ಜಿಲ್ಲಾ ಮಟ್ಟದ ರಸ್ತೆ ಓಟ, ಸ್ಕೇಟಿಂಗ್ ಸ್ಪರ್ಧೆ
ಪುರುಷರ ವಿಭಾಗದಲ್ಲಿ ಕೀರ್ತಿರಾಜ್,ಮಹಿಳಾ ವಿಭಾಗದಲ್ಲಿ ಶಿಶಿರ ಎ.ಗೌಡಗೆ ಪ್ರಶಸ್ತಿ
ಚಿಕ್ಕಮಗಳೂರು, ಜೂ.12: ಚಿಕ್ಕಮಗಳೂರಿನಲ್ಲಿ ರವಿವಾರ ನಡೆದ ಜಿಲ್ಲಾ ಮಟ್ಟದ ರಸ್ತೆ ಓಟದ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಕೀರ್ತಿರಾಜ್ ಹಾಗೂ ಶಿಶಿರ ಎ.ಗೌಡ ಮಹಿಳೆಯರ ವಿಭಾಗದ ಜಯ ಗಳಿಸಿ ಪ್ರಶಸ್ತಿಗೆ ಪಡೆದಿದ್ದಾರೆ. ತೀವ್ರ ಪೈಪೋಟಿಯಿಂದ ಕೂಡಿದ್ದ ಪುರುಷರ ವಿಭಾಗದ 6ಕಿಮೀ. ಓಟದ ಸ್ಪರ್ಧೆಯಲ್ಲಿ ವಿಜೇತರಾದ ಕಲ್ಲತ್ತಿಪುರದ ಕೀರ್ತಿರಾಜ್‌ರನ್ನು ಪರಾಭವಗೊಳಿಸಲು ಕೊನೆಯ ಕ್ಷಣ ದವರೆಗೂ ಯತ್ನಿಸಿ ವಿಫಲರಾದ ಮೂಗ್ತಿಹಳ್ಳಿಯ ಸಚಿನ್ ಡಿ.ಟಿ. ದ್ವಿತೀಯ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ನಗರದ ಸೈಂಟ್ ಮೇರಿ ಶಾಲೆಯ ಶ್ರೇಯಸ್ ಸಿ.ಎಂ.ಮೂರನೇ ಸ್ಥಾನ ಪಡೆದರು.
ಮಹಿಳೆಯರ ವಿಭಾಗದಲ್ಲಿ ಲೀಲಾಜಾಲವಾಗಿ ಓಡಿದ ಸಾಯಿ ಏಂಜಲ್ಸ್ ಶಾಲೆಯ ವಿದ್ಯಾರ್ಥಿನಿ ಶಿಶಿರ ಎ.ಗೌಡ ಪ್ರಥಮ ಸ್ಥಾನ ಪಡೆದರೆ, ಎಂಇಎಸ್ ಶಾಲೆಯ ಅನುಷಾ ಕಾರ್ಲೊ ಹಾಗೂ ನಿರ್ಮಲಾ ಎರಡನೆ ಮತ್ತು ಮೂರನೆ ಸ್ಥಾನ ಪಡೆದರು. ಇದೇ ಸಂದರ್ಭದಲ್ಲಿ ನಡೆದ ಬಾಲಕ, ಬಾಲಕಿಯರ ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಬಾಲಕರ ವಿಭಾಗದ ಪ್ರಶಸ್ತಿ ವಿಶ್ವಾಸ್ ಪಾಲಾದರೆ, ಬಾಲಕಿಯರ ವಿಭಾಗದ ಪ್ರಶಸ್ತಿಯನ್ನು ಕೇಶವಿ ಜೈನ್ ಪಡೆದರು. ರಸ್ತೆ ಮತ್ತು ಸ್ಕೇಟಿಂಗ್ ಸ್ಪರ್ಧೆಗೆ ಒಟ್ಟು 300ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ವಸಂತ ದತ್ತಾತ್ರಿ ಬಾವುಟ ತೋರಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು. ಸ್ಪರ್ಧೆಯಲ್ಲಿ ಗೆದ್ದವರಿಗೆ ನಗದು ಹಾಗೂ ಪಾರಿತೋಷಕಗಳನ್ನು ಇದೇ ಜೂ. 17ರ ಸಂಜೆ ಆ್ಯಪಲ್ ಫಿಟ್‌ನೆಸ್ ಕೇಂದ್ರದಲ್ಲಿ ನಡೆಯುವ ಸಮಾರಂಭದಲ್ಲಿ ವಿತರಿಸಲಾಗುವುದು. ಡಾ.ಶ್ರೀನಿವಾಸ್ ಡಿ. ಹಾಗೂ ಚಿಕ್ಕಮಗಳೂರು ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಬಿ.ಎಚ್.ಉದಯ್ ಪೈ ಮತ್ತು ಜಿಲ್ಲೆಯ ಹಿರಿಯ ಕ್ರೀಡಾಪಟು ಬಿ.ಎಚ್.ನರೇಂದ್ರ ಪೈ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪುರುಷರ ವಿಭಾಗ: ಕೀರ್ತಿರಾಜ್ ಪ್ರಥಮ, ಸಚಿನ್ ಡಿ.ಟಿ. ದ್ವಿತೀಯ, ಶ್ರೇಯಸ್ ಸಿ.ಎಂ. ತೃತೀಯ ಸ್ಥಾನ ಪಡೆದರು. ಮಹಿಳೆಯರ ವಿಭಾಗ: ಶಿಶಿರ ಎಂ.ಗೌಡ ಪ್ರಥಮ, ಅನುಷಾ ಕಾರ್ಲೋ ದ್ವಿತೀಯ, ನಿರ್ಮಲಾ ತೃತೀಯ ಪಡೆದುಕೊಂಡರು. 14ವರ್ಷದೊಳಗಿನ ಬಾಲಕರ ವಿಭಾಗ: ಮನೋಜ್ ಸಿ.ಎ.ಪ್ರಥಮ, ಕಿರಣ್ ಡಿ.ಎನ್.ದ್ವಿತೀಯ, ಮುಹಮ್ಮದ್ ಬಿ. ತೃತೀಯ ಬಹುಮಾನ ಗಳಿಸಿದರು. 14ವರ್ಷದೊಳಗಿನ ಬಾಲಕಿಯರ ವಿಭಾಗ:
ವೌಲ್ಯ ಚಂದ್ರಶೇಖರ್ ಪ್ರಥಮ, ಶ್ರೀನಿಧಿ ಜಿ. ದ್ವಿತೀಯ, ಸ್ಪಂಧನಾ ತೃತೀಯ ಸ್ಥಾನ ಗಳಿಸಿದರು. 40ವರ್ಷ ಮೇಲ್ಪಟ್ಟ ಪುರುಷರ ವಿಭಾಗ: ನೀಲಕಂಠ ಎಚ್.ಆರ್. ಪ್ರಥಮ, ಪುಟ್ಟರಾಜು ದ್ವಿತೀಯ, ಮಂಜುನಾಥ್ ಟಿ.ಕೆ. ತೃತೀಯ ಬಹುಮಾನ ಗಳಿಸಿದರು. 40ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗ: ವರಮಹಾಲಕ್ಷ್ಮೀ ಪ್ರಥಮ, ಶಾಂತಕುಮಾರಿ ಸಿ.ಎಂ. ದ್ವಿತೀಯ, ಪುಷ್ಪಾ ಎಸ್.ಶೆಟ್ಟಿ ತೃತೀಯ ಬಹುಮಾನ ಪಡೆದರು.
ಸ್ಕೇಟಿಂಗ್: ಬಾಲಕರ ವಿಭಾಗ (10-12 ವರ್ಷ): ವಿಶ್ವಾಸ್ ಪ್ರಥಮ, ಸುತೀರ್ಥ ದ್ವಿತೀಯ, ಹಾರ್ದಿಕ್ ತೃತೀಯ ಸ್ಥಾನ ಗಳಿಸಿದರು. ಬಾಲಕಿಯರ ವಿಭಾಗ (10-12 ವರ್ಷ): ಕೇಶವಿ ಜೈನ್ ಪ್ರಥಮ, ಲಕ್ಷ್ಮೀಪ್ರಿಯ ದ್ವಿತೀಯ ಸ್ಥಾನ ಪಡೆದರೆ, 6ವರ್ಷದೊಳಗಿನ ಬಾಲಕರ ವಿಭಾಗ: ಜಸ್ವಂತ್ ಪ್ರಥಮ, ಕುಶಾಲ್ ದ್ವಿತೀಯ, ಯಶಸ್ ತೃತೀಯ ಬಹುಮಾನ ಪಡೆದರು.







