ವೀಸಾ ನೀಡುವುದಾಗಿ ನಂಬಿಸಿ 10 ಲಕ್ಷ ರೂ. ವಂಚನೆ
ಮಲ್ಪೆ, ಜೂ.11: ವಿದೇಶದಲ್ಲಿ ಕೆಲಸದ ವೀಸಾ ನೀಡುವುದಾಗಿ ನಂಬಿಸಿ ನಾಲ್ಕು ಮಂದಿಯಿಂದ 10 ಲಕ್ಷ ರೂ. ಹಣ ಪಡೆದು ವಂಚಿಸಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡವೂರು ವಾಸುಕೀ ನಗರದ ಸಂದೇಶ ಮತ್ತು ಅವರ ಸ್ನೇಹಿತರಾದ ಶಿವಪ್ರಸಾದ್, ಸಾಗರ್, ಅನಿಲ್ ಕಾಂಚನ್ ಎಂಬವರು ವಂಚನೆಗೆ ಒಳಗಾದವರು. ಸಂದೇಶ್ರ ಸ್ನೇಹಿತರಾದ ಮಂಗಳೂರಿನ ಗಣೇಶ ಮತ್ತು ಐವನ್ ಎಂಬವರು ವೀಸಾ ಕೊಡಿಸುವುದಾಗಿ ತಿಳಿಸಿದ್ದು, ಅದರಂತೆ ಮುಂಬೈಯ ಇ ಗ್ಲೋಬಸ್ ಟ್ರಾವೆಲ್ ಎಂಟರ್ಪ್ರೈಸಸ್ ಎಂಬ ವಿಳಾಸಕ್ಕೆ ಸಂದೇಶ್ ಹಾಗೂ ಶಿವಪ್ರಸಾದ್ ತಲಾ 2,50,000 ರೂ.ನ ಚೆಕ್ನ್ನು 2015ರ ಡಿ.21ರಂದು ಕಳುಹಿಸಿಕೊಟ್ಟಿದ್ದರು. ನಂತರ ಸಾಗರ್ ಮತ್ತು ಅನಿಲ್ ಕೂಡ ಅದೇ ವಿಳಾಸಕ್ಕೆ ತಲಾ 2,50,000 ರೂ.ವನ್ನು ಕಳುಹಿಸಿದ್ದಾರೆ.
ಸುಮಾರು 6 ತಿಂಗಳವರೆಗೆ ವೀಸಾ ಬಾರದೆ ಇದ್ದುದರಿಂದ ಸಂಶಯಗೊಂಡು ವಿಚಾರಿಸಿದಾಗ ಮುಂಬೈಯ ಈ ಕಚೇರಿ ಮುಚ್ಚಿರುವುದಾಗಿ ತಿಳಿದು ಬಂತು. ಹೀಗೆ ಗಣೇಶ್ ಮತ್ತು ಐವನ್ ವೀಸಾ ನೀಡುವುದಾಗಿ ನಂಬಿಸಿ ನಾಲ್ವರಿಂದ ತಲಾ 2,50,000 ರೂ.ನಂತೆ ಒಟ್ಟು 10 ಲಕ್ಷ ರೂ.ವನ್ನು ಪಡೆದುಕೊಂಡು ವೀಸಾ ನೀಡದೆ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.





