ತುಳು ಭಾಷೆ, ಸಂಸ್ಕೃತಿ ಬೆಳವಣಿಗೆಗೆ ಕೈಜೋಡಿಸಿ: ಶ್ರೀಧರ್ ನೆಲ್ಲಿತ್ತಾಯ
ತುಳುವೆರನ ಜನಪದ ಕೂಟದ ಸಭೆ

ಮಡಿಕೇರಿ ಜೂ.12: ಕೊಡಗು ಜಿಲ್ಲೆಯಲ್ಲಿ ಸುಮಾರು ಒಂದೂವರೆ ಲಕ್ಷ ಜನಸಂಖ್ಯೆ ಹೊಂದಿ ರುವ ತುಳು ಭಾಷಿಕರು ಭಾಷಾಭಿಮಾನವನ್ನು ಮೂಡಿಸಿಕೊಳ್ಳುವುದರೊಂದಿಗೆ ಸಂಸ್ಕೃತಿಯ ಬೆಳ ವಣಿಗೆಗೆ ಶ್ರಮಿಸಬೇಕು ಎಂದು ತುಳುವೆರನ ಜನಪದ ಕೂಟದ ಜಿಲ್ಲಾ ಸಂಚಾಲಕ ಶ್ರೀಧರ್ ನೆಲ್ಲಿತ್ತಾಯ ಕರೆ ನೀಡಿದ್ದಾರೆ.
ಅವರು ನಗರದ ಬಾಲಭವನದಲ್ಲಿ ನಡೆದ ತುಳುವೆರನ ಜನಪದ ಕೂಟದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಕರಾವಳಿ ಪ್ರದೇಶದ ಸಂಸ್ಕೃತಿ ತುಳು ಭಾಷಿಕರದ್ದಾಗಿದ್ದು, ಈ ಶ್ರೀಮಂತ ಸಂಸ್ಕೃತಿ ನಶಿಸದಂತೆ ಕಾಯ್ದುಕೊಳ್ಳಬೇಕಿದೆ. ಇತ್ತೀಚೆಗಿನ ದಿನಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ವ್ಯಾಮೋಹದಿಂದ ಮಾತೃ ಭಾಷೆಯಾದ ತುಳುವನ್ನು ಮರೆಯಲಾಗುತ್ತಿದೆ. ಮುಂದಿನ ಪೀಳಿಗೆಗೆ ಈ ವಿಶಿಷ್ಟ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವ ಕಾರ್ಯವಾಗಬೇಕಿದೆ ಎಂದರು.
ಕೂಟದ ಜಿಲ್ಲಾ ಗೌರವ ಸಲಹೆಗಾರರಾದ ಜಯಂತಿ ಆರ್.ಶೆಟ್ಟಿ ಮಾತನಾಡಿ, ಒಂದೇ ಭಾಷಿಕರಾದ ಏಳು ಸಮುದಾಯದವರನ್ನು ಒಂದೆ ವೇದಿಕೆಯಲ್ಲಿ ಒಗ್ಗೂಡಿಸಿರುವುದು ಉತ್ತಮ ಬೆಳವಣಿಗೆ. ಜನಾಂಗ ಬಾಂಧವರು ತುಳು ಆಚಾರ, ವಿಚಾರದ ಉಳಿವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಮೊಗೇರಾ ಸಮಾಜದ ಜಿಲ್ಲಾಧ್ಯಕ್ಷ ಪಿ.ಎಂ.ರವಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಘಟನೆಯ ಸಮಿತಿಗಳನ್ನು ರಚಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಪಿ.ಎಂ. ರವಿ, ಮಡಿಕೇರಿ ತಾಲೂಕು ಅಧ್ಯಕ್ಷರಾಗಿ ಪ್ರಭು ರೈ, ಉಪಾಧ್ಯಕ್ಷರಾಗಿ ಎಂ.ಡಿ.ಸುರೇಶ್ ಕುಲಾಲ್, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಸ್.ಜಯಪ್ಪ, ಖಜಾಂಚಿಯಾಗಿ ಬಿ.ಜಿ.ಲೋಕೇಶ್ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮವನ್ನು ಕೂಟದ ಸಂಸ್ಥಾಪಕಾಧ್ಯಕ್ಷ ಶೇಖರ್ ಭಂಡಾರಿ ಉದ್ಘಾಟಿಸಿದರು. ಬಂಟರ ಸಮಾಜದ ಜಿಲ್ಲಾಧ್ಯಕ್ಷ ಬಿ.ಡಿ.ನಾರಾಯಣ ರೈ, ಬಿಲ್ಲವ ಸಮಾಜದ ಜಿಲ್ಲಾಧ್ಯಕ್ಷ ಬಿ.ವೈ. ಆನಂದರಘು, ಕುಲಾಲ್ ಸಮಾಜದ ಅಧ್ಯಕ್ಷ ನಾಣಯ್ಯ, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ರಮೇಶ್ ಆಚಾರ್ಯ, ಬ್ರಾಹ್ಮಣ ಸಮಾಜದ ಅಧ್ಯಕ್ಷ ಗೊಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು







