ಪೊಲೀಸ್ ಇಲಾಖೆಗೆ ಸಾರ್ವಜನಿಕರ ಸಹಕಾರ ಅಗತ್ಯ: ಗಣೇಶಪ್ಪ
ಸೊರಬ: ರಮಝಾನ್ ಪ್ರಯುಕ್ತ ಶಾಂತಿ ಸಭೆ

ಸೊರಬ, ಜೂ.12: ಸಾರ್ವಜನಿಕರ ರಕ್ಷಣೆಗೆ ಪೊಲೀಸ್ ಇಲಾಖೆ ಸದಾ ಸಿದ್ಧವಿದ್ದು, ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ವೃತ್ತ ನಿರೀಕ್ಷಕ ಜಿ. ಗಣೇಶಪ್ಪ ಹೇಳಿದರು.
ರಮಝಾನ್ ಆಚರಣೆ ಪ್ರಯುಕ್ತ ಪಟ್ಟಣದ ಪೊಲೀಸ್ ಠಾಣೆಯಲ್ಲಿ ರವಿವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ದೇಶದಲ್ಲಿ ಹಬ್ಬಗಳ ಆಚರಣೆಗೆ ಮುಕ್ತ ಅವಕಾಶವಿದೆ. ಇಂತಹ ಸಂದರ್ಭಗಳಲ್ಲಿ ಕಾನೂನಿಗೆ ಭಂಗ ತರದೇ ಪರಸ್ಪರ ಪ್ರೀತಿ ವಿಶ್ವಾಸದಿಂದ ಹಬ್ಬಗಳನ್ನು ಆಚರಿಸಬೇಕು. ನೆರೆಹೊರೆಯವರು, ಶಾಲಾ ಮಕ್ಕಳು, ವೃದ್ಧರಿಗೆ ಯಾವುದೇ ತೊಂದರೆಯಾಗದಂತೆ ಮಿತವಾಗಿ ಧ್ವನಿವರ್ಧಕಗಳನ್ನು ಬಳಸಬೇಕು ಎಂದರು.
ಹಬ್ಬಗಳ ಆಚರಣೆ ಸಂದರ್ಭಗಳಲ್ಲಿ ಬ್ಯಾನರ್ಸ್, ಬಂಟಿಂಗ್ಸ್ ಅಳವಡಿಸುವಾಗ ಸಂಬಂಧಪಟ್ಟ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್‌ಗಳಿಂದ ಅನುಮತಿ ಪಡೆದು, ಇಲಾಖೆಯ ಗಮನಕ್ಕೆ ತಂದ ಬಳಿಕ ಅಳವಡಿಸಬೇಕು. ಮಾರ್ಗಸೂಚಿಯನ್ನು ಅನುಸರಿಸದೆ ಇಂತಹಾ ಕ್ರಮಕ್ಕೆ ಮುಂದಾದಲ್ಲಿ ಅಂತವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಭೆ ುಲ್ಲಿ ಹಾಜರಿದ್ದ ಕಾನ್‌ಕೇರಿ ಮಸೀದಿಯ ಅಧ್ಯಕ್ಷ ಇಡಗೋಡು ಇಸ್ಮಾಯೀಲ್ ಖಾನ್ ಮಾತನಾಡಿ, ತಾಲೂಕಿನಲ್ಲಿ ಈವರೆಗೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ. ಎಲ್ಲ ಸಮುದಾಯದವರು ಜಾತಿ ಭೇದವಿಲ್ಲದೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಮುಂದೆಯೂ ಪೊಲೀಸ್ ಇಲಾಖೆಯ ಸಲಹೆ ಸಹಕಾರದೊಂದಿಗೆ ಶಾಂತಿಯಿಂದ ಆಚರಣೆ ಮಾಡುವುದಾಗಿ ನುಡಿದರು.
ಈ ಸಂದಭರ್ದಲ್ಲಿ ಪಿಎಸ್ಸೈ ಸುನೀಲ್ ಕುಮಾರ್, ಕ್ರೈಂ ವಿಭಾಗದ ಪಿಎಸ್ಸೈ ಅಣ್ಣಯ್ಯ. ಪ ಪಂ ಸದಸ್ಯರಾದ ಎಂ.ಡಿ. ಉಮೇಶ್, ಮಹೇಶ್ ಗೌಳಿ, ಡಿಎಸ್‌ಎಸ್ ಮುಖಂಡರಾದ ನಾಗಪ್ಪ, ಗುರುರಾಜ್, ಜಿ. ಕೆರಿಯಪ್ಪ ಪ್ರಮುಖರಾದ ಹೇಮರಾಜ್ ಪಾಟೀಲ್, ಮುಹಮ್ಮದ್ ಕದೀರ್, ದಸ್ತಗೀರ್ ಸಾಬ್, ಮಕ್ಬೂಲ್ ಅಹ್ಮದ್, ಮುದಸ್ಸಿರ್, ರಶೀದ್ ಅಹ್ಮದ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.







