ವಿದು್ಯತ್ ಸಮಸ್ಯೆಯಿಂದ ರೆತರಿಗೆ ನಷ್ಟ ಉಂಟಾಗಿದೆ: ವನಮಾಲಾ

ಕಡೂರು, ಜೂ.12: ರೈತರು ಅಲ್ಪಸ್ವಲ್ಪ ಮಳೆ ಬಂದಿದ್ದರಿಂದ ಮುಂಗಾರು ಬಿತ್ತನೆಗೆ ಸಾಲ ಮಾಡಿ ಬೀಜ ಬಿತ್ತನೆ ಮಾಡಿರುತ್ತಾರೆ. ನಂತರ ಸರಿಯಾಗಿ ಮಳೆಯೂ ಬರದೆ, ಇತ್ತ ಸಮರ್ಪಕವಾಗಿ ವಿದ್ಯುತ್ ಸರಬರಾಜು ಇಲ್ಲದಂತಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಜಿಪಂ ಸದಸ್ಯೆ ವನಮಾಲಾ ದೇವರಾಜ್ ತಿಳಿಸಿದರು.
ಅವರು ತಾಲೂಕಿನ ಹಿರೇನಲ್ಲೂರು ಗ್ರಾಮದ ಶ್ರೀಹೇಮರೆಡ್ಡಿ ಮಲ್ಲಮ್ಮ ವೀರಶೈವ ಕಲ್ಯಾಣ ಮಂಟಪದಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ, ಕಂದಾಯ, ಸಹಕಾರ, ಕೃಷಿ ಮಾರುಕಟ್ಟೆ ಸಮಿತಿ, ಅರಣ್ಯ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮೀನುಗಾರಿಕೆ, ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಾಗೂ ಇತರೆ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಹಸ್ತಪ್ರತಿ ಬಿಡುಗಡೆಗೊಳಿಸಿ ಮಾತನಾಡಿದರು. ಹಿರೇನಲ್ಲೂರು ಭಾಗದಲ್ಲಿ ಹೆಚ್ಚಾಗಿ ಎರೆ ಭೂಮಿ ಇರುವುದರಿಂದ ಯಾವ ಬೆಳೆ ಬೆಳೆಯಬಹುದು, ಯಾವ ಇಲಾಖೆಗಳಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂಬುದನ್ನು ತಿಳಿಯಲು ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರ ಪ್ರಯೋಜನ ವನ್ನು ರೈತರು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.
ಸರಕಾರ ಕೃಷಿಯ ಅಭಿವೃದ್ಧಿಗಾಗಿ ಹೇರಳವಾಗಿ ಖರ್ಚು ಮಾಡುತ್ತಿದೆ. ಸಬ್ಸಿಡಿ ದರದಲ್ಲಿ ಬಿತ್ತನೆಬೀಜ, ಸಲಕರಣೆಗಳನ್ನು ರೈತರಿಗಾಗಿ ನೀಡುತ್ತಿದೆ. ಇದರ ಅನುಕೂಲವನ್ನು ಪಡೆಯಬೇಕಿದೆ ಎಂದರು. ತಾಪಂ ಅಧ್ಯಕ್ಷೆ ರೇಣುಕಾ ಉಮೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತ ರಿಗೆ ಇಲಾಖೆ ಕೃಷಿ ಅಭಿಯಾನ ಕಾರ್ಯಕ್ರಮ ವನ್ನು ತಾಲೂಕಿನ ಎಲ್ಲ ಹೋಬಳಿ ಕೇಂದ್ರಗಳಲ್ಲಿ ನಡೆಸಲಾಗುತ್ತಿದ್ದು, ರೈತರು ಇಂತಹ ಉಪಯುಕ್ತ ಕಾರ್ಯಕ್ರಮಗಳಿಗೆ ಬಾರದೇ ವಂಚಿತರಾಗುತ್ತಿದ್ದಾರೆ. ಹಾಗಾಗಿ ರೈತರು ಮುಂದೆ ಬಂದು ಕಾರ್ಯಕ್ರಮಗಳಡಿಯಲ್ಲಿ ಮಾಹಿತಿ ಪಡೆದು ಪ್ರಯೋಜನ ಪಡೆಯಬೇಕಿದೆ ಎಂದು ತಿಳಿಸಿದರು. ಸಹಾಯಕ ಕೃಷಿ ನಿರ್ದೇಶಕ ಎ.ಪಿ. ಶಿವಕುಮಾರ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ರವಿಕುಮಾರ್ ವಹಿಸಿದ್ದರು. ತಾಪಂ ಸದಸ್ಯೆ ಮಂಜುಳಾ, ಪುಟ್ಟಸ್ವಾಮಿ, ಉಪಕೃಷಿ ನಿರ್ದೇಶಕ ಚಂದ್ರಶೇಖರ್, ಭೂ ಅಭಿವೃದ್ಧಿ ಬ್ಯಾಂಕಿನ ಮಾಜಿ ಅಧ್ಯಕ್ಷ ಡಿ.ಉಮೇಶ್, ತಾಪಂ ಮಾಜಿ ಅಧ್ಯಕ್ಷ ಸೀಗೆಹಡ್ಲು ಹರೀಶ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿಸಲೆರೆ ಕೆಂಪರಾಜ್, ಗ್ರಾಪಂ ಸದಸ್ಯರಾದ ನಿಜಗುಣ, ಭಾರತಿ, ಹೇಮಾವತಿ, ಉಮಾ, ಕೃಷಿ ಅಧಿಕಾರಿ ಲೋಕನಾಥ್, ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.







