ಗೆದ್ದ ಕಾಂಗ್ರೆಸ್-ಬಿದ್ದ ಜೆಡಿಎಸ್

ಆಸ್ಕರ್, ಜೈರಾಂ, ರಾಮಮೂರ್ತಿ, ನಿರ್ಮಲಾಗೆ ಗೆಲುವು
ಜೆಡಿಎಸ್‌ನ 8 ಶಾಸಕರಿಂದ ಕಾಂಗ್ರೆಸ್‌ಗೆ ಮತ
ಬೆಂಗಳೂರು, ಜೂ.11: ರಾಜ್ಯಸಭೆ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಆಸ್ಕರ್ ಫೆರ್ನಾಂಡಿಸ್, ಜೈರಾಂ ರಮೇಶ್, ಕೆ.ಸಿ. ರಾಮಮೂರ್ತಿ ಹಾಗೂ ಕೇಂದ್ರ ಸಚಿವೆ, ಬಿಜೆಪಿಯ ನಿರ್ಮಲಾ ಸೀತಾರಾಮನ್ ಭರ್ಜರಿ ಜಯಗಳಿಸಿದ್ದು, ಜೆಡಿಎಸ್ ಅಭ್ಯರ್ಥಿ ಬಿ.ಎಂ.ಫಾರೂಕ್ ಹೀನಾಯ ಸೋಲು ಅನುಭವಿಸಿದ್ದಾರೆ.
ಜೆಡಿಎಸ್ ಪಕ್ಷದ ನಲವತ್ತು ಮಂದಿ ಶಾಸಕರ ಪೈಕಿ 8 ಮಂದಿ ಭಿನ್ನಮತೀಯ ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಪಕ್ಷದ ಮೂರನೆ ಅಭ್ಯರ್ಥಿ ಕೆ.ಸಿ. ರಾಮಮೂರ್ತಿಗೆ ಮತ ಚಲಾಯಿಸಿದ ಹಿನ್ನೆಲೆಯಲ್ಲಿ ಅತ್ಯಂತ ಹೆಚ್ಚು ಮತಗಳಿಂದ ಅವರು ಜಯದ ನಗೆಬೀರಿದ್ದಾರೆ.
ಇದರಿಂದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿಗೆ ಭಿನ್ನಮತೀಯ ಶಾಸಕರು ಮರ್ಮಾಘಾತವನ್ನು ನೀಡಿದ್ದಾರೆ. ಅಲ್ಲದೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷ ರೂಪಿಸಿದ ರಣತಂತ್ರಕ್ಕೆ ನಿರೀಕ್ಷಿತ ಗೆಲುವು ಸಿಕ್ಕಂತಾಗಿದೆ.
ಕಾಂಗ್ರೆಸ್ಸಿನ ಅಭ್ಯರ್ಥಿಗಳಾದ ಆಸ್ಕರ್ ಫೆರ್ನಾಂಡಿಸ್(46), ಜೈರಾಂ ರಮೇಶ್ (47) ಹಾಗೂ ಕೆ.ಸಿ.ರಾಮಮೂರ್ತಿ(52), ಬಿಜೆಪಿಯ ನಿರ್ಮಲಾ ಸೀತಾರಾಮನ್ (46) ಮತಗಳನ್ನು ಗಳಿಸುವ ಮೂಲಕ ಜಯಶಾಲಿಗಳಾಗಿದ್ದಾರೆ. ಜೆಡಿಎಸ್ ಅಭ್ಯರ್ಥಿ ಬಿ.ಎಂ.ಫಾರೂಕ್ (33) ಮತಗಳನ್ನು ಗಳಿಸುವ ಮೂಲಕ ಸೋಲುಕಂಡಿದ್ದಾರೆ.
ರೇವಣ್ಣ-ಶಿವಕುಮಾರ್ ಜಟಾಪಟಿ: ಕಲಬುರಗಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಿ.ರಾಮಕೃಷ್ಣ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರ ಪರ ಮೇಲ್ಮನೆ ಸದಸ್ಯ ಗೋವಿಂದರಾಜು ಮತ ಚಲಾಯಿಸಲು ಮುಂದಾಗಿದ್ದಕ್ಕೆ ಜೆಡಿಎಸ್ ಏಜೆಂಟ್ ಎಚ್.ಡಿ. ರೇವಣ್ಣ ಆಕ್ಷೇಪಿಸಿದರು.
ಆ ಹಿನ್ನೆಲೆಯಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ರೇವಣ್ಣ ನಡುವೆ ಮತಗಟ್ಟೆಯಲ್ಲಿ ಮಾತಿನ ಚಕಮಕಿ ನಡೆಯಿತು. ‘ವೈದ್ಯಕೀಯ ದೃಢೀಕರಣ ಪತ್ರ ನೀಡು ವಂತೆ’ ರೇವಣ್ಣ ಆಗ್ರಹಿಸಿದರು. ಚುನಾವಣಾಧಿಕಾರಿಗಳ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು. ಆ ಬಳಿಕ ರಾಮಕೃಷ್ಣ ಅವರ ಪರ ಗೋವಿಂದರಾಜು ಹಕ್ಕು ಚಲಾಯಿಸಿದರು.
ಶಾಸಕರಿಗೆ ಸಿಎಂ ನಿರ್ದೇಶನ: ಪ್ರತಿಷ್ಠೆ ಹಾಗೂ ಪೈಪೋಟಿ ಹಿನ್ನೆಲೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಎಲ್ಲ ಶಾಸಕರಿಗೆ ಹೇಗೆ ಮತ ಚಲಾಯಿಸಬೇಕೆಂದು ನಿರ್ದೇಶನ ನೀಡಿದರು.
ಅದರನ್ವಯ ಆಡಳಿತ ಪಕ್ಷದ ಶಾಸಕರು ಆಸ್ಕರ್ ಫೆರ್ನಾಂಡಿಸ್‌ಗೆ 46 ಹಾಗೂ ಜೈರಾಂ ರಮೇಶ್ 47 ಹಾಗೂ ಉಳಿದ 32, ಪಕ್ಷೇತರ ಶಾಸಕರ 12, ಜೆಡಿಎಸ್ ಭಿನ್ನರ 8 ಮತಗಳನ್ನು ಸೇರಿದಂತೆ ಒಟ್ಟು 52 ಮತಗಳನ್ನು ಕಾಂಗ್ರೆಸ್ಸಿನ ಮೂರನೆ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಗಳಿಸುವ ಮೂಲಕ ಜೆಡಿಎಸ್ ಅಭ್ಯರ್ಥಿ ಬಿ.ಎಂ. ಫಾರೂಕ್‌ಗೆ ಸೋಲಿನ ರುಚಿಯುಣಿಸಿದರು.
ಕೇಂದ್ರ ಸಚಿವೆ ಹಾಗೂ ಬಿಜೆಪಿ ಅಭ್ಯರ್ಥಿ ನಿರ್ಮಲಾ ಸೀತಾರಾಮನ್ ಅವರಿಗೆ ಆ ಪಕ್ಷದ 44 ಮತಗಳೊಂದಿಗೆ ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರು ಮತ ಚಲಾಯಿಸಿದ ಹಿನ್ನೆಲೆಯಲ್ಲಿ ಒಟ್ಟು 46 ಮತಗಳನ್ನು ಗಳಿಸುವ ಮೂಲಕ ಜಯ ಸಾಧಿಸಿದ್ದಾರೆ.
ಗೆದ್ದ ಡಿಕೆಶಿ-ಸೋತ ಎಚ್‌ಡಿಕೆ: ವಿಧಾನಸಭೆಯಿಂದ ರಾಜ್ಯಸಭೆ-ಮೇಲ್ಮನೆಗೆ ನಡೆದ ಚುನಾವಣೆಯಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ರೂಪಿಸಿದ ರಣತಂತ್ರಕ್ಕೆ ಜಯ ಲಭಿಸಿದೆ. ಆದರೆ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೆಣೆದ ತಂತ್ರ ಅವರಿಗೆ ತಿರುಗುಬಾಣ ಆಗುವ ಮೂಲಕ ಪಕ್ಷದ ಅಭ್ಯರ್ಥಿ ಸೋಲು ಕಂಡಿದ್ದಾರೆ.
ಸ್ಪೀಕರ್ ಕಾಗೋಡು ತಿಮ್ಮಪ್ಪ, ಸಿಎಂ ಸಿದ್ದರಾಮಯ್ಯ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ, ಭಿನ್ನಮತೀಯ ಶಾಸಕರಾದ ಚಲುವ ರಾಯಸ್ವಾಮಿ, ಝಮೀರ್ ಅಹ್ಮದ್ ಖಾನ್, ಇಕ್ಬಾಲ್‌ಅನ್ಸಾರಿ, ಬಾಲಕೃಷ್ಣ, ಭೀಮಾ ನಾಯ್ಕಾ, ರಮೇಶ್ ಬಂಡಿಸಿದ್ದೇಗೌಡ, ಕೆ.ಗೋಪಾಲಯ್ಯ, ಅಖಂಡ ಶ್ರೀನಿವಾಸ ಮೂರ್ತಿ ಸೇರಿ ಎಲ್ಲ ಶಾಸಕರು ತಮ್ಮ ಹಕ್ಕು ಚಲಾಯಿಸಿದರು.
ಶಾಸಕರು ವಿಶ್ವಾಸವಿಟ್ಟು ಮತ ಹಾಕಿದ್ದಾರೆ
ರಾಜ್ಯ ಸರಕಾರ ಯಾವ ಶಾಸಕರ ಮತಗಳನ್ನೂ ಸೆಳೆಯಲಿಲ್ಲ, ಯಾರಿಗೂ ಆಮಿಷ ವೊಡ್ಡಿಲ್ಲ. ಕಾಂಗ್ರೆಸ್ ಅಭ್ಯರ್ಥಿಗಳಿಗೆ ಪಕ್ಷೇತರರೊಂದಿಗೆ ಜೆಡಿಎಸ್‌ನವರು ಮತ ಹಾಕಿದ್ದಾರೆ. ಇಂದು ಅನೈತಿಕ ಚುನಾವಣೆ ಏನಾದರೂ ನಡೆದಿದ್ದರೆ ಅದಕ್ಕೆ ಜೆಡಿಎಸ್ ಹೊಣೆಯಾಗುತ್ತದೆ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿದ ಎಲ್ಲ ಶಾಸಕರಿಗೂ ಅಭಿನಂದನೆ ಸಲ್ಲಿಸುತ್ತೇನೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
.....
ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ
ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಅಭ್ಯರ್ಥಿ ನಿರ್ಮಲಾ ಸೀತಾರಾಮನ್‌ಗೆ ಅಭಿನಂದನೆಗಳು. ವಿಧಾನ ಪರಿಷತ್ತಿಗೆ ನಿನ್ನೆ ಇಬ್ಬರು ಅಭ್ಯರ್ಥಿಗಳು ಪಕ್ಷದಿಂದ ಆಯ್ಕೆಯಾಗಿರುವ ಬೆನ್ನಲ್ಲೇ ಮತ್ತೊಂದು ವಿಜಯ ಬಿಜೆಪಿಗೆ ಮತ್ತಷ್ಟು ಬಲ ತಂದಿದೆ. ಎಲ್ಲ ಹಂತಗಳಲ್ಲಿ ಪಕ್ಷವನ್ನು ಬಲಪಡಿಸಲು ಇದನ್ನು ಸದುಪಯೋಗ ಪಡಿಸಿಕೊಂಡು ಜನತೆ ನಿರೀಕ್ಷಿಸುವ ಬದಲಾವಣೆ ತರಲು ಪಕ್ಷ ಬದ್ಧ.
- ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ
.....
ಮುಂದಿನ ಚುನಾವಣೆಗೆ ಶುಭ ಸಂದೇಶ
ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಸಾಧಿಸಿರುವ ಗೆಲುವು ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆಗೆ ಶುಭ ಸಂದೇಶ ನೀಡಿದೆ. ಈ ಗೆಲುವು ಕೇವಲ ನನ್ನ ಗೆಲುವಲ್ಲ, ಪಕ್ಷದ ಎಲ್ಲ ಕಾರ್ಯಕರ್ತರು, ನಾಯಕರ ಗೆಲುವಾಗಿದೆ. ನನ್ನ ಮೇಲೆ ವಿಶ್ವಾಸವಿಟ್ಟು ಮತ ನೀಡಿದ ಎಲ್ಲ ಶಾಸಕರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಕರ್ನಾಟಕದ ಅಭಿವೃದ್ಧಿಗೆ ನಾನು ಶ್ರಮಿಸುತ್ತೇನೆ.
- ನಿರ್ಮಲಾ ಸೀತಾರಾಮನ್, ವಿಜೇತ ಬಿಜೆಪಿ ಅಭ್ಯರ್ಥಿ







