ಕಾಸರಗೋಡು: ಹೆಚ್ಚುತ್ತಿರುವ ಬಾಲ ಭಿಕ್ಷಾಟನೆ

ಕಾಸರಗೋಡು: ಜೂ12 : ಕಾಸರಗೋಡು ಕೇಂದ್ರೀಕರಿಸಿ ಬಾಲ ಭಿಕ್ಷಾಟನೆ ಹೆಚ್ಚುತ್ತಿದ್ದು , ಇದರ ಹಿಂದೆ ಜಾಲವೊಂದು ಕಾರ್ಯಾಚರಿಸುತ್ತಿದೆ.ಅಪ್ರಾಪ್ತ ಮತ್ತು ವಿಕಲಚೇತನ ಮಕ್ಕಳನ್ನು ಬಳಸಿ ಜಾಲವೊಂದು ಭಿಕ್ಷಾಟನೆಯಲ್ಲಿ ಸಕ್ರಿಯವಾಗಿದ್ದು , ದಿನಕ್ಕೆ ಒಂದು ಸಾವಿರ ರೂ.ಗೂ ಅಧಿಕ ಸಂಪಾದನೆ ನಡೆಸುತ್ತಿವೆ. ಒಂದು ತಿಂಗಳಿನಿಂದ ಆರು ತಿಂಗಳ ಮಗುವನ್ನು ಬಳಸಿ ಹೆಚ್ಚಿನ ಭಿಕ್ಷಾಟನೆ ನಡೆಸಲಾಗುತ್ತಿದೆ.
ಕೇರಳದಲ್ಲಿ ಭಿಕ್ಷಾಟನೆ ನಿಷೇಧಿಸಲಾಗಿದೆ. ಆದರೆ ನಿಷೇಧ ಮಾತ್ರ ಕಡತದಲ್ಲೇ ಉಳಿದುಕೊಂಡಿದೆ. ಅಧಿಕಾರಿಗಳ ಕಣ್ಣಮುಂದೆಯೇ ಭಿಕ್ಷಾಟನೆ ನಡೆಯುತ್ತಿದ್ದರೂ ಈ ಬಗ್ಗೆ ಗಮನಹರಿಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಜಿಲ್ಲೆಯಲ್ಲಿ ನೆಲೆಸಿರುವ ಹೊರರಾಜ್ಯಗಳ ಮಕ್ಕಳನ್ನು ಭಿಕ್ಷಾಟನೆಗೆ ಬಳಸಲಾಗುತ್ತಿದೆ. ಇದು ಮಾತ್ರವಲ್ಲ ಮಕ್ಕಳ ಹಕ್ಕು ಉಲ್ಲಂಘಿಸುವ ಹಲವು ರೀತಿಯ ಕಸರತ್ತುಗಳನ್ನು ಮಾಡುವ ಮೂಲಕ ಹಣಗಳಿಸುವ ವಿದ್ಯೆಯನ್ನು ಈ ಮಕ್ಕಳಿಗೆ ಕಲಿಸಲಾಗುತ್ತಿದೆ. ಆದರೆ ಬೀದಿ ಸರ್ಕಸ್ ಮಾತ್ರವಲ್ಲ ರೈಲು , ಬಸ್ಸುಗಳಲ್ಲಿ ಇವರು ಭಿಕ್ಷಾಟನೆ ನಡೆಸುತ್ತಿದ್ದಾರೆ.
ಈ ಮಕ್ಕಳಿಂದ ಸಂಗ್ರಹವಾಗುವ ಆದಾಯವನ್ನು ಪಡೆಯಲು ಮಾಫಿಯಾ ಜಾಲವೇ ಸಕ್ರಿಯವಾಗಿದೆ. ಈ ಜಾಲ ಸಂಜೆಯಾಗುತ್ತಲೇ ಲಭಿಸಿದ ಹಣವನ್ನು ಕಸಿದುಕೊಳ್ಳುತ್ತದೆ . ಮಕ್ಕಳಿಗೆ ಅಲ್ಪಹಣ ನೀಡಿ ಅಲ್ಲಿಂದ ಕಳುಹಿಸಲಾಗುತ್ತಿದೆ. ಮರುದಿನ ಜಾಲದವರು ಸೂಚಿಸಿದ ಸ್ಥಳಗಳಿಗೆ ತೆರಳಬೇಕಿದೆ. ದಿನಂಪ್ರತಿ ಸಾವಿರಾರು ರೂ ಆದಾಯ ಲಭಿಸುತ್ತಿದೆ. ಇದೆ ರೀತಿ ಮಕ್ಕಳನ್ನು ಬಳಸಿ ಹಣ ಮಾಡುವ ಜಾಲವೇ ಜಿಲ್ಲೆಯಲ್ಲಿ ದೊಡ್ಡ ಮಾಫಿಯಾವಾಗಿ ಬೆಳೆಯುತ್ತಿದೆ. ಕೇಂದ್ರ ಸ್ಥಳವಾದ ಕಾಸರಗೋಡು ಹೊಸ ಬಸ್ಸು ನಿಲ್ದಾಣ , ಹಳೆ ಬಸ್ಸು ನಿಲ್ದಾಣ , ಬದಿಯಡ್ಕ , ಕುಂಬಳೆ , ಉಪ್ಪಳ ಎಲ್ಲೆಂದರಲ್ಲಿ ಭಿಕ್ಷಾಟನೆ ನಿತ್ಯ ಘಟನೆಯಾಗಿ ಪರಿಣಮಿಸುತ್ತಿದೆ.
ಇದು ಮಾತ್ರವಲ್ಲ ಬಸ್ಸು ಪ್ರಯಾಣಿಕರು , ಸೇರಿದಂತೆ ಜನಸಾಮಾನ್ಯರಿಗೆ ಭಿಕ್ಷಾಟನೆ ಸಮಸ್ಯೆಯಾಗಿ ಕಾಡುತ್ತಿದೆ. ಭಿಕ್ಷಾಟನೆ ಅದರಲ್ಲೂ ಬಾಲ ಭಿಕ್ಷಾಟನೆಗೆ ಕಟ್ಟು ನಿಟ್ಟಿನ ನಿಷೇಧವಿದ್ದರೂ ಇದನ್ನು ಅನುಷ್ಠಾನಕ್ಕೆ ತರಲು ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಡೆಸುವ ಹೆಚ್ಚುತ್ತಿರುವ ಭಿಕ್ಷಾಟನೆಗೆ ಕೊನೆ ಯಾವಾಗ ಎಂಬುದು ಪ್ರಶ್ನೆ ಯಾಗಿ ಉಳಿದುಕೊಂಡಿದೆ.
ಕಾಸರಗೋಡು : ರೈಲಿ ನಲ್ಲಿ ಪುಟ್ಟ ಮಕ್ಕಳ ಹಿಡಿದು ಭಿಕ್ಷಾಟನೆ ನಡೆಸುತ್ತಿದ್ದ ಯುವತಿಯರನ್ನು ಚೆರ್ವತ್ತೂರು ಪೊಲೀಸರು ವಶಕ್ಕೆ ಪಡೆದು ಮಹಿಳಾ ಮಂದಿರಕ್ಕೆ ಒಪ್ಪಿಸಿದ್ದಾರೆ.
ಚೆರ್ವತ್ತೂರಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಇವರನ್ನು ತೆರವುಗೊಳಿಸಲಾಗಿದೆ. ಹದಿನೈದಕ್ಕೂ ಅಧಿಕ ಮಂದಿ ಈ ವಸತಿಗ್ರಹದಲ್ಲಿ ತಂಗಿ ಭಿಕ್ಷಾಟನೆ ನಡೆಸುತ್ತಿದ್ದರು. ಕರ್ನಾಟಕ , ಆಂಧ್ರ ಮೂಲದವರಾಗಿರುವ ಇವರು ರೈಲುಗಳಲ್ಲಿ ಭಿಕ್ಷಾಟನೆ ನಡೆಸುತ್ತಿದ್ದರು .
ಸಣ್ಣ ಮಕ್ಕಳನ್ನು ಬಳಸಿಕೊಂಡು ಭಿಕ್ಷಾಟನೆ ನಡೆಸುವ ಕಾಯಕದಲ್ಲಿ ತೊಡಗಿದ್ದರು.
ಮಕ್ಕಳನ್ನು ಬಳಸಿ ಭಿಕ್ಷಾಟನೆ ನಡೆಸಲು ನಿಷೇಧವಿದ್ದರೂ ಇದನ್ನು ಉಲ್ಲಂಘಿಸಲಾಗುತ್ತಿದ್ದು , ರೈಲಿನಿಂದ ಭಿಕ್ಷಾಟನೆ ಸಂದರ್ಭದಲ್ಲಿ ಯುವತಿಯನ್ನು ವಶಕ್ಕೆ ನೀಡಿದ್ದರೂ ಪೊಲೀಸರು ಪ್ರಕರಣ ದಾಖಲಿಸಲು ಮುಂದಾಗದಿರುವ ಬಗ್ಗೆ ವಿವಾದಕ್ಕೆ ಕಾರಣವಾಗಿದ್ದು , ಈ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಐ . ಜಿ ಶ್ರೀಜಿತ್ ಆದೇಶ ನೀಡಿದ್ದಾರೆ ಎನ್ನಲಾಗಿದೆ.







