ಎರಡು ರಾಷ್ಟ್ರೀಯ ಪಕ್ಷಗಳಿಗೆ ಶನಿಕಾಟ ಶುರು: ರೇವಣ್ಣ

ಬೆಂಗಳೂರು, ಜೂ.12: ಭಿನ್ನಮತೀಯರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದಾಗಿನಿಂದ ಹಾಗೂ ಬಿಎಸ್‌ವೈ ಬಿಜೆಪಿ ಪಕ್ಷಕ್ಕೆ ಮರಳಿ ಸೇರಿದ ದಿನದಿಂದ ಎರಡು ಪಕ್ಷಗಳಿಗೂ ಶನಿಕಾಟ ಶುರುವಾಯಿತು ಎಂದು ಮಾಜಿ ಸಚಿವ, ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಅಭಿಪ್ರಾಯಪಟ್ಟಿದ್ದಾರೆ. ರವಿವಾರ ನಗರದ ಅರಮನೆ ಮೈದಾನದಲ್ಲಿ ಜೆಡಿಎಸ್ ಆಯೋಜಿಸಿದ್ದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಿಜೆಪಿ ಮುಖಂಡ ಬಿಎಸ್‌ವೈ, ಬಿಜೆಪಿ ಪಕ್ಷಕ್ಕೆ ಮರಳಿ ಸೇರಿದಾಗಿನಿಂದ ಶನಿಕಾಟ ಶುರುವಾದರೆ, ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್‌ನ ಎಂಟು ಜನ ಶಾಸಕರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ ದಿನದಿಂದ ಕಾಂಗ್ರೆಸ್ ಪಕ್ಷಕ್ಕೆ ಶನಿಕಾಟ ಶುರುವಾಯಿತು ಎಂದು ಅಭಿಪ್ರಾಯಿಸಿದರು. ಆರೋಗ್ಯ ಚೆನ್ನಾಗಿಲ್ಲದಿದ್ದರೂ ಆರೋಗ್ಯ ಚೆನ್ನಾಗಿದೆ ಎಂಬ ದೃಢೀಕರಣ ಪತ್ರ ಕೊಡಿಸಿ, ಮತಗಟ್ಟೆಯಲ್ಲಿ ಮತ ಚಲಾಯಿಸಲು ಒತ್ತಾಯಿಸುತ್ತಾರೆಂದು ಆಕ್ರೋಶ ವ್ಯಕ್ತಪಡಿಸಿದ ರೇವಣ್ಣ, ಕಾಂಗ್ರೆಸ್ ವರಿಷ್ಠೆ ಸೋನಿಯಾ ಹಾಗೂ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರು ಜಾತ್ಯತೀತ ಪಕ್ಷಗಳು ಒಂದಾಗಲಿ ಎಂದು ಒಂದು ಕಡೆ ಹೇಳುತ್ತಾರೆ. ಮತ್ತೊಂದು ಕಡೆ ಜಾತ್ಯತೀತ ಪಕ್ಷಗಳನ್ನು ಒಡೆಯುವ ಕೆಲಸ ಮಾಡುತ್ತಾರೆ ಎಂದು ಲೇವಡಿ ಮಾಡಿದರು. ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್ ಅವರನ್ನು ನಾನೇ ಪಕ್ಷಕ್ಕೆ ಕರೆದುಕೊಂಡು ಬಂದಿದ್ದೇ. ಆದರೆ ಈಗ ಅವರಿಗೆ ನಾನೇ ಗೇಟ್ ಪಾಸ್ ಕೊಟ್ಟು ಕಳುಹಿಸಿದ್ದೇನೆ. ಅಲ್ಲದೆ ಅವರಿಗೆ ತಾಕತ್ತು ಇದ್ದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ವಾಪಸ್ ಗೆಲ್ಲಲಿ ಎಂಬ ಸವಾಲು ಹಾಕಿದರು.
ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಪಕ್ಷವನ್ನು ಮುಗಿಸುತ್ತೇವೆ ಎಂದಾಗಲೆಲ್ಲ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದು ರಾಜ್ಯದಲ್ಲಿ ಉತ್ತಮ ಆಡಳಿತವನ್ನು ನೀಡಿದೆ. ಅದೇ ರೀತಿಯಾಗಿ 2017-18ರಲ್ಲಿ ಜೆಡಿಎಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದು ಉತ್ತಮ ಆಡಳಿತ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನವ ಉತ್ಸಾಹವನ್ನು ಕೂಗಿ ಕರೆಯೋಣ
ಕಾರ್ಯಕರ್ತರಿಗೆ ಎಚ್‌ಡಿಕೆ ಕರೆ
ಬೆಂಗಳೂರು, ಜೂ. 12: ‘ಗತ ಸಮಯದ ಮೃತ ಪಾಪವ ಸುಡು ತೊರೆ, ಅಪಜಯ ಅವಮಾನಗಳನ್ನು ಬಿಡು ಮರೆ, ಕಳಚಿ ಬೀಳಲಿ ನಮ್ಮೆಲ್ಲರ ಹಳೆ ಪೊರೆ, ನವ ಉತ್ಸಾಹವನ್ನು ಕೂಗಿ ಕರೆ’ ಎಂಬ ಕುವೆಂಪು ಅವರ ಕಾವ್ಯ ಸಾಲುಗಳೊಂದಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ‘ಹೊಸ ಉತ್ಸಾಹದೊಂದಿಗೆ ಪಕ್ಷವನ್ನು ಕಟ್ಟೋಣ’ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ರವಿವಾರ ಇಲ್ಲಿನ ಅರಮನೆ ಮೈದಾನದಲ್ಲಿ ಪಕ್ಷದ ವತಿಯಿಂದ ಏರ್ಪಡಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಗೈರುಹಾಜರಿ ಎದ್ದು ಕಾಣುತ್ತಿತ್ತು. ಸಿನೆಮಾ ಚಿತ್ರೀಕರಣ ನಿಮಿತ್ತ ಕುಮಾರಸ್ವಾಮಿ ವಿದೇಶಿ ಪ್ರವಾಸಕ್ಕೆ ತೆರಳಿದ್ದ ಹಿನ್ನೆಲೆಯಲ್ಲಿ ಅವರು ಸಮಾವೇಶಕ್ಕೆ ನಾಲ್ಕು ಪುಟಗಳ ಪತ್ರವನ್ನು ರವಾನಿಸಿದ್ದರು.
‘ದೀಪಾವಳಿಯ ಬಳಿಕ ಹೊಸ ಹಣತೆ ಹಚ್ಚೋಣ. ರಾಜ್ಯದ ಮೂಲೆ ಮೂಲೆಗಳಿಗೂ ಖುದ್ದು ನಾನೇ ಪ್ರವಾಸ ಹೋಗಿ, ಪಕ್ಷದ ಕಾರ್ಯಕರ್ತರನ್ನು ಪ್ರತ್ಯಕ್ಷವಾಗಿ ಭೇಟಿ ಮಾಡಿ ಹುರಿದುಂಬಿಸಿ ನಾನು ನಿಮ್ಮಿಂದ ಹೊಸ ಚೈತನ್ಯ ಪಡೆದೇ ಪಕ್ಷವನ್ನು ತಳಮಟ್ಟದಿಂದ ಸದೃಢಗೊಳಿಸುತ್ತೇನೆ. ನೀವು ನನ್ನ ಜೊತೆಯಲ್ಲಿರುವುದೇ ನನಗೆ ಸಾವಿರ ಆನೆ ಬಲ’ ಎಂದು ಕುಮಾರಸ್ವಾಮಿ ಪತ್ರಕರ್ತರಲ್ಲಿ ತಿಳಿಸಿದ್ದಾರೆ.
‘ನಾಯಕರಿಂದ ಪಕ್ಷ ಉಳಿಯೊಲ್ಲ, ಕಾರ್ಯಕರ್ತರೆಂಬ ತಾಯಿ ಬೇರಿನಿಂದಲೇ ಮಾತ್ರ ಪಕ್ಷ ಸದೃಢವಾಗಿರಲು ಸಾಧ್ಯ. ಪಕ್ಷವನ್ನು ಸದೃಢಗೊಳಿಸುವ ಹಾದಿಯಲ್ಲಿ ಕೆಲ ಮುಳ್ಳುಗಳು ಎದುರಾಗಬಹುದು. ಅವುಗಳೆಲ್ಲವನ್ನೂ ಮೆಟ್ಟಿ ನಿಲ್ಲುವ ದೃಢ ವಿಶ್ವಾಸ ನನ್ನದು. ಜೊತೆಗೆ ನೀವಿದ್ದರೆ ಸಾಕು. ನಮ್ಮನ್ನು ತುಳಿಯುವ ಶಕ್ತಿಗಳೆದುರು ಹುಲ್ಲುಗಾರಿಕೆಯಂತೆ ಎದ್ದು ನಿಂತು ಕೋಮುವಾದಿ, ಜಾತಿವಾದಿ ಪಕ್ಷಗಳಿಗೆ ಸೆಡ್ಡು ಹೊಡೆಯೋಣ’ ಎಂದು ಕುಮಾರಸ್ವಾಮಿ ತಮ್ಮ ಪತ್ರದಲ್ಲಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.







