ಪರ್ಯಾಯ ಆರ್ಥಿಕ ರಾಜಕಾರಣ ಇಂದಿನ ಅಗತ್ಯ: ಡಾ.ಎಂ.ಚಂದ್ರ ಪೂಜಾರಿ
ಉಡುಪಿ: ‘ಸೌಹಾರ್ದ ಸಂಕಲನ’ ಪುಸ್ತಕ ಬಿಡುಗಡೆ ಸಮಾರಂಭ

ಉಡುಪಿ, ಜೂ.12: ಇಂದು ಜನರ ಆಸಕ್ತಿಗೆ ವಿರುದ್ಧವಾದ ಸರಕಾರಗಳೇ ಆಡಳಿತ ನಡೆಸುತ್ತಿವೆ. ಈ ನಿಟ್ಟಿನಲ್ಲಿ ಪರ್ಯಾಯ ಆರ್ಥಿಕ ರಾಜಕಾರಣ ಅಗತ್ಯವಾಗಿದೆ. ಅದಕ್ಕೆ ಶಿಕ್ಷಣ, ಮಾಧ್ಯಮ ಹಾಗೂ ಸಾಂಸ್ಕೃತಿಕ ರಾಜಕೀಯ ಅತಿಮುಖ್ಯ ಎಂದು ಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕ ಡಾ.ಎಂ.ಚಂದ್ರ ಪೂಜಾರಿ ಹೇಳಿದ್ದಾರೆ.
ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮತ್ತು ಸೌಹಾರ್ದ ಪ್ರಕಾಶನದ ವತಿಯಿಂದ ಉಡುಪಿ ಅಜ್ಜರಕಾಡು ವಿಮಾ ನೌಕರರ ಸಂಘದ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ಡಾ.ಹಯವದನ ಮೂಡುಸಗ್ರಿಯವರ ‘ಸೌಹಾರ್ದ ಸಂಕಲನ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ‘ಕರ್ನಾಟಕದ ಜನಜೀವನದ ಮೇಲೆ ಜಾಗತೀಕರಣದ ಪರಿಣಾಮಗಳು’ ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು.
ಅಸಮಾನತೆ ಮೂಡಿಸುವ ಶಿಕ್ಷಣ, ಜನರನ್ನು ದಾರಿ ತಪ್ಪಿಸುವ ಮಾಧ್ಯಮ ಹಾಗೂ ಆಹಾರ, ಉಡುಗೆ ತೊಡುಗೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಂಸ್ಕೃತಿಕ ರಾಜಕಾರಣವನ್ನು ಸರಿಪಡಿಸದಿದ್ದರೆ ಪರ್ಯಾಯ ಆರ್ಥಿಕ ರಾಜಕಾರಣ ಅಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಜಾಗತೀಕರಣವು ಬಹಳ ದೊಡ್ಡ ಮಟ್ಟದಲ್ಲಿ ಆರ್ಥಿಕ ಅಸಮಾನತೆಯನ್ನು ಸೃಷ್ಟಿಸಿದೆ. ವರ್ಲ್ಡ್ ವೆಲ್ತ್ ರಿಪೋರ್ಟ್ ಪ್ರಕಾರ 2000 ಇಸವಿಯಲ್ಲಿ ಶೇ.1ರಷ್ಟು ಅತಿ ಶ್ರೀಮಂತರಲ್ಲಿದ್ದ ಶೇ.37ರಷ್ಟು ಸಂಪತ್ತು 2014ರಲ್ಲಿ ಶೇ.49ಕ್ಕೆ ಏರಿಕೆಯಾಗಿದೆ. ಇವರಲ್ಲಿದ್ದ ಶೇ.60ರಷ್ಟು ಸಂಪನ್ಮೂಲ 2014ಕ್ಕೆ ಶೇ.74ಕ್ಕೆ ಏರಿಕೆಯಾಗಿದೆ. ಅದೇ ರೀತಿ ಶೇ.10ರಷ್ಟಿರುವ ಅನುಕೂಲಸ್ಥರಲ್ಲಿ 2000ದಲ್ಲಿದ್ದ ಶೇ.60ರಷ್ಟು ಸಂಪನ್ಮೂಲವು 2014ರಲ್ಲಿ ಶೇ.74ಕ್ಕೆ ಹೆಚ್ಚಳವಾಗಿದೆ. ಇದಕ್ಕೆ ಜಾಗತೀಕರಣ ಹಾಗೂ ಚರಿತ್ರೆ ರೂಪಿಸಿದ ರಾಜಕೀಯ ವ್ಯವಸ್ಥೆಯ ಕೊಡುಗೆ ಕೂಡ ಇದೆ ಎಂದರು.
ಇಂದಿನ ಜಾಗತೀಕರಣ ಹಾಗೂ ಆಧುನೀಕರಣವನ್ನು ಜೀರ್ಣಿಸಿಕೊಳ್ಳಬೇಕಾದರೆ ಭೂಮಿ, ಬಂಡವಾಳ, ಶಿಕ್ಷಣ ಅಗತ್ಯ. ಸರಕಾರಗಳು ಬಡತನ ನಿವಾರಣೆ ಮಾಡುವ ಬದಲು ಬಡತನ ಸೃಷ್ಟಿಸುವ ನೀತಿಯನ್ನು ಅನುಸರಿಸುತ್ತಿದೆ. ಗುಣಮಟ್ಟದ ಪ್ರಜಾಪ್ರಭುತ್ವದಿಂದ ಗುಣಮಟ್ಟದ ಅಭಿವೃದ್ಧಿ ಸಾಧ್ಯ. ಇವೆರಡಕ್ಕೂ ಸಂಬಂಧ ಇದೆ. ಆದರೆ ಇಂದು ಪ್ರಜಾಪ್ರಭುತ್ವ ಎಂಬುದು ಸಂಕುಚಿತವಾಗಿದೆ. ಶೇ.10ರಷ್ಟಿರುವ ಮಹಿಳೆಯರ ಪ್ರತಿನಿಗಳು ಕೇವಲ ಶೇ.10ರಷ್ಟಿದ್ದರೆ ಶೇ.20ರಷ್ಟಿರುವ ಅಲ್ಪಸಂಖ್ಯಾತರ ಪ್ರತಿನಿಗಳು ಶೇ.5ರಷ್ಟಿದ್ದಾರೆ. ಬಹುಸಂಖ್ಯಾತ ದಲಿತರ ಪ್ರತಿನಿಗಳು ಶೇ.50ರಷ್ಟಿದ್ದರೂ ಉಪಯೋಗಕ್ಕೆ ಇಲ್ಲದಂತಾಗಿದೆ. ಉಳಿದಂತೆ ಮೇಲ್ವರ್ಗ ಹಾಗೂ ಮೇಲ್ಜಾತಿಯ ಪ್ರತಿನಿಗಳು ಅವರಿಗೆ ಬೇಕಾದ ನೀತಿಗಳನ್ನು ಜಾರಿಗೆ ತರುತ್ತಿದ್ದಾರೆ ಎಂದರು.
ಕೃತಿಯನ್ನು ವೇದಿಕೆಯ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ಎಲ್.ಅಶೋಕ್ ಬಿಡುಗಡೆಗೊಳಿಸಿದರು. ಅಧ್ಯಕ್ಷತೆಯನ್ನು ವೇದಿಕೆ ಜಿಲ್ಲಾಧ್ಯಕ್ಷ ಜಿ.ರಾಜಶೇಖರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ವಿಚಾರವಾದಿ ಗೋಪಾಲ ಬಿ.ಶೆಟ್ಟಿ, ಧರ್ಮಗುರು ರೆ.ಾ.ವಿಲಿಯಂ ಮಾರ್ಟಿಸ್ ಉಪಸ್ಥಿತರಿದ್ದರು. ಲೇಖಕ ಹಯವದನ ಮೂಡುಸಗ್ರಿ ಮಾತನಾಡಿದರು. ಪ್ರೊ.ಕೆ. ಣಿರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ದಿನಕರ ಬೆಂಗ್ರೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರೊ.ಸಿರಿಲ್ ಮಥಾಯಸ್ ವಂದಿಸಿದರು.
‘ಕ್ರೂರ ಸಾಲ, ತೆರಿಗೆ, ಕಾರ್ಮಿಕ ನೀತಿ’
ನಮ್ಮ ದೇಶದಲ್ಲಿ ಇಂದು ನೇರ ತೆರಿಗೆ ಶೇ.40ರಷ್ಟಿದ್ದರೆ ಪರೋಕ್ಷ ತೆರಿಗೆ ಶೇ.60ರಷ್ಟಿದೆ. ಅಂದರೆ ಇದರಲ್ಲಿ ಶ್ರೀಮಂತರಿಗಿಂತ ಬಡ, ಮಾಧ್ಯಮ ವರ್ಗದವರೇ ಹೆಚ್ಚಿನ ತೆರಿಗೆ ಪಾವತಿಸುತ್ತಿರುವುದು ಸ್ಪಷ್ಟವಾಗುತ್ತದೆ. ಆದರೆ ಶೇ.40ರಷ್ಟು ತೆರಿಗೆ ಪಾವತಿಸುವವರಿಗೆ 5.72 ಲಕ್ಷ ಕೋಟಿ ರೂ. ತೆರಿಗೆ ವಿನಾಯಿತಿ ನೀಡಲಾಗುತ್ತಿದೆ. ಯಾಕೆಂದರೆ ಅಕಾರದಲ್ಲಿರುವುದು ಇವರ ಪ್ರತಿನಿಗಳೇ ಹೊರತು ನಮ್ಮದಲ್ಲ ಎಂದು ಡಾ.ಎಂ.ಚಂದ್ರ ಪೂಜಾರಿ ಹೇಳಿದರು.
ಭಾರತದಲ್ಲಿ ಶೇ.40ರಷ್ಟು ಸಾಲವನ್ನು ಸಾಮಾನ್ಯ ವಲಯ ಹಾಗೂ ಶೇ.60ರಷ್ಟು ಸಾಲವನ್ನು ಆದ್ಯತೆ ವಲಯಕ್ಕೆ ನೀಡಲಾಗುತ್ತಿದೆ. ಶೇ.90ರಷ್ಟಿರುವ ಜನರಿಗೆ ಶೇ.40ರಷ್ಟು ಸಾಲವನ್ನು ಹಾಗೂ ಶೇ.10ರಷ್ಟಿರುವ ಜನರಿಗೆ ಶೇ.40ರಷ್ಟು ಸಾಲವನ್ನು ಹಂಚಿಕೆ ಮಾಡಲಾಗುತ್ತಿದೆ. ಇದರ ಪರಿಣಾಮವಾಗಿ ಸಾಮಾನ್ಯ ವರ್ಗದವರು ಹಾಗೂ ರೈತರು ಸರಕಾರಿ ಸಾಲ ಸಾಕಾಗದೆ ಹೊರಗಿನ ಸಾಲ ಪಡೆದು ಬಡ್ಡಿ ಪಾವತಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹೀಗೆ ನಮ್ಮ ತೆರಿಗೆ ಹಾಗೂ ಸಾಲ, ಕಾರ್ಮಿಕ ನೀತಿ, ಭೂ ಸುಧಾರಣೆ ನೀತಿಯು ಅತ್ಯಂತ ಕ್ರೂರವಾಗಿದೆ ಎಂದು ಅವರು ಟೀಕಿಸಿದರು.
ಮಾರುಕಟ್ಟೆಗೂ ಜಾತಿಗೂ ಸಂಬಂಧ ಇಲ್ಲದಿದ್ದರೂ ಖರೀದಿ ಸಾಮರ್ಥ್ಯಕ್ಕೂ ಜಾತಿಗೂ ಸಂಬಂಧ ಇದೆ. ಹೀಗಾಗಿ ಮಾರುಕಟ್ಟೆಯಲ್ಲಿ ಪರೋಕ್ಷವಾಗಿ ಜಾತಿ ಕೆಲಸ ಮಾಡುತ್ತಿದೆ. ಜಾಗತೀಕರಣವು ಲಿಂಗ ಅಸಮಾನತೆಯ ಮೇಲೂ ಪರಿಣಾಮ ಬೀರುತ್ತಿದೆ. ಕರಾವಳಿಯಲ್ಲಿ ಪ್ರಸ್ತುತ ಲಿಂಗಾನುಪಾತ 1,000 ಪುರುಷರಿಗೆ 1,021 ಮಹಿಳೆಯರಿದ್ದರೆ, ಆರು ವರ್ಷಕ್ಕಿಂತ ಕೆಳಗಿನ ಮಕ್ಕಳ ಲಿಂಗಾನುಪಾತದಲ್ಲಿ ಹೆಣ್ಣುಮಕ್ಕಳ ಸಂಖ್ಯೆಯು 1,000ಕ್ಕಿಂತಲೂ ಕಡಿಮೆ ಇರುವುದು ಕಂಡುಬರುತ್ತದೆ. ಅಂದರೆ ಇಂದು ಭ್ರೂಣಹತ್ಯೆ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿರುವುದು ಸ್ಪಷ್ಟವಾಗುತ್ತದೆ. ಇದರ ಹಿಂದೆ ಮಾರುಕಟ್ಟೆ ಆರ್ಥಿಕತೆ ಕೂಡ ಇರಬಹುದು.
-ಡಾ.ಎಂ.ಚಂದ್ರ ಪೂಜಾರಿ







