ಕಸಾಪ ಮತಪಟ್ಟಿ ಪರಿಷ್ಕರಣೆ: ಕುಂದೂರು ಅಶೋಕ್
ಜಿಲ್ಲಾ ಕಸಾಪ ಕಾರ್ಯಕಾರಿ ಸಭೆ

ಚಿಕ್ಕಮಗಳೂರು, ಜೂ.12: ಕಸಾಪ ಸದಸ್ಯರ ಹಾಗೂ ಸಾಹಿತ್ಯ ವಲಯದ ನಿರೀಕ್ಷೆ ಮತ್ತು ಬೇಡಿಕೆಯಾದ ಮತಪಟ್ಟಿ ಪರಿಷ್ಕರಣೆಯು ಒಂದೆರಡು ತಿಂಗಳಲ್ಲಿ ಈಡೇರಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್ ತಿಳಿಸಿದ್ದಾರೆ.
ಅವರು ರವಿವಾರ ಜಿಲ್ಲಾ ಕಸಾಪ ಕಚೇರಿಯಲ್ಲಿ ನಡೆದ ಜಿಲ್ಲಾ ಕಸಾಪ ಕಾರ್ಯಕಾರಿ ಎರಡನೆ ಸಭೆಯಲ್ಲಿ ಮಾತನಾಡಿ, ಕಸಾಪ ಸದಸ್ಯರ ಬಹುದಿನದ ಬೇಡಿಕೆ ಯಾದ ಮತಪಟ್ಟಿ ಪರಿಷ್ಕರಣೆಗೆ ರಾಜ್ಯ ಕಸಾಪ ಅಧ್ಯಕ್ಷರು ಒಪ್ಪಿಗೆ ಸೂಚಿಸಿದ್ದಾರೆ. ಕಸಾಪ ಸದಸ್ಯರು ಈ ಸಂದರ್ಭದಲ್ಲಿ ತಾಲೂಕು, ಕಸಾಪ ಅಧ್ಯಕ್ಷರು ಹಾಗೂ ಹೋಬಳಿ ಕಸಾಪ ಅಧ್ಯಕ್ಷರನ್ನು ಸಂಪರ್ಕಿಸಿ ವಿಳಾಸ ಬದಲಾವಣೆ ತಿದ್ದುಪಡಿ ಹಾಗೂ ಸದಸ್ಯತ್ವ ಪಡೆದು 3ವರ್ಷ ಮುಗಿದಿದ್ದರೂ ಮತಪಟ್ಟಿಯಲ್ಲಿ ಸೇರದಿದ್ದರೆ ಸೇರಿಸಬಹುದಾಗಿದೆ ಎಂದು ನುಡಿದರು.
ಕೆಲವು ದಶಕಗಳ ನಂತರ ಈ ಕಾರ್ಯವನ್ನು ಕಸಾಪ ಕೈಗೆತ್ತಿಕೊಂಡರುವುದರಿಂದ ಜುಲೈ ಅಂತ್ಯದೊಳಗೆ ಪರಿಷ್ಕೃತ ಮತ ಪಟ್ಟಿ ಸಿದ್ಧವಾಗಲಿದೆ. ಈ ಅವಕಾಶವನ್ನು ಕಸಾಪ ಅಜೀವ ಸದಸ್ಯರು ಸದುಪಯೋಗ ಪಡಿಸಿ ಕೊಳ್ಳಬೇಕೆಂದು ಎಲ್ಲ ಕಸಾಪ ಅಧ್ಯಕ್ಷರು ಕರೆ ನೀಡಿದ್ದಾರೆ. ಅಲ್ಲದೇ, ಗ್ರಾಪಂ ವ್ಯಾಪ್ತಿಯಲ್ಲಿ ಸ್ಥಳೀಯ ಸಾಹಿತಿ, ಕಲಾವಿದರ ಹೆಸರಿನಲ್ಲಿ ನಿವೇಶನ ಗುರುತಿಸಿ ಕಾನೂನು ರೀತಿಯ ದಾಖಲೆಗಳು, ನೀಲ ನಕಾಶೆ ಹಾಗೂ ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ರಾಜ್ಯ ಕಸಾಪಕ್ಕೆ ಸಲ್ಲಿಸಿದರೆ, ಗ್ರಾಮೀಣ ಅಭಿವೃದ್ಧಿ ಇಲಾಖೆ ಕಲಾಭವನ ನಿರ್ಮಿಸಲು 15ಲಕ್ಷ ರೂ. ಅನುದಾನ ನೀಡುತ್ತದೆ ಎಂದರು.
2016-17ನೆ ಸಾಲಿನ ದತ್ತಿನಿಧಿ ಕಾರ್ಯಕ್ರಮಗಳನ್ನು ತಾಲೂಕು ಹಂತದಲ್ಲಿ ಪ್ರಾರಂಭಿಸಬೇಕು. ದತ್ತಿ ಕಾರ್ಯಕ್ರಮವನ್ನು ಕೇವಲ ಉಪನ್ಯಾಸಕ್ಕೆ ಸೀಮಿತ ಗೊಳಿಸದೆ ಸಂಗೀತ, ಸಾಹಿತ್ಯ, ಸಂವಾದ, ಹರಟೆ ಚರ್ಚೆಗಳಂತಹ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡು ಶಾಲಾ-ಕಾಲೇಜು, ಮನೆಯಂಗಳದಲ್ಲಿ ದೇವಸ್ಥಾನ, ಸಮುದಾಯ ಕೇಂದ್ರಗಳು ಸಾರ್ವಜನಿಕ ಸ್ಥಳಗಳಲ್ಲಿ ಆಯೋಜಿಸಿ ಸಾಹಿತ್ಯ ಪ್ರಿಯರನ್ನು ಆಕರ್ಷಿಸಿ ಸಾರ್ವಜನಿಕ ಸ್ವರೂಪ ಕೊಡಬೇಕೆಂದು ಅಭಿಪ್ರಾಯಪಟ್ಟರು.
ಗ್ರಾಮ, ಹೋಬಳಿ ಹಾಗೂ ತಾಲೂಕು ಸಮ್ಮೇಳನ ಮಾಡಲಿಚ್ಚಿಸುವರು ಜಿಲ್ಲಾ ಕಸಾಪಕ್ಕೆ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆ ಪಡೆದುಕೊಳ್ಳಲು ತಿಳಿಸಿದರು. ಬರುವ ಜು. 3ನೆ ರಂದು ರವಿವಾರ ಕನ್ನಡದ ಪ್ರಾಚೀನ ಶಾಸನವಿರುವ ಹಲ್ಮಿಡಿಯಲ್ಲಿ ಜಿಲ್ಲಾ ಕಸಾಪ ಚಿಕ್ಕಮಗಳೂರು ಹಾಗೂ ಹಾಸನದ ಸಹಯೋಗದಲ್ಲಿ ಇಡೀ ದಿನ ಸಾಹಿತ್ಯೋತ್ಸವ ನಡೆಸಲಾಗುವುದು. ಜಿಲ್ಲೆಯ ಕವಿಗಳು, ಲೇಖಕರು, ಮತ್ತು ಸಾಹಿತ್ಯಾಸಕ್ತರು ಪಾಲ್ಗೊಳ್ಳಬೇಕೆಂದು ಕುಂದೂರು ಅಶೋಕ್ ಮನವಿ ಮಾಡಿದರು.
ಸಭೆಯಲ್ಲಿ ತಾಲೂಕು ಅಧ್ಯಕ್ಷರು ಹಾಗೂ ಜಿಲ್ಲಾ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.







