ಕೋಪಾ ಅಮೆರಿಕ ಟೂರ್ನಿ: ಮೆಸ್ಸಿ ಹ್ಯಾಟ್ರಿಕ್, ಅರ್ಜೆಂಟೀನ ಕ್ವಾರ್ಟರ್‌ಫೈನಲ್‌ಗೆ

ಕ್ಯಾಲಿಫೋರ್ನಿಯ, ಜೂ.11: ಲಿಯೊನೆಲ್ ಮೆಸ್ಸಿ ಬಾರಿಸಿದ ಹ್ಯಾಟ್ರಿಕ್ ಗೋಲು ಸಹಾಯದಿಂದ ಅರ್ಜೆಂಟೀನ ತಂಡ ಪನಮಾ ತಂಡವನ್ನು 5-0 ಗೋಲುಗಳ ಅಂತರದಿಂದ ಮಣಿಸಿ ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಪಡೆದಿದೆ.
ಶನಿವಾರ ಇಲ್ಲಿ ನಡೆದ ‘ಡಿ’ ಗುಂಪಿನ ಪಂದ್ಯದಲ್ಲಿ ಸುಲಭ ಜಯ ಸಾಧಿಸಿದ ಅರ್ಜೆಂಟೀನದ ಪರ ಮೆಸ್ಸಿ ಹ್ಯ್ರಾಟ್ರಿಕ್ ಗೋಲುಗಳನ್ನು(68ನೆ ನಿಮಿಷ, 78ನೆ ನಿಮಿಷ ಹಾಗೂ 87ನೆ ನಿಮಿಷ) ಬಾರಿಸಿದರು. ನಿಕೊಲಸ್ ಒಟಮೆಂಡಿ (7ನೆ ನಿಮಿಷ) ಹಾಗೂ ಸರ್ಜಿಯೊ ಅಗುರೊ(90ನೆ ನಿಮಿಷ) ತಲಾ ಒಂದು ಗೋಲು ಬಾರಿಸಿದರು.
ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮೆಸ್ಸಿ ಬಾರಿಸಿದ 4ನೆ ಹ್ಯಾಟ್ರಿಕ್ ಗೋಲು ಇದಾಗಿದೆ. 53ನೆ ಗೋಲು ಬಾರಿಸಿದ ಮೆಸ್ಸಿ ಅರ್ಜೆಂಟೀನದ ಪರ ಗರಿಷ್ಠ ಗೋಲು ಬಾರಿಸಿದ್ದ ಗ್ಯಾಬ್ರಿಯೆಲ್ ಬೌಟಿಸ್ಟಾ ದಾಖಲೆ ಮುರಿಯಲು ಇನ್ನು 3 ಗೋಲುಗಳ ಅಗತ್ಯವಿದೆ.
ನಿಕೊಲಸ್ 7ನೆ ನಿಮಿಷದಲ್ಲಿ ಅರ್ಜೆಂಟೀನದ ಪರ ಗೋಲು ಖಾತೆ ತೆರೆದರು. 90ನೆ ನಿಮಿಷದಲ್ಲಿ ಗೋಲು ಬಾರಿಸಿದ ಅಗುರೊ 5-0 ಅಂತರದ ಗೆಲುವಿಗೆ ನೆರವಾದರು. ಈ ನಡುವೆ ಮೆಸ್ಸಿ ಹ್ಯಾಟ್ರಿಕ್ ಗೋಲು ಬಾರಿಸಿ ಮ್ಯಾಜಿಕ್ ಮಾಡಿದರು.
ಬೆನ್ನುನೋವಿನಿಂದಾಗಿ ಟೂರ್ನಿಯಲ್ಲಿ ಈ ತನಕ ಆಡದೇ ಉಳಿದಿದ್ದ ಮೆಸ್ಸಿ ಪಂದ್ಯದ 61ನೆ ನಿಮಿಷದಲ್ಲಿ ಅಗಸ್ಟೊ ಫೆರ್ನಾಂಡಿಸ್ ಬದಲಿ ಆಟಗಾರನಾಗಿ ಕಣಕ್ಕಿಳಿದರು. ಮೈದಾನಕ್ಕೆ ಇಳಿದ ತಕ್ಷಣವೇ ಮಿಂಚಿನ ಸಂಚಲನ ಮೂಡಿಸಿದ ಮೆಸ್ಸಿ 68ನೆ ನಿಮಿಷದಲ್ಲಿ ಗೋಲು ಬಾರಿಸಿದರು. ಇದು ಮೆಸ್ಸಿ ಟೂರ್ನಿಯಲ್ಲಿ ಬಾರಿಸಿದ ಮೊದಲ ಗೋಲಾಗಿತ್ತು.
78ನೆ ನಿಮಿಷದಲ್ಲಿ ಫ್ರೀ-ಕಿಕ್‌ನ ಮೂಲಕ ಗೋಲು ಬಾರಿಸಿದ ಮೆಸ್ಸಿ ತಂಡಕ್ಕೆ 3-0 ಮುನ್ನಡೆ ಒದಗಿಸಿಕೊಟ್ಟರು. 87ನೆ ನಿಮಿಷದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದ ಮೆಸ್ಸಿ ಅರ್ಜೆಂಟೀನ ತಂಡ ಪನಾಮ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಲು ನೆರವಾದರು.
ಟೂರ್ನಿಯ ಮೊದಲ ಪಂದ್ಯದಲ್ಲಿ ಚಿಲಿ ತಂಡದ ವಿರುದ್ಧ 2-1 ಗೋಲುಗಳ ಅಂತರದಿಂದ ಜಯ ಸಾಧಿಸಿದ್ದ ಅರ್ಜೆಂಟೀನ ಡಿ ಗುಂಪಿನಲ್ಲಿ ಇನ್ನೂ ಒಂದು ಪಂದ್ಯ ಆಡಲು ಬಾಕಿ ಇರುವಾಗಲೇ ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಪಡೆದಿದೆ. ಡಿ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿರುವ ಅರ್ಜೆಂಟೀನ ಮುಂದಿನ ಸುತ್ತಿನಲ್ಲಿ ದುರ್ಬಲ ಬೊಲಿವಿಯಾ ತಂಡವನ್ನು ಎದುರಿಸಲಿದೆ.







