ಜೂ.21ರಿಂದ 3 ದಿನಗಳ ವಿಚಾರ ಗೋಷ್ಠಿ
‘ಮಠಾಧೀಶರು ಮತ್ತು ಅಸ್ಪಶ್ಯತೆ’
ಬೆಂಗಳೂರು, ಜೂ. 12: ಮಠಾಧೀಶರು ವಿಮರ್ಶೆಗೆ ಅತೀತರೇ, ಮಠಾಧೀಶರು ಮತ್ತು ಜಾತಿ ವ್ಯವಸ್ಥೆ, ಮಠಾಧೀಶರು ಮತ್ತು ಅಸ್ಪಶ್ಯತೆ ಸಮಸ್ಯೆ, ಮಠಾಧೀಶರು ಮತ್ತು ವೌಢ್ಯಾಚರಣೆ ಸೇರಿದಂತೆ ಅಂತರ್ನಿರೀಕ್ಷಣೆಯ ಹಾದಿಯಲ್ಲಿ ಮಠಾಧೀಶರು ಎಂಬ ಘೋಷವಾಕ್ಯದೊಂದಿಗೆ ಪ್ರಗತಿಪರ ಮಠಾಧೀಶರ ವೇದಿಕೆ ಜೂ.21ರಿಂದ 23ರ ವರೆಗೆ ನಗರದ ಬಸವನಗುಡಿಯ ನಿಡುಮಾಮಿಡಿ ಮಠದಲ್ಲಿ ವಿಚಾರ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ.
‘ಮಠಾಧೀಶರು ವಿಮರ್ಶೆಗೆ ಅತೀತರೆ?’ ಎಂಬ ಉದ್ಘಾಟನಾ ಗೋಷ್ಠಿಯಲ್ಲಿ ನಾಗನೂರು ರುದ್ರಾಕ್ಷಿ ಮಠದ ಸಿದ್ದರಾಮ ಸ್ವಾಮಿ ಆಶಯನುಡಿ ಆಡಲಿದ್ದು, ಗದಗಿನ ತೋಂಟದಾರ್ಯಮಠದ ಡಾ.ತೋಂಟದಾರ್ಯ ಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ‘ಮಠಾಧೀಶರು ಮತ್ತು ಜಾತಿ ವ್ಯವಸ್ಥೆ’ ಕುರಿತ ಗೋಷ್ಠಿಯಲ್ಲಿ ಶಿವಯೋಗೀಶ್ವರ ಮಠದ ಜ್ಞಾನಪ್ರಕಾಶ ಸ್ವಾಮಿ ಮಾತನಾಡಲಿದ್ದಾರೆ.‘ಮಠಾಧೀಶರು ಮತ್ತು ಅಸ್ಪಶ್ಯತೆ ಸಮಸ್ಯೆ’ ಗೋಷ್ಠಿಯಲ್ಲಿ ಬಸವ ಮಂದಿರದ ಜಯ ಬಸವಾನಂದ ಸ್ವಾಮಿ ವಿಷಯ ಮಂಡನೆ ಮಾಡಲಿದ್ದಾರೆ.
ಜೂ.22ರಂದು ‘ಮಠಾಧೀಶರು ಮತ್ತು ಕೋಮುವಾದ’ ವಿಷಯ ಕುರಿತು ಮರುಳಶಂಕರ ದೇವರಮಠದ ಸಿದ್ದಬಸವ ಕಬೀರ ಸ್ವಾಮಿ ಮಾತನಾಡಲಿದ್ದಾರೆ. ‘ಮಠಾಧೀಶರು ಮತ್ತು ಭ್ರಷ್ಟಾಚಾರ’ ವಿಷಯ ಕುರಿತ ಗೋಷ್ಠಿಯಲ್ಲಿ ವಿರಕ್ತ ಮಠದ ಡಾ.ಶಿವಾನಂದ ಸ್ವಾಮಿ ಮಾತನಾಡಲಿದ್ದಾರೆ. ‘ಮಠಾಧೀಶರು ಮತ್ತು ರಾಜಕೀಯ’ ವಿಷಯದ ಬಗ್ಗೆ ಲಿಂಗಾಯತ ಪಂಚಮಸಾಲಿ ಮಠದ ಜಯ ಮೃತ್ಯುಂಜಯ ಸ್ವಾಮಿ ಮಾತನಾಡಲಿದ್ದಾರೆ.
‘ಮಠಾಧೀಶರು ಮತ್ತು ಲಿಂಗತಾರತಮ್ಯ’ ವಿಷಯವನ್ನು ಬಸವಧಾಮದ ಸತ್ಯವತಿ ದೇವಿ ಮಾತನಾಡಲಿದ್ದಾರೆ. ‘ಧಾರ್ಮಿಕ ಮುಖಂಡರು ನಡೆಸುತ್ತಿರುವ ಧ್ಯಾನ, ಯೋಗ, ಆಯುರ್ವೇದ’ ಇವು ಲಾಭದಾಯಕ ಉದ್ಯಮವಾಗುತ್ತಿದೆಯೇ ಎಂಬ ವಿಷಯ ಕುರಿತು ಧಾರವಾಡದ ರೇವಣ್ಣ ಸಿದ್ದೇಶ್ವರ ಮಠದ ಬಸವರಾಜ ದೇವರು ಸ್ವಾಮಿ ಮಾತನಾಡಲಿರುವರು.
ಜೂ.23ರಂದು ‘ಮಠಾಧೀಶರು ಮತ್ತು ವೌಢ್ಯಾಚರಣೆ’ ವಿಷಯ ಕುರಿತ ವಿಚಾರ ಗೋಷ್ಠಿಯಲ್ಲಿ ಸಾಣೆಹಳ್ಳಿ ಮಠದ ಪಟ್ಟಾಧ್ಯಕ್ಷ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ ಮಾತನಾಡಲಿದ್ದಾರೆ. ಸಮಾರೋಪ ಗೋಷ್ಠಿಯಲ್ಲಿ ‘ಸಂವಿಧಾನ ಮತ್ತು ಧರ್ಮ ಗ್ರಂಥಗಳು’ ಕುರಿತು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮಿ ಮಾತನಾಡಲಿದ್ದಾರೆ.





