ದಿ ಗ್ರೇಟೆಸ್ಟ್ ಅಲಿಗೆ ಐತಿಹಾಸಿಕ ವಿದಾಯ

ವಿಶ್ವದೆಲ್ಲೆಡೆಯಿಂದ ಬಂದ ಲಕ್ಷಾಂತರ ಜನರು, ಗಣ್ಯರ ಉಪಸ್ಥಿತಿ
ಲೂವಿಸ್‌ವಿಲ್ಲೆ, ಜೂ.11: ವಿಶ್ವ ಕಂಡ ಸರ್ವಶ್ರೇಷ್ಠ ಬಾಕ್ಸರ್, ಮಾನವತಾವಾತದಿ ಮುಹಮ್ಮದ್ ಅಲಿ ಅವರ ಅಂತಿಮ ವಿದಾಯಕ್ಕೆ ವಿಶ್ವದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಅಸಂಖ್ಯಾತ ಅಭಿಮಾನಿಗಳು, ರಾಜಕಾರಣಿಗಳು ಹಾಗೂ ಕ್ರೀಡಾ ದಿಗ್ಗಜರು ಸಾಕ್ಷಿಯಾದರು. ತತ್ವಗಳಿಗೆ ಬದ್ಧವಾಗಿದ್ದ ಅಪೂರ್ವ ಕ್ರೀಡಾಪಟು ಎಂದೇ ವಿಶ್ವಾದ್ಯಂತ ಹೊಗಳಿಕೆಗೆ ಪಾತ್ರವಾಗಿದ್ದ ಅವರಿಗೆ ಶುಕ್ರವಾರ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು.
18 ಕಾರುಗಳಲ್ಲಿ 37 ಕಿಲೋಮೀಟರ್ ಅಂತಿಮ ಯಾತ್ರೆ ನಡೆಸಿದ್ದು, ಇದು ಅಮೆರಿಕದ ಇತಿಹಾಸದಲ್ಲೇ ಸುದೀರ್ಘ ಯಾತ್ರೆ ಎನಿಸಿದೆ. ಜನಾಂಗೀಯ ತಾರತಮ್ಯವನ್ನು ವಿರೋಧಿಸಿ ಅಲಿ ಅವರು ಇಸ್ಲಾಮ್ ಧರ್ಮಕ್ಕೆ ಮತಾಂತರವಾಗಿದ್ದರು. ವಿಯೆಟ್ನಾಂ ಯುದ್ಧದ ಸಂದರ್ಭದಲ್ಲಿ ಅಮೆರಿಕದ ಸೇನಾ ಸೇವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ತಮ್ಮ ವೃತ್ತಿಜೀವನದ ಪ್ರಮುಖ ಮೂರು ವರ್ಷಗಳನ್ನು, ಕಳೆದುಕೊಳ್ಳಬೇಕಾಯಿತು.
ವಾರದ ಹಿಂದೆ 74ನೆ ವಯಸ್ಸಿನಲ್ಲಿ ನಿಧನರಾದ ಅವರು ಅಮೆರಿಕದ ಅತ್ಯಂತ ಗೌರವ ಪಡೆದ ಕ್ರೀಡಾಪಟು ಎನಿಸಿಕೊಂಡಿದ್ದಾರೆ. ಲೂವಿಸ್‌ವಿಲ್ಲೆಯಲ್ಲಿ ಅಲಿಯವರ ಅಂತಿಮ ದರ್ಶನಕ್ಕೆ ಆಗಮಿಸಿದ್ದ ಲಕ್ಷಾಂತರ ಅಭಿಮಾನಿಗಳು ಅಲಿ.. ಅಲಿ.. ಎನ್ನುತ್ತಾ ಮೆರವಣಿಗೆಯುದ್ದಕ್ಕೂ ತಮ್ಮ ನಾಯಕನನ್ನು ನೆನಪಿಸಿ ಕಂಬನಿ ಮಿಡಿಯುತ್ತಿದ್ದರು.
ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆದ ಬಳಿಕ ಅವರು ಬಾಲ್ಯವನ್ನು ಕಳೆದ ಮನೆಯಲ್ಲಿ ಅಲ್ಪಕಾಲ ತಂಗಿತು. ಖಾಸಗಿ ಅಂತ್ಯಸಂಸ್ಕಾರ ಸ್ಥಳದಲ್ಲಿ ಅಂತಿಮ ವಿಧಿವಿಧಾನ ನಡೆಸಲಾಯಿತು.ಅವರ ಸ್ಮರಣಶಿಲೆಯಲ್ಲಿ ಕೇವಲ ಅಲಿ ಎಂದು ಹೆಸರಿಸಲಾಗಿದೆ. ಮೆರವಣಿಗೆಯುದ್ದಕ್ಕೂ ಲಕ್ಷಾಂತರ ಅಭಿಮಾನಿಗಳು ಪುಷ್ಪವೃಷ್ಟಿ ಸುರಿಸುತ್ತಾ ಸಾಗಿದರು. ಅಲಿ ಅವರ ಅಂತ್ಯ ಸಂಸ್ಕಾರ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ಖ್ಯಾತನಾಮರಾದ ಬಿಲ್ಲಿ ಕ್ರಿಸ್ಟಲ್, ವಿಲ್ ಸ್ಮಿತ್ ಹಾಗೂ ಮೈಕ್ ಟೈಸನ್ ಮತ್ತಿತರರು ಭಾಗವಹಿಸಿದ್ದರು.
ಮುಸ್ಲಿಮ್ ಧಾರ್ಮಿಕ ಮುಖಂಡರು ಎಲ್ಲ ಅಭಿಮಾನಿಗಳನ್ನು ‘ಜನರ ಚಾಂಪಿಯನ್‌ನ ನಿವಾಸಕ್ಕೆ ಸ್ವಾಗತ’ ಎಂದು ಸ್ವಾಗತ ಕೋರಿದರು. ಲೂವಿಸ್‌ವಿಲ್ಲೆ ಚರ್ಚ್‌ನ ಫಾಸ್ಟರ್ ರೆವರೆಂಡ್ ಕೆವಿನ್ ಡಬ್ಲು ಕಾಸ್ಪೆ ಅವರು, ಅಲಿಯವರು ನಾಗರಿಕ ಹಕ್ಕುಗಳಿಗೆ ನಡೆಸಿದ ಹೋರಾಟವನ್ನು ಸ್ಮರಿಸಿದರು.
ಬಾಕ್ಸಿಂಗ್ ದಿಗ್ಗಜ ಅಲಿಯವರು ಆಫ್ರಿಕನ್- ಅಮೆರಿಕನ್ನರ ಶಕ್ತಿ ಹಾಗೂ ಸಾಮರ್ಥ್ಯವನ್ನು ವಿಶ್ವಕ್ಕೆ ಪ್ರದರ್ಶಿಸಿದರು.
ರಾಜಕೀಯ ಹೋರಾಟಗಾರ ಹಾಗೂ ಯಹೂದಿ ನಿಯತಕಾಲಿಕ ತಿಕ್ಕೂನ್‌ನ ಸಂಪಾದಕ ಮೈಕೆಲ್ ಲರ್ನರ್ ಅವರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ಅಮೆರಿಕದ ಸರ್ವಾಧಿಕಾರವನ್ನು ವಿರೋಧಿಸಿ ಅಲಿ ವಿಯೆಟ್ನಾಂ ಯುದ್ಧದಲ್ಲಿ ಭಾಗವಹಿಸಲು ನಿರಾಕರಿಸಿದ್ದನ್ನು ಹಾಗೂ ಇದು ಅವರ ಬಾಕ್ಸಿಂಗ್ ಪ್ರಶಸ್ತಿಗೇ ಕುತ್ತು ತಂದ ಅಂಶವನ್ನು ಅವರು ವಿವರಿಸಿದರು.
ಅನೈತಿಕ ಯುದ್ಧದ ವಿರುದ್ಧವಾಗಿ ನಿಂತ ಅಲಿ, ಅಧಿಕಾರವರ್ಗಕ್ಕೆ ಕಟುವಾಸ್ತವವನ್ನು ತೆರೆದಿಟ್ಟರು. ಅವರನ್ನು ಗೌರವಿಸುವ ವಿಧಾನವೆಂದರೆ, ಅವರನ್ನು ಇಂದು ಇಷ್ಟಪಡುವುದು ಎಂದು ಬಣ್ಣಿಸಿದರು. ಮುಸ್ಲಿಮ್ ವಿರೋಧಿ ಮನಸ್ಥಿತಿ ಹಾಗೂ ಡ್ರೋನ್ ದಾಳಿಗಳು, ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.







