ಬೀದಿಬದಿಯ ಮಕ್ಕಳಿಗೆ ಪ್ರವೇಶ ನಿರಾಕರಿಸಿದ ಶಿವಸಾಗರ್ ಹೋಟೆಲ್: ತನಿಖೆಗೆ ಆದೇಶ

ಹೊಸದಿಲ್ಲಿ: ಇಲ್ಲಿನ ಕನೌತ್ ಪ್ಯಾಲೆಸ್ ನ ಶಿವಸಾಗರ ಹೋಟೆಲ್ ನಲ್ಲಿ ಬೀದಿಮಕ್ಕಳಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ದೆಹಲಿ ಸರಕಾರ ಆದೇಶಿಸಿದೆ.
ಇದು ಸಾಮ್ರಾಜ್ಯಶಾಹಿ ಮನೋಭಾವಕ್ಕೆ ಒಳ್ಳೆಯ ಉದಾಹರಣೆ. ಇದನ್ನು ಸಹಿಸಲಾಗದು. ಈ ಬಗ್ಗೆ ತನಿಖೆ ನಡೆಸುವಂತೆ ದೆಹಲಿ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದ್ದು, 24 ಗಂಟೆಗಳೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.
ಸೋನಾನಿ ಶೆಟ್ಟಿ ಎಂಬ ಮಹಿಳೆ ತಮ್ಮ ಪತಿಯ ಹುಟ್ಟುಹಬ್ಬದ ಅಂಗವಾಗಿ ಹಲವು ಮಂದಿ ಬೀದಿಬದಿ ಮಕ್ಕಳನ್ನು ಶಿವಸಾಗರ್ ಹೋಟೆಲ್ ಗೆ ಕರೆ ತಂದಿದ್ದರು. ಮಕ್ಕಳಿಗೆ ಸೇವೆ ಒದಗಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಹೋಟೆಲ್ ನ ಎದುರು ಶೆಟ್ಟಿ ಧರಣಿ ಆರಂಭಿಸಿದ್ದಾರೆ. ಈ ಬಗ್ಗೆ ಪ್ರಕರಣವೂ ದಾಖಲಾಗಿದೆ. ಮಕ್ಕಳೊಂದಿಗೆ ತಕ್ಷಣ ಜಾಗ ತೆರವುಗೊಳಿಸುವಂತೆ ಹೋಟೆಲ್ ವ್ಯವಸ್ಥಾಪಕ ಬೆದರಿಕೆ ಹಾಕಿದ್ದಾರೆ ಎಂದು ಸೋನಾಲಿ ದೂರಿದ್ದಾರೆ. ಮಕ್ಕಳು ನೀಟ್ ಇರಲಿಲ್ಲ ಎಂಬ ಕಾರಣಕ್ಕೆ ಅವರಿಗೆ ಆಹಾರ ಒದಗಿಸಲು ಹೋಟೆಲ್ ನವರು ನಿರಾಕರಿಸಿದ್ದು, ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸರು ಕೂಡಾ ತನ್ನ ನೆರವಿಗೆ ಬರಲಿಲ್ಲ ಎಂದು ಅವರು ದೂರಿದ್ದಾರೆ.





