ಶಾಶ್ವತ ನೀರಾವರಿ ಹೋರಾಟಕ್ಕೆ ಚಾಲನೆ ನೀಡಿದ ಚಿತ್ರರಂಗ

ಕೋಲಾರ, ಜೂ.12: ಬಯಲು ಸೀಮೆ ಜಿಲ್ಲೆಗಳ ಶಾಶ್ವತ ನೀರಾವರಿ ಹೋರಾಟಕ್ಕೆ ಬೆಂಬಲ ಸೂಚಿಸಿ ಕೋಲಾರದಲ್ಲಿ ನಿರಂತರ ಹೋರಾಟಕ್ಕೆ ಚಾಲನೆ ನೀಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಮಂಡಳಿ, ನಿರ್ದೇಶಕರುಗಳ ಮಂಡಳಿ ಹಾಗೂ ಚಿತ್ರರಂಗದ ನಟ-ನಟಿಯರು ಕೋಲಾರದಲ್ಲಿ ಬೃಹತ್ ರ್ಯಾಲಿ ನಡೆಸಿದರು.
ಇಲ್ಲಿನ ಪ್ರವಾಸಿಮಂದಿರದಿಂದ ರವಿವಾರ ಬೆಳಗ್ಗೆ 11ಕ್ಕೆ ಪ್ರಾರಂಭವಾದ ಚಲನ ಚಿತ್ರರಂಗದ ತಾರಾಬಳಗದ ಬೃಹತ್ ಮೆರವಣಿಗೆಯಲ್ಲಿ ಸಾವಿರಾರು ಜನ ನೀರಾವರಿ ಹೋರಾಟಕ್ಕೆ ಜಯವಾಗಲೆಂದು ಘೋಷಣೆಗಳ ಹರ್ಷೋದ್ಗಾರಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಮಹಾತ್ಮಗಾಂಧಿ ರಸ್ತೆಯ ಮೂಲಕ ಸರ್ವಜ್ಞ ಉದ್ಯಾನವನದ ಮುಂಭಾಗದಲ್ಲಿ ನಿರ್ಮಿಸಲಾಗಿದ್ದ ಬೃಹತ್ ವೇದಿಕೆಯ ಬಳಿ ಸಮಾವೇಶಗೊಂಡರು.
ನೀರಾವರಿಗಾಗಿ ಪರಿತಪಿಸುತ್ತಿರುವ ಗಡಿನಾಡ ಜಿಲ್ಲೆ ಕೋಲಾರ ಜನತೆ ಅಪ್ಪಟ ಕನ್ನಡ ಪ್ರೇಮಿಗಳು, ಗೋಕಾಕ್ ಹೋರಾಟಕ್ಕೆ ಡಾ.ರಾಜ್‌ಕುಮಾರ್ ಅವರು ನೇತೃತ್ವವಹಿಸಿದ್ದರು, ಇದೀಗ ಬಯಲುಸೀಮೆ ಜಿಲ್ಲೆಗಳ ಶಾಶ್ವತ ನೀರಾವರಿ ಹೋರಾಟಕ್ಕೆ ವರನಟ ರಾಜ್‌ಕುಮಾರ್ ಪುತ್ರ ಶಿವರಾಜ್‌ಕುಮಾರ್ ಚಾಲನೆ ನೀಡುತ್ತಿದ್ದಾರೆ. ಈ ಹೋರಾಟ ನಿಲ್ಲದಂತೆ ಸರಕಾರ ಬೇಡಿಕೆ ಈಡೇರಿಸುವವರೆಗೂ ನಮ್ಮ ಕೂಗು ನಿಲ್ಲಬಾರದು ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಕರೆ ನೀಡಿದರು.
ಉತ್ತರ ಕರ್ನಾಟಕದ ಕಳಸಾಬಂಡೂರಿ ಹೋರಾಟ ಹಾಗೂ ಬಯಲು ಸೀಮೆ ಜಿಲ್ಲೆಗಳಲ್ಲಿ ಶಾಶ್ವತ ನೀರಾವರಿ ಹೋರಾಟ ಹಲವು ವರ್ಷಗಳಿಂದ ನಡೆಯುತ್ತಿದೆ, ಸರಕಾರ ಸಮಸ್ಯೆ ನಿವಾರಿಸುವಲ್ಲಿ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯ ಹಾಗೂ ನಿರ್ಮಾಪಕ ಸಿ.ಆರ್.ಮನೋಹರ್ ಮಾತನಾಡಿ, ನೀರಿನ ವಿಚಾರದಲ್ಲಿ ರಾಜಕಾರಣ ಮಾಡುವುದು ತರವಲ್ಲ, ಯಾವುದೇ ಸರಕಾರವಿರಲಿ ಜನರ ಅಗತ್ಯಗಳನ್ನು ಪೂರೈಸಬೇಕು, ಜಿಲ್ಲೆಯ ಜನರ ಕೂಗನ್ನು ಪರಿಗಣಿಸಿ ಶಾಶ್ವತ ನೀರಾವರಿ ಕಲ್ಪಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು.
ನೀರಿಗಾಗಿ ಮಹಾಹೋರಾಟ ನಡೆಯುವ ದಿನಗಳು ಪ್ರಾರಂಭವಾಗಿವೆ. ಭವಿಷ್ಯಕ್ಕಾಗಿ ನೀರಾವರಿ ಹೋರಾಟ ಅನಿವಾರ್ಯವಾಗಲಿದೆ, ಚಿತ್ರರಂಗ ನಿಮ್ಮ ಕುಟುಂಬದ ಸದಸ್ಯರಾಗಿ ನಿಮ್ಮ ಹೋರಾಟಗಳಲ್ಲಿ ಭಾಗವಹಿಸಲಿದೆ, ಈ ಹೋರಾಟವನ್ನು ಗಂಭೀರವಾಗಿ ತೆಗೆದುಕೊಂಡು ಹೋಗಬೇಕು ಎಂದು ನಟಿ ಪೂಜಾ ಗಾಂಧಿ ಅಭಿಪ್ರಾಯಪಟ್ಟರು.
ಮೆರವಣಿಗೆಯಲ್ಲಿ ಚಲನಚಿತ್ರ ನಟ ಡಾ.ಶಿವರಾಜ್‌ಕುಮಾರ್, ರಾಕ್‌ಲೈನ್ ವೆಂಕಟೇಶ್, ಸಾಧುಕೋಕಿಲ, ಯಶ್, ಬುಲೆಟ್ ಪ್ರಕಾಶ್, ನಟಿಯರಾದ ಪದ್ಮಾವಾಸಂತಿ, ಪೂಜಾಗಾಂಧಿ, ರಾಗಿಣಿ, ಕರಾಟೆ ಮಾಸ್ಟರ್ ಎ.ವಿ.ರವಿ, ನಿರ್ಮಾಪಕ ಸಿ.ಆರ್.ಮನೋಹರ್, ಸಾ.ರಾ.ಗೋವಿಂದ, ಅರುಣ್‌ಸಾಗರ್, ವಾಣಿಜ್ಯ ಮಂಡಳಿ ಕಾರ್ಯದರ್ಶಿ ಸುರೇಶ್, ರಾಮು, ಉಪಾಧ್ಯಕ್ಷ ಜಯರಾಮ್, ಉಮೇಶ್, ಎಂ.ಎಸ್.ರಮೇಶ್, ಹೆಚ್.ಡಿ.ಗಂಗರಾಜು, ನಾಗೇಂದ್ರಪ್ರಸಾದ್ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು ಸಮಾವೇಶದಲ್ಲಿ ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜು, ಹೋರಾಟ ಸಮಿತಿಯ ಹೊಳಲಿ ಪ್ರಕಾಶ್, ವಿ.ಕೆ.ರಾಜೇಶ್, ವೆಂಕಟೇಶ್, ಕೆ.ವಿ.ಶಂಕರಪ್ಪ, ಶ್ರೀಕೃಷ್ಣ, ಬಿ.ವಿ.ಮಹೇಶ್, ಚಿಕ್ಕಬಳ್ಳಾಪುರದ ಆಂಜನೇಯರೆಡ್ಡಿ, ಜೆ.ಜಿ.ನಾಗರಾಜ್, ಸಲಾವುದ್ದೀನ್ ಬಾಬು, ಡಾ.ಡಿ.ಕೆ.ರಮೇಶ್, ಸೋಮಶೇಖರ್, ಮುರಳಿಗೌಡ, ಓಂಶಕ್ತಿಚಲಪತಿ,ವತ್ತಿತರರು ಉಪಸ್ಥಿತರಿದ್ದರು.







