ಚುಟುಕು ಸುದ್ದಿಗಳು
ಸಹಕಾರಿ ಬ್ಯಾಂಕ್‌ಗೆ ವಂಚನೆ: ಮತ್ತೊಬ್ಬ ಸೆರೆ
ಕಾಸರಗೋಡು, ಜೂ.12: ಮುಟ್ಟತ್ತೋಡಿ ಸೇವಾ ಸಹಕಾರಿ ಬ್ಯಾಂಕ್‌ನಿಂದ ನಾಲ್ಕು ಕೋಟಿ ರೂ. ವಂಚನೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೋರ್ವ ಆರೋಪಿಯನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ನಾಯಮ್ಮರಮೂಲೆ ಶಾಖೆಯ ಅಪ್ರೈಸರ್, ನೀಲೆಶ್ವರದ ಟಿ.ವಿ. ಸತೀಶ್ (40) ಎಂದು ಗುರುತಿಸಲಾಗಿದೆ. ಹಾಗಾಗಿ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ ಐದಕ್ಕೇರಿದೆ. ಪ್ರಮುಖ ಆರೋಪಿ ಕುಂಟಾರಿನ ಯು.ಕೆ.ಹಾರಿಸ್, ವಿದ್ಯಾನಗರ ಶಾಖೆಯ ಅಪ್ರೈಸರ್ ಟಿ.ವಿ. ಸತ್ಯಪಾಲನ್, ಚೆಂಗಳ ಸಿಟಿಜನ್ ನಗರದ ಕೆ.ಎ.ಅಬ್ದುಲ್ ಮಜೀದ್, ಜಯರಾಜನ್‌ರನ್ನು ಈಗಾಗಲೇ ಬಂಧಿಸಲಾಗಿದೆ.
ನೇಣು ಬಿಗಿದು ಮಹಿಳೆ ಆತ್ಮಹತ್ಯೆ
ಸುಳ್ಯ, ಜೂ.12: ಅಜ್ಜಾವರ ಗ್ರಾಮದ ಅತ್ಯಾಡಿಯಲ್ಲಿ ಮಹಿಳೆಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅತ್ಯಾಡಿ ರಾಘವ ಗೌಡರ ಪತ್ನಿ ಗೀತಾಕುಮಾರಿ (43) ರವಿವಾರ ಬೆಳಗ್ಗೆ ಮನೆ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ
.ಅಕ್ರಮ ಮರಳುಗಾರಿಕೆ ಜಾಮೀನು
ಉಪ್ಪಿನಂಗಡಿ, ಜೂ.12: ಅಕ್ರಮ ಮರಳು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ. ಮೇ 5ರಂದು ಉಪ್ಪಿನಂಗಡಿ ಪೊಲೀಸರು 34ನೆ ನೆಕ್ಕಿಲಾಡಿ ಜಂಕ್ಷನ್ ಬಳಿ ಅಕ್ರಮ ಮರಳು ಸಾಗಾಟದ ಎರಡು ಲಾರಿಗಳನ್ನು ವಶಪಡಿಸಿಕೊಂಡು ಮಾಲಕ ಬೆಂಗಳೂರಿನ ನರಸರೆಡ್ಡಿ ಹಾಗೂ ಮರಳು ದಂಧೆಯ ಏಜೆಂಟ್ ಶರವಣ್ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಪೊಲೀಸರ ಬಂಧನದಿಂದ ತಪ್ಪಿಸಿಕೊಂಡಿದ್ದ ಆರೋಪಿಗಳು ಮಂಗಳೂರು ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಆರೋಪಿಗಳ ಪರವಾಗಿ ನ್ಯಾಯವಾದಿಗಳಾದ ಅನಿಲ್ ಕುಮಾರ್ ಉಪ್ಪಿನಂಗಡಿ ಹಾಗೂ ಸಂದೇಶ್ ನಟ್ಟಿಬೈಲ್ ವಾದಿಸಿದರು.
ಪಜೀರು ಗೋವನಿತಾಶ್ರಯದಲ್ಲಿ ಸಸ್ಯಕಾಶಿಗೆ ಅಂಕುರಾರ್ಪಣೆ
ಉಳ್ಳಾಲ, ಜೂ.12: ಪ್ರತಿಯೊಂದು ಸೇವೆಯು ಭಗವಂತನ ಕೃಪೆಯಿಂದಾಗುತ್ತದೆ. ಮನುಷ್ಯ ಕೇವಲ ನಿಮಿತ್ತ ಮಾತ್ರ. ಹೆತ್ತವರು, ಪರಿಸರ, ಗೋಸೇವೆ ಮೂಲಕ ಜೀವನವನ್ನು ಪಾವನಗೊಳಿಸಬಹುದು ಎಂದು ಕದ್ರಿ ಶ್ರೀಯೋಗೇಶ್ವರ ಮಠಾಧೀಶ ಯೋಗಿರಾಜ ನಿರ್ಮಲನಾಥಜಿ ಹೇಳಿದರು. ಪಜೀರು ಬೀಜಗುರಿಯಲ್ಲಿರುವ ಗೋವನಿತಾಶ್ರಯದಲ್ಲಿ ರವಿವಾರ ನಡೆದ ಸಸ್ಯಕಾಶಿಗೆ ಅಂಕುರಾರ್ಪಣೆ ಕಾರ್ಯಕ್ರಮದಲ್ಲಿ ಗೋರಕ್ಷಾವಂಶ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶ್ರೀಮಾತಾ ಅಮೃತಾನಂದಮಯಿ ಮಠದ ಮಂಗಳೂರು ವಿಭಾಗದ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ,ಶ್ರೀಮರಕಡ ಕ್ಷೇತ್ರದ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮೀಜಿ ಮಾತನಾಡಿದರು. ಗೋವನಿತಾಶ್ರಯ ಪರಿಸರದಲ್ಲಿ ನೆಡಲಾದ ಸಸಿ ಗೋರಕ್ಷಾವಂಶ ಎಂದಾಗಿದೆ. ಈ ಮರ ಐದು ಸಾವಿರ ವರ್ಷಗಳಾದರೂ ಬೆಳೆಯುತ್ತಲೇ ಇರುತ್ತದೆ, 20 ಮಂದಿ ಹಿಡಿಯಲಾಗದಷ್ಟು ದಪ್ಪಇರುತ್ತದೆ, ಬರಗಾಲದಲ್ಲಿ ಮರ ಸೀಳಿದರೆ ಯಥೇಚ್ಛ ನೀರು ಹರಿಯುತ್ತದೆ ಎಂದು ಗೋವನಿತಾಶ್ರಯ ಟ್ರಸ್ಟ್ ಕಾರ್ಯದರ್ಶಿ ಡಾ.ಪಿ.ಅನಂತಕೃಷ್ಣ ಭಟ್ ವಿವರಿಸಿದರು. ರಾಜ್ಯ ಔಷಧಿ ಸಸ್ಯ ಪ್ರಾಧಿಕಾರದ ಸದಸ್ಯ ಡಾ.ಪಿ.ಸತ್ಯನಾರಾಯಣ ಭಟ್ ಔಷಧೀಯ ಸಸಿಗಳ ಬಗ್ಗೆ ಮಾಹಿತಿ ನೀಡಿ, ಪರಿಸರ ರಕ್ಷಣೆ, ಪ್ಲಾಸ್ಟಿಕ್ ಮತ್ತು ಮಾದಕ ವಸ್ತುಗಳ ವಿರುದ್ಧ ಪ್ರಮಾಣ ವಚನ ಬೋಧಿಸಿದರು. ಟ್ರಸ್ಟ್ ಕೋಶಾಧಿಕಾರಿ ಡಾ.ಅನಂತಲಕ್ಷ್ಮೀ ಭಟ್, ಟ್ರಸ್ಟಿಗಳಾದ ಎಲ್.ಶ್ರೀಧರ್ ಭಟ್, ರಘುರಾಮ ಕಾಜವ, ಚಂದ್ರಹಾಸ ಪೂಂಜ ಕಿಲ್ಲೂರುಗುತ್ತು, ಮನೋಹರ ತುಳಜಾರಾಂ, ಮೋಹನ್‌ದಾಸ್ ಪಡಿಯಾರ್, ಲಕ್ಷ್ಮೀಶ ಯಡಿಯಾಳ್, ರವಿ ರೈ ಪಜೀರು ಉಪಸ್ಥಿತರಿದ್ದರು. ಟ್ರಸ್ಟ್‌ನ ಗೌರವಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಸ್ವಾಗತಿಸಿದರು. ಟ್ರಸ್ಟಿ ರಾಜೇಶ್ ಶೆಟ್ಟಿ ಪಜೀರುಗುತ್ತು ಗಣ್ಯರ ಸಂದೇಶ ವಾಚಿಸಿದರು. ಟ್ರಸ್ಟಿ ಡಿ.ಎಸ್.ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಬೆಳ್ವೆ ದೇವಳಕ್ಕೆ ನುಗ್ಗಿ ಸೊತ್ತು ಕಳವು
ಶಂಕರನಾರಾಯಣ, ಜೂ.12: ಬೆಳ್ವೆ ಶ್ರೀಶಂಕರ ನಾರಾಯಣ ದೇವಸ್ಥಾನಕ್ಕೆ ಜೂ.10ರ ರಾತ್ರಿ ನುಗ್ಗಿದ ಕಳ್ಳರು ಅಪಾರ ವೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ದೇವಳದ ಬಾಗಿಲಿನ ಬೀಗವನ್ನು ಮುರಿದು ಒಳ ನುಗ್ಗಿದ ಕಳ್ಳರು ದೇವಳದ ಉಗ್ರಾಣ ಹಾಗೂ ಗರ್ಭಗುಡಿಯ ಒಳಗಿದ್ದ 3 ಬೆಳ್ಳಿಯ ಕಾಲುದೀಪ, 2 ಬೆಳ್ಳಿಯ ಸೌಟು, ಬಲ ಮೂರ್ತಿಯ ಮುಖವಾಡ, 2 ಬೆಳ್ಳಿಯ ಚತ್ರಿ, ಚಾಮರ, ಅಮ್ಮನವರ ಚಿನ್ನದ ತಾಳಿ ಬೊಟ್ಟು, ಬೆಳ್ಳಿಯ ತೀರ್ಥ ಬಟ್ಟಲು ಜೊತೆಗೆ ತೀರ್ಥ ಸೌಟು ಕಳವು ಮಾಡಿದ್ದಾರೆ. ಇವುಗಳ ಒಟ್ಟು ವೌಲ್ಯ 8,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಡಿಯಿಂದ ಬಿದ್ದು ಮೃತ್ಯು
ಮಣಿಪಾಲ, ಜೂ.12: ಪೆಯಿಂಟಿಂಗ್ ಕೆಲಸ ಮಾಡುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಜೂ.11ರಂದು ಮಧ್ಯಾಹ್ನ ವೇಳೆ ದೊಡ್ಡಣಗುಡ್ಡೆಯ ಬಳಿ ನಡೆದಿದೆ. ಮೃತರನ್ನು ನವೀನ್ ಎಂದು ಗುರುತಿಸಲಾಗಿದೆ. ಇವರು ದೊಡ್ಡಣಗುಡ್ಡೆ ಜಾನ್ ಕರ್ನೆಲಿಯೋ ಎಂಬವರ ಮನೆಯ ಗೋಡೆಗೆ ಪೆಯಿಂಟಿಂಗ್ ಕೆಲಸ ಮಾಡುತ್ತಿದ್ದ ವೇಳೆ ಆಯತಪ್ಪಿಬಿದ್ದರು. ಗಂಭೀರವಾಗಿ ಗಾಯಗೊಂಡ ಅವರು ಚಿಕಿತ್ಸೆ ಫಲಕಾರಿಯಾಗದೆ ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್‌ನಿಂದ ಬಿದ್ದು ಮಹಿಳೆ ಮೃತ್ಯು
ಬೈಂದೂರು, ಜೂ.12: ಬೈಕ್‌ನಿಂದ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಜೂ.11ರಂದು ಬೆಳಗ್ಗೆ ಬೈಂದೂರು ಬಂಕೇಶ್ವರದ ಮಾರುತಿ ವಿಲಾಸ ಹೊಟೇಲ್‌ನ ಎದುರು ನಡೆದಿದೆ.
ಮೃತರನ್ನು ಕಾವೇರಿ ಎಂದು ಗುರುತಿಸಲಾಗಿದೆ. ಇವರು ತನ್ನ ಮಗ ಅನಿಲ್ ಎಂಬಾತನ ಬೈಕ್‌ನ ಹಿಂಬದಿಯಲ್ಲಿ ಕುಳಿತು ವಿದ್ಯಾನಗರ ಕಡೆಯಿಂದ ಯಡ್ತರೆ ಕಡೆಗೆ ಹೋಗುತ್ತಿದ್ದಾಗ ಇಳಿಜಾರಿನಲ್ಲಿ ಜಾರಿ ಹಿಮ್ಮುಖವಾಗಿ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಇವರು ಮೃತಪಟ್ಟರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕ ಆತ್ಮಹತ್ಯೆ
ಮಂಜೇಶ್ವರ, ಜೂ.12: ಯುವಕನೊಬ್ಬ ಮನೆಯ ಕೊಠಡಿಯೊಳಗೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಬಂದ್ಯೋಡ್‌ನಲ್ಲಿ ರವಿವಾರ ಮಧ್ಯಾಹ್ನ 1 ಗಂಟೆಗೆ ನಡೆದಿದೆ.ಬಂದ್ಯೋಡ್ ಕೊಕ್ಕೆಚ್ಚಾಲ್ ಮುಹಮ್ಮದ್ ಕುಂಞಿ - ಖದೀಜಾ ದಂಪತಿಯ ಪುತ್ರ ರಶೀದ್ (25) ಆತ್ಮಹತ್ಯೆಗೈದ ಯುವಕ. ಉಪ್ಪಳ ಕೈಕಂಬದಲ್ಲಿ ಕಾರ್ಯಾಚರಿಸುತ್ತಿರುವ ಪ್ಲೈವುಡ್ ಅಂಗಡಿಯೊಂದರಲ್ಲಿ ನೌಕರನಾಗಿದ್ದ ರಶೀದ್, ರವಿವಾರ ಅಂಗಡಿಗೆ ರಜೆಯಾಗಿರುವುದರಿಂದ ಮನೆಯಲ್ಲಿಯೇ ಕೊಠಡಿಯೊಳಗೆ ನಿದ್ರಿಸುತ್ತಿದ್ದ ಎನ್ನಲಾಗಿದೆ. ಕೊಠಡಿಯೊಳಗಿನಿಂದ ಶಬ್ಧ್ದವೊಂದು ಕೇಳಿ ಬಂದಾಗ ಮನೆಯವರು ಕೊಠಡಿಯ ಬಾಗಿಲನ್ನು ತೆರೆಯಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಬಳಿಕ ಬಾಗಿಲು ಮುರಿದು ನೋಡಿದಾಗ ರಶೀದ್ ಫ್ಯಾನಿಗೆ ನೇಣು ಬಿಗಿದು ನೇತಾಡುತ್ತಿರುವ ದೃಶ್ಯ ಕಂಡು ಬಂದಿದೆ. ಕೂಡಲೇ ಉಪ್ಪಳದ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಜೀವವನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಕುಂಬಳೆ ಪೊಲೀಸರು ದೂರು ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಮರದ ರೆಂಬೆ ಮುರಿದು ವಾಹನ, ವಿದ್ಯುತ್ ತಂತಿಗಳಿಗೆ ಹಾನಿ
ಮಂಜೇಶ್ವರ, ಜೂ.12: ಬದಿಯಡ್ಕ ಪೇಟೆಯ ಸರ್ಕಲ್ ಬಳಿ ಆಲದ ಮರದ ರೆಂಬೆಯೊಂದು ಮುರಿದು ಬಿದ್ದು,ಮೂರು ವಾಹನಗಳು ಹಾನಿಗೊಂಡ ಘಟನೆ ರವಿವಾರ ಬೆಳಗ್ಗೆ ನಡೆದಿದೆ.
ಸರ್ಕಲ್ ಬಳಿಯ ಪಿಕ್‌ಅಪ್ ವಾಹನಗಳ ನಿಲ್ದಾಣ ಸಮೀಪದ ಬೃಹತ್ ಆಲದ ಮರದ ರೆಂಬೆ ಮುರಿದು ಬಿದ್ದು ಮೂರು ಪಿಕ್‌ಅಪ್ ವಾಹನಗಳು ಹಾನಿಗೊಂಡವು. ಅಲ್ಲದೆ ವಿದ್ಯುತ್ ತಂತಿಗಳೂ ತುಂಡರಿಸಲ್ಪಟ್ಟಿವೆ. ಈ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ನಡೆಯಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ.
ಕಾಸರಗೋಡಿನಿಂದ ಆಗಮಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ ನಾಗರಿಕರ ಸಹಾಯದಿಂದ ಮರಗಳನ್ನು ತೆರವುಗೊಳಿಸಿದರು.
ಚಿನ್ನಾಭರಣದೊಂದಿಗೆ ಅಕ್ಕಸಾಲಿಗ ಪರಾರಿ
ಬಂಟ್ವಾಳ, ಜೂ. 12: ಬಿ.ಸಿ.ರೋಡಿನಲ್ಲಿರುವ ಅಪೂರ್ವ ಜ್ಯುವೆಲ್ಲರಿಯಲ್ಲಿ ಕೆಲಸ ಮಾಡುತ್ತಿದ್ದ ಅಕ್ಕಸಾಲಿಗನೊಬ್ಬ ಲಕ್ಷಾಂತರ ರೂ. ವೌಲ್ಯದ ಚಿನ್ನಾರಣ ಸಹಿತ ಪರಾರಿಯಾದ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ನಿವಾಸಿ ಪಿಂಟೊರಾವತ್ ಚಿನ್ನಾಭರಣದೊಂದಿಗೆ ಪರಾರಿಯಾದ ಅಕ್ಕಸಾಲಿಗ. ಇಲ್ಲಿನ ಭಂಡಾರಿಬೆಟ್ಟು ನಿವಾಸಿ ಸೀತಾರಾಮ ಆಚಾರ್ಯ ಎಂಬವರ ಪುತ್ರ ಸುನೀಲ್ ಆಚಾರ್ಯ ನಡೆಸುತ್ತಿರುವ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ವಾಸುದೇವಾ ಪ್ಲಾಝಾ ವಾಣಿಜ್ಯ ಸಂಕೀರ್ಣದಲ್ಲಿರುವ ಅಪೂರ್ವ ಜ್ಯುವೆಲ್ಲರಿಯಲ್ಲಿ 10 ವರ್ಷಗಳಿಂದ ಅಕ್ಕಸಾಲಿಗನಾಗಿ ಪಿಂಟೊರಾವತ್ ಕೆಲಸ ಮಾಡುತ್ತಿದ್ದ. ಜೂ.6ರಂದು ಸಂಜೆ ಎಂದಿನಂತೆ ಚಹಾ ಕುಡಿದು ಬರುತ್ತೇನೆಂದು ಅಂಗಡಿಯಿಂದ ಹೊರಗೆ ಹೋದವನು ಮರಳಿ ಬಂದಿಲ್ಲ ಎನ್ನಲಾಗಿದೆ. ಇದರಿಂದಾಗಿ ಸಂಶಯಗೊಂಡ ಅಂಗಡಿ ಮಾಲಕ ಸುನೀಲ್ ಆಚಾರ್ಯ ಚಿನ್ನಾರಣವನ್ನು ಪರಿಶೀಲನೆ ನಡೆಸಿದಾಗ 272 ಗ್ರಾಂ ತೂಕದ 7.5 ಲಕ್ಷ ರೂ. ವೌಲ್ಯದ ಚಿನ್ನಾರಣ ದೋಚಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸುನೀಲ್ ಆಚಾರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅನುಮಾನಾಸ್ಪದ ವ್ಯಕ್ತಿಗಳ ಸೆರೆ
ಕುಂದಾಪುರ, ಜೂ.12: ಬಸ್ರೂರು ಕ್ರಾಸ್‌ನ ಕೆನರಾ ಬ್ಯಾಂಕ್ ಎಟಿಎಂ ಬಳಿ ರವಿವಾರ ಬೆಳಗಿನ ಜಾವ 4 ಗಂಟೆಗೆ ಅನುಮಾನಾಸ್ಪದವಾಗಿ ನಿಂತಿದ್ದ ಕರ್ಕುಂಜೆ ಗ್ರಾಮದ ನೇರಳಕಟ್ಟೆಯ ಸಂತೋಷ್(27), ಹರೀಶ್ (20), ರಾಘವೇಂದ್ರ (25) ಎಂಬವರನ್ನು ಬಂಧಿಸಿರುವ ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಿಂದೂ ಐಕ್ಯವೇದಿ ಮುಖಂಡನಿಗೆ ಹಲ್ಲೆ ಆರೋಪ
ಮಂಜೇಶ್ವರ, ಜೂ.12: ಪೆರ್ಲದಲ್ಲಿ ಶನಿವಾರ ಹಿಂದೂ ಐಕ್ಯವೇದಿ ಮತ್ತು ಮುಸ್ಲಿಂಲೀಗ್ ಕಾರ್ಯಕರ್ತರ ನಡುವೆ ಉಂಟಾದ ಘರ್ಷಣೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಎರಡೂ ತಂಡಗಳ 28 ಮಂದಿಗಳ ವಿರುದ್ಧ ಬದಿಯಡ್ಕ ಪೊಲೀಸರು ದೂರು ದಾಖಲಿಸಿದ್ದಾರೆ.
ಘರ್ಷಣೆಯಲ್ಲಿ ಹಿಂದೂ ಐಕ್ಯವೇದಿ ಜಿಲ್ಲಾ ಕಾರ್ಯದರ್ಶಿ ಗಣೇಶ್ ಶೆಟ್ಟಿ ಪೆರ್ಲ (41)ಹಾಗೂ ಲೀಗ್ ಕಾರ್ಯಕರ್ತ ಅನ್ವರ್ ಮರ್ತ್ಯ (29)ಗಾಯಗೊಂಡಿದ್ದು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿ ಹಿಂದೂ ಐಕ್ಯವೇದಿ ಮುಖಂಡ ಗಣೇಶ್ ಶೆಟ್ಟಿ ಪೆರ್ಲರಿಗೆ ಹಲ್ಲೆಗೊಳಿಸಿದ ಕೃತ್ಯ ಖಂಡಿಸಿ ರವಿವಾರ ಹಿಂದೂ ಐಕ್ಯವೇದಿ,ಬಿಜೆಪಿ ಸಹಿತ ವಿವಿಧ ಹಿಂದೂಪರ ಸಂಘಟನೆ ಗಳು ಪ್ರತಿಭಟನಾ ಮೆರವಣಿಗೆ ಮತ್ತು ಸಭೆ ನಡೆಸಿದವು. ಮುರಳೀಧರ ಯಾದವ್, ವಾಮನ ಆಚಾರ್ ಮತ್ತಿತರರು ಮಾತನಾ ಡಿದರು. ನಾರಾಯಣ ನಾಯಕ್ ಸ್ವಾಗತಿಸಿ, ರಮಾನಂದ ವಂದಿಸಿದರು.
ವ್ಯಕ್ತಿಗೆ ತಂಡದಿಂದ ಹಲ್ಲೆ: ಒಬ್ಬ ಸೆರೆ
ಉಪ್ಪಿನಂಗಡಿ, ಜೂ.12: ನೇತ್ರಾವತಿ ನದಿಗೆ ಸ್ನಾನಕ್ಕೆಂದು ತೆರಳಿದ ವ್ಯಕ್ತಿಗೆ ತಂಡವೊಂದು ಹಲ್ಲೆ ನಡೆಸಿ, ಮೊಬೈಲ್ ಫೋನ್, ನಗದು ಲೂಟಿ ಮಾಡಿದ ಘಟನೆ ಉಪ್ಪಿನಂಗಡಿಯಲ್ಲಿ ಶನಿವಾರ ನಡೆದಿದೆ. ಈ ತಂಡದ ಓರ್ವನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ್ದು, ಇನ್ನೊಬ್ಬಾತ ಪರಾರಿಯಾಗಿದ್ದಾನೆ. ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದ ಆರೋಪಿಯನ್ನು ಬಂಟ್ವಾಳ ಮೂಲದ ಅಭಿಜಿತ್ ಎಂದು ಗುರುತಿಸಲಾಗಿದೆ.
ತಿರುಪತಿ ಯಾತ್ರೆಗೆ ತೆರಳಿದ್ದ ಕಡಬ ಮೂಲದ ವಿಶ್ವನಾಥ ಪೂಜಾರಿ, ಶನಿವಾರ ಮುಂಜಾನೆ ಉಪ್ಪಿನಂಗಡಿ ಸಮೀಪದ ನೇತ್ರಾವತಿ ನದಿಗೆ ತೆರಳಿ ಸ್ನಾನ ಮಾಡಲು ಸಿದ್ಧತೆಯಲ್ಲಿರುವಾಗ ಯುವಕರಿಬ್ಬರು ವಿಶ್ವನಾಥ ಪೂಜಾರಿಗೆ ಹಲ್ಲೆ ನಡೆಸಿ ಹಣ, ಸೊತ್ತು ದೋಚಿದ್ದರು.
ಈ ಸಂದರ್ಭ ವಿಶ್ವನಾಥ ಪೂಜಾರಿ ಬೊಬ್ಬಿಟ್ಟಿದ್ದು, ಅಷ್ಟರಲ್ಲಿ ಸ್ಥಳೀಯರು ಧಾವಿಸಿ ಬಂದು ಒಬ್ಬನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈತನಿಂದ ಐದು ಮೊಬೈಲ್ ವಶಪಡಿಸಲಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣದ ತನಿಖೆ ನಡೆಸಲು ನಿರ್ಲಕ್ಷ ವಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸಹಾಯಧನ ಹಸ್ತಾಂತರ
ಮೂಡುಬಿದಿರೆ, ಜೂ.12: ದುಬೈನಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಪಡೆದ ಎಂ.ಕೆ.ಅನಂತರಾಜ್ ದೈಹಿಕ ಶಿಕ್ಷಣ ಕಾಲೇಜಿನ ವಿದ್ಯಾರ್ಥಿ ಭಾಸ್ಕರರಿಗೆ ಎಸ್.ಎಂ.ಸಿ. ಟ್ರಸ್ಟ್‌ನ ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಮುಖಾಂತರ ಕ್ರೀಡಾ ಇಲಾಖೆಯಿಂದ 35,000 ರೂ. ಸಹಾಯಧನ ದೊರಕಿರುತ್ತದೆ.







