ಉಮ್ರಾ ಉದ್ಯಮವಾಗದಿರಲಿ
ಮಾನ್ಯರೆ,
ಇತ್ತೀಚೆಗೆ ಪತ್ರಿಕೆಗಳು ಸೌದಿಯ ಗ್ರಾಂಡ್ ಮುಫ್ತಿಯವರು ನೀಡಿರುವ ಹೇಳಿಕೆಯೊಂದನ್ನು ಪ್ರಕಟಿಸಿವೆ. ‘‘ಉಮ್ರಾವನ್ನು ಒಮ್ಮೆ ಮಾಡಿದವರು ಪದೇ ಪದೇ ಬರಬೇಡಿ. ಹೊಸದಾಗಿ ಉಮ್ರಾ ಮಾಡುವವರಿಗೆ ಅದರಿಂದ ತೊಂದರೆಯಾಗುತ್ತದೆ’’ ಎಂಬ ಹೇಳಿಕೆ ನಿಜಕ್ಕೂ ಕಣ್ಣು ತೆರೆಸುವಂತಹದ್ದು. ಉಮ್ರಾ ಮಾಡುವುದು, ಹಜ್ ನೆರವೇರಿಸುವುದು ಮುಸ್ಲಿಮರ ಕರ್ತವ್ಯವೇನೋ ಹೌದು. ಆದರೆ ಅದು ಪ್ರತಿಷ್ಠೆಯ, ಹಣದ ಪ್ರದರ್ಶನವಾಗಬಾರದು. ಈ ವಿಶ್ವದಲ್ಲಿ ಉಮ್ರಾ ಮತ್ತು ಹಜ್ ನೆರವೇರಿಸಲು ಸಾಧ್ಯವಾಗದ ಲಕ್ಷಾಂತರ ಜನರಿದ್ದಾರೆ. ಅಥವಾ ದಿನನಿತ್ಯದ ಮೂಲಭೂತ ಆವಶ್ಯಕತೆಗಳನ್ನು ಈಡೇರಿಸಲು ಸಾಧ್ಯವಾಗದ ಲಕ್ಷಾಂತರ ಬಡವರಿದ್ದಾರೆ. ದೇವರು ನಮ್ಮ ಒಳಗನ್ನು ಕೂಡ ಬಲ್ಲವನು. ನಾವು ಬಡವರನ್ನು, ಸಮಾಜದ ದುರ್ಬಲರನ್ನು ತಿರಸ್ಕರಿಸಿ, ನಿರ್ಲಕ್ಷಿಸಿ ಪ್ರತಿಷ್ಠೆಗಾಗಿ ಮಾಡುವ ಹಜ್ ಅನೇಕ ಸಂದರ್ಭದಲ್ಲಿ ನಮಗೇ ತಿರುಗು ಬಾಣವಾಗಬಹುದು. ಹಜ್ ಮತ್ತು ಉಮ್ರಾದ ಉದ್ದೇಶವನ್ನು ಅರಿತುಕೊಂಡು, ಅದನ್ನು ನೆರವೇರಿಸುವುದು ಮುಸ್ಲಿಮರ ಕರ್ತವ್ಯ. ಅದನ್ನು ವ್ಯವಹಾರದ ಭಾಗವಾಗಿಸುವುದು ತಪ್ಪು ಎನ್ನುವುದನ್ನು ಮುಫ್ತಿಯವರ ಕರೆ ನಮಗೆ ಸ್ಪಷ್ಟಪಡಿಸುತ್ತದೆ. ಬದಲಿಗೆ ಸಮುದಾಯವನ್ನು ಉದ್ಧರಿಸಲು ಆ ಹಣವನ್ನು ಬಳಸಿದರೆ ಅದು ದೇವರಿಗೆ ಹೆಚ್ಚು ಇಷ್ಟವಾಗಬಹುದು. ಇನ್ನಾದರೂ ಇದನ್ನು ಜನರು ಅರ್ಥ ಮಾಡಿಕೊಳ್ಳುತ್ತಾರೆಯೇ?





