ದುಬೈ ವಿಮಾನನಿಲ್ದಾಣ ಬಳಿ ಡ್ರೋನ್ ಹಾರಾಟ 69 ನಿಮಿಷ ವಾಯುಸಂಚಾರ ರದ್ದು

ದುಬೈ,ಜೂ.12: ಜಗತ್ತಿನ ಅತ್ಯಂತ ಪ್ರಯಾಣಿಕ ದಟ್ಟಣೆಯ ವಿಮಾನನಿಲ್ದಾಣವೆನಿಸಿರುವ ದುಬೈ ಅಂತಾರಾಷ್ಟ್ರೀಯ ವಿಮಾನಿಲ್ದಾಣದ ಆಸುಪಾಸಿನಲ್ಲಿ ಅನಧಿಕೃತ ಡ್ರೋನ್ ವಿಮಾನವೊಂದು ಹಾರಾಡಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ವಿಮಾನನಿಲ್ದಾಣವು ಶನಿವಾರ ತನ್ನ ವಾಯುಕ್ಷೇತ್ರವನ್ನು ಸುಮಾರು 69 ನಿಮಿಷಗಳ ಕಾಲ ಮುಚ್ಚುಗಡೆಗೊಳಿಸಿತು. ಇದರಿಂದಾಗಿ ಸುಮಾರು 22 ವಿಮಾನಗಳು ತಮ್ಮ ಪಥವನ್ನು ಬದಲಾಯಿಸಬೇಕಾಯಿತು.
ದುಬೈ ವಿಮಾನನಿಲ್ದಾಣದ ವಾಯುಕ್ಷೇತ್ರವನ್ನು ಶನಿವಾರ ಬೆಳಗ್ಗೆ 11:36ರಿಂದ ಮಧ್ಯಾಹ್ನ 12:45ರವರೆಗೆ ಮುಚ್ಚುಗಡೆಗೊಳಿಸಲಾಯಿತೆಂದು ದುಬೈ ಏರ್‌ಪೋರ್ಟ್ಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೌಲ್ ಗ್ರಿಫಿತ್ಸ್ ತಿಳಿಸಿದ್ದಾರೆ. ಇದರಿಂದಾಗಿ ಸಾವಿರಾರು ಪ್ರಯಾಣಿಕರ ಸಂಚಾರದಲ್ಲಿ ವ್ಯತ್ಯಾಯವುಂಟಾಯಿತೆಂದು ಅವರು ಹೇಳಿದ್ದಾರೆ.
ಈ ಅವಧಿಯಲ್ಲಿ ವಿಮಾನಿಲ್ದಾಣದಲ್ಲಿ ಇಳಿಯಬೇಕಿದ್ದ 16 ವಿಮಾನಗಳನ್ನು ದುಬೈನ ಇನ್ನೊಂದು ವಿಮಾನಿಲ್ದಾಣವಾದ ದುಬೈ ವರ್ಲ್ಡ್ ಸೆಂಟ್ರಲ್‌ನಲ್ಲಿ ಇಳಿಯುವಂತೆ ಮಾಡಲಾಯಿತು.
ಇದೊಂದು ಗಂಭೀರ ಘಟನೆಯಾಗಿದೆ. ಯುಎಇನ ಎಲ್ಲಾ ವಿಮಾನನಿಲ್ದಾಣದ ಸುತ್ತ ಅನಧಿಕೃತ ಡ್ರೋನ್ ಹಾರಾಟಕ್ಕೆ ಸಂಬಂಧಿಸಿ ಹಲವಾರು ನಿರ್ಬಂಧಗಳಿರುವುದಾಗಿ ಗ್ರಿಫಿತ್ಸ್ ತಿಳಿಸಿದ್ದಾರೆ. ಯುಎಇನ ಎಲ್ಲಾ ವಿಮಾನನಿಲ್ದಾಣಗಳು, ಹೆಲಿಪ್ಯಾಡ್‌ಗಳಗಳ 5 ಕಿ.ಮೀ. ವ್ಯಾಪ್ತಿಯಲ್ಲಿ ಡ್ರೋನ್‌ಗಳ ಹಾರಾಟವನ್ನು ನಿಷೇಧಿಸಲಾಗಿದೆ.







