸಬೇಕಿದ್ದ ವಿಮಾನವು ನಿರ್ಗಮಿಸಿದ 24 ತಾಸುಗಳ ಬಳಿಕ ಪರ್ಯಾಯ ವಿಮಾನಯಾನದ ವ್ಯವಸ್ಥೆ ಮಾಡಿದಲ್ಲಿ, ಆಗ ಅವರಿಗೆ ಏರ್‌ಲೈನ್ಸ್ ಸಂಸ್ಥೆಗಳು ಟಿಕೆಟ್‌ನ ಮೂಲದರ ಹಾಗೂ ವಿಮಾನ ಇಂಧನ ಶುಲ್ಕದ ನಾಲ್ಕು ಪಟ್ಟು ಅಧಿಕ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ಆದರೆ ಪ್ರಯಾಣಿಕರಿಗೆ ಅವರು ಪ್ರಯಾಣಿಸ ಬೇಕಿದ್ದ ವಿಮಾನವು ನಿರ್ಗಮಿಸಿದ ಒಂದು ತಾಸಿನೊಳಗೆ ಬೇರೊಂದು ವಿಮಾನದಲ್ಲಿ ಪ್ರಯಾಣಿಸಲು ವ್ಯವಸ್ಥೆ ಮಾಡಿದಲ್ಲಿ, ಆಗ ಅವರಿಗೆ ಪರಿಹಾರವನ್ನು ನೀಡಬೇಕಾಗಿಲ್ಲ.
ಭಿನ್ನ ಸಾಮರ್ಥ್ಯದ ಪ್ರಯಾಣಿಕರು
ಆ್ಯಂಬುಲಿಫ್ಟ್ (ರೋಗಿಗಳು, ಭಿನ್ನಸಾಮರ್ಥ್ಯ ದವರನ್ನು ವಿಮಾನ ಹತ್ತಿಸಲು ಬಳಸುವ ವಾಹನ) ಹಾಗೂ ಏರೋಬ್ರಿಡ್ಜ್ ಸೌಲಭ್ಯಗಳಿಲ್ಲದ ವಿಮಾನನಿಲ್ದಾಣಗಳಲ್ಲಿ ಮೆಟ್ಟಲುಗಳಲ್ಲಿಯೂ ಎಳೆದೊಯ್ಯಬಹುದಾದ ಗಾಲಿಕುರ್ಚಿಯನ್ನು ಭಿನ್ನಸಾಮರ್ಥ್ಯದ ಪ್ರಯಾಣಿಕರಿಗೆ ಒದಗಿಸುವ ಪ್ರಸ್ತಾಪವನ್ನು ಕೇಂದ್ರ ಸರಕಾರದ ಮುಂದಿಟ್ಟಿದೆ.







