ಕಾರ್ಕಳ ಪರಿಸರ ಉತ್ಸವ - 2016ಕ್ಕೆ ಚಾಲನೆ

ಕಾರ್ಕಳ : ಪರಿಸರ ಉತ್ಸವದ ಅಂಗವಾಗಿ ತಾಲೂಕಿನ ಎಲ್ಲಾ ಗ್ರಾ.ಪಂ, ವ್ಯಾಪ್ತಿಯಲ್ಲಿ ಸಂಘ
ಸಂಸ್ಥೆಗಳ ಮತ್ತು ಜನರ ಸಹಕಾರದೊಂದಿಗೆ ಸಾಮೂಹಿಕವಾಗಿ ಇಂಗುಗುಂಡಿ ನಿರ್ಮಾಣ ಕಾರ್ಯಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಅಭಿಯಾನ ರೂಪದಲ್ಲಿ ಕೈಗೊಂಡ ಈ ಕಾರ್ಯಕ್ರಮವು ಮುಂಜಾನೆಯಿಂದ ಆರಂಭಗೊಂಡಿತು. ಕ್ಷೇತ್ರದ ಶಾಸಕರು ಹಾಗೂ ಪರಿಸರ ಉತ್ಸವ-2016ರ ರೂವಾರಿ ವಿ.ಸುನಿಲ್ ಕುಮಾರ್ ಅವರು ತಮ್ಮ ಮನೆಯ ವಾರ್ಡ್ ನಿಟ್ಟೆ ಕಲಂಬಾಡಿ ಪದವು ಬಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಕುಕ್ಕುಂದೂರು ಬಳಿ ತೋಟಗಾರಿಕಾ ಇಲಾಖೆ ವತಿಯಿಂದ ಇಂಗುಗುಂಡಿ ನಿರ್ಮಾಣಕ್ಕೆ ಚಾಲನೆ ನೀಡಿ, ನಂತರ ಗುಡ್ಡೆಯಂಗಡಿ ಮತ್ತು ಬಜಗೋಳಿ ಪರಿಸರದ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಭಿಯಾನಕ್ಕೆ ಉತ್ತಮ ಜನಸ್ಪಂದನೆ ದೊರಕಿದ್ದು, ತೋಡಿದ ಇಂಗುಗುಂಡಿಯೊಂದಿಗೆ ಸೆಲ್ಪಿ ಕಳುಹಿಸಿ ಎಂಬ ಶಾಸಕರ ಮನವಿಗೆ ಉತ್ತಮ ಪ್ರತಿಕ್ರಿಯೆ ಕೂಡಾ ದೊರೆತಿದೆ.
ವಾಟ್ಸಪ್ ಮೂಲಕ ಸೆಲ್ಪಿ ವಿದ್ ಇಂಗುಗುಂಡಿಯ ಸಾವಿರಾರು ಫೋಟೋಗಳು ಬಂದಿದ್ದು, ಉತ್ತಮ ಸ್ಪಂದನೆ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಒಂದೇ ದಿನದಲ್ಲಿ ತಾಲೂಕಿನಾದ್ಯಂತ 250 ಕ್ಕೂ ಅಧಿಕ ಇಂಗುಗುಂಡಿ ತೋಡುವ ಭರವಸೆಯು ಆಯಾ ಗ್ರಾಮಗಳಿಂದ ಶಾಸಕರಿಗೆ ಬಂದಿದ್ದು, ಒಟ್ಟು ತಾಲೂಕಿನಾದ್ಯಂತ 6000 ಕ್ಕೂ ಅಧಿಕ ಇಂಗುಗುಂಡಿ ನಿರ್ಮಾಣದ ಗುರಿ ತಲುಪುವ ಸಾಧ್ಯತೆಯಿದೆ ಎಂದು ಶಾಸಕ ವಿ.ಸುನಿಲ್ ಕುಮಾರ್ ಈ ಸಂದರ್ಭ ತಿಳಿಸಿದ್ದಾರೆ. ಅಭಿಯಾನವು ಜೂನ್ ತಿಂಗಳಿಡೀ ನಡೆಯಲಿದ್ದು, ಸಾರ್ವಜನಿಕರು ತಮ್ಮ ಮನೆ ಆವರಣಗಳಲ್ಲಿ ಮತ್ತು ಸಾರ್ವಜನಿಕ ಜಾಗಗಳಲ್ಲಿ ಇಂಗುಗುಂಡಿಗಳ ರಚನೆಗೆ ಮುಂದಾಗಬೇಕು, ಆ ಮೂಲಕ ಕುಸಿಯುತ್ತಿರುವ ಅಂತರ್ಜಲವನ್ನು ತಡೆಗಟ್ಟಬೇಕೆಂದು ಶಾಸಕರು ಈ ಸಂದರ್ಭ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.







