ಇಂಟರ್‌ಪೋಲ್‌ಗೆ ಉತ್ತರ ರವಾನಿಸಿದ ಇಡಿ
ಮಲ್ಯ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣ
ಹೊಸದಿಲ್ಲಿ,ಜೂ.12: ಐಡಿಬಿಐ ಬ್ಯಾಂಕಿನಿಂದ 900 ಕೋ.ರೂ.ಸಾಲ ಪಡೆದುಕೊಂಡು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬೇಕಾಗಿರುವ ಮದ್ಯದ ದೊರೆ ವಿಜಯ ಮಲ್ಯ ಕುರಿತಂತೆ ಕಾನೂನು ಮಾಹಿತಿಗಳ ಸಹಿತ ವಿವರವಾದ ಉತ್ತರವೊಂದನ್ನು ಜಾರಿ ನಿರ್ದೇಶನಾಲಯ(ಇಡಿ)ವು ಇಂಟರ್‌ಪೋಲ್‌ಗೆ ರವಾನಿಸಿದೆ. ಮಲ್ಯ ವಿರುದ್ಧ ಬಂಧನ ವಾರಂಟ್‌ನ್ನು ಹೊರಡಿಸುವ ಮುನ್ನ ಕೆಲವು ಸ್ಪಷ್ಟನೆಗಳನ್ನು ಕೋರಿ ಇಂಟರ್‌ಪೋಲ್ ಇತ್ತೀಚೆಗೆ ಪತ್ರವನ್ನು ಬರೆದಿತ್ತು.
ಮಲ್ಯ ವಿರುದ್ಧ ರೆಡ್ ಕಾರ್ನರ್ ನೋಟಿಸ್‌ನ್ನು ಕೋರಲು ಎಲ್ಲ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ತಾನು ಪಾಲಿಸಿರುವುದಾಗಿ ಇಡಿ ಇಂಟರ್‌ಪೋಲ್‌ಗೆ ತಿಳಿಸಿದೆ.
ಮಲ್ಯರನ್ನು ತಲೆ ಮರೆಸಿಕೊಂಡ ಆರೋಪಿಯೆಂದು ಘೋಷಿಸುವಂತೆ ತಾನು ನ್ಯಾಯಾಲಯವನ್ನು ಕೋರಿರುವುದಾಗಿಯೂ ಇಡಿ ಇಂಟರ್‌ಪೋಲ್‌ಗೆ ತಿಳಿಸಿದೆ. ಈ ಸಂಬಂಧ ನಿರ್ಧಾರವೊಂದನ್ನು ಮುಂಬೈನ ನ್ಯಾಯಾಲಯವು ಸೋಮವಾರ ಪ್ರಕಟಿಸುವ ನಿರೀಕ್ಷೆಯಿದೆ.
ಶನಿವಾರ ಇಡಿ ಮಲ್ಯಗೆ ಸೇರಿದ 1,411 ಕೋ.ರೂ.ವೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿಕೊಂಡಿದೆ.
ಮಾ.2ರಂದು ತನ್ನ ರಾಜತಾಂತ್ರಿಕ ಪಾಸ್‌ಪೋರ್ಟ್‌ನ್ನು ಬಳಸಿಕೊಂಡು ದೇಶದಿಂದ ಪರಾರಿಯಾಗಿರುವ ಮಲ್ಯ ಪ್ರಸ್ತುತ ಬ್ರಿಟನ್‌ನಲ್ಲಿದ್ದಾರೆನ್ನಲಾಗಿದೆ.





