ದಿಲ್ಲಿಯ ಅಪೋಲೊ ಆಸ್ಪತ್ರೆಯ ಮೂವರು ವೈದ್ಯರನ್ನು ತನಿಖೆಗೊಳಪಡಿಸಲಿರುವ ಪೊಲೀಸರು
ಮೂತ್ರಪಿಂಡ ಮಾರಾಟ ಜಾಲ
ಹೊಸದಿಲ್ಲಿ, ಜೂ.12: ಮೂತ್ರಪಿಂಡ ಮಾರಾಟ ಜಾಲವೊಂದನ್ನು ಭೇದಿಸಿ ಈಗಾಗಲೇ 10 ಜನರನ್ನು ಬಂಧಿಸಿರುವ ದಿಲ್ಲಿ ಪೊಲೀಸರು ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗಳಿಗೆ ಸಂಬಂಧಿಸಿ ದಂತೆ ಇಲ್ಲಿಯ ಪ್ರತಿಷ್ಠಿತ ಅಪೋಲೊ ಆಸ್ಪತ್ರೆಯ ಮೂವರು ಮೂತ್ರ ಪಿಂಡ ತಜ್ಞರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ. ಈ ಶಸ್ತ್ರಚಿಕಿತ್ಸೆಗಳು ಇವರ ಉಸ್ತುವಾರಿಯಲ್ಲಿಯೇ ನಡೆದಿದ್ದವು.
ಮೂತ್ರಪಿಂಡ ಮಾರಾಟ ಜಾಲದ ಸೂತ್ರಧಾರಿ ರಾಜಕುಮಾರ ರಾವ್ ವಿಚಾರಣೆ ವೇಳೆ ಈ ಮೂವರು ಹಿರಿಯ ವೈದ್ಯರ ಹೆಸರುಗಳು ಹೊರಗೆ ಬಂದಿವೆ. ಹಲವಾರು ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿದ್ದ ರಾವ್ ಇತರ ದೇಶಗಳಲ್ಲಿಯ ಇಂತಹುದೇ ಜಾಲಗಳ ಜೊತೆಗೆ ನಂಟು ಹೊಂದಿದ್ದನೆನ್ನಲಾಗಿದೆ.
ಮೂವರ ಪೈಕಿ ಓರ್ವ ವೈದ್ಯರು ಪ್ರಸ್ತುತ ಅಮೆರಿಕದಲ್ಲಿದ್ದು, ಗುರುವಾರ ಭಾರತಕ್ಕೆ ಮರಳಬೇಕಾಗಿತ್ತು. ಆದರೆ ಅವರು ವಾಪಸಾಗಿಲ್ಲ. ಜಾಲಕ್ಕೆ ಸಂಬಂಧಿಸಿದಂತೆ ಪೊಲೀಸರ ಬಲೆಗೆ ಮೊದಲು ಬಿದ್ದಿರುವ ಇಬ್ಬರು ಈ ವೈದ್ಯರ ಸಹಾಯಕರಾಗಿದ್ದಾರೆ. ವೈದ್ಯರ ಮರಳುವಿಕೆಯ ಮೇಲೆ ನಿಗಾ ಇಡಲು ಪೊಲೀಸ್ ತಂಡವೊಂದನ್ನು ಇಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.
ತನಿಖೆಯ ಸಂದರ್ಭ ಈ ವೈದ್ಯರು ಸಹಿ ಮಾಡಿದ್ದ ಖಾಲಿ ಕಾಗದಗಳು ಪತ್ತೆಯಾಗಿದ್ದು, ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯ ಅಗತ್ಯ ಔಪಚಾರಿಕತೆಗಳ ಪೂರೈಕೆಗಾಗಿ ಸಹಾಯಕರು ಅವುಗಳನ್ನು ಬಳಸುತ್ತಿದ್ದರು ಎನ್ನಲಾಗಿದೆ.
ಇನ್ನೋರ್ವ ಹಿರಿಯ ಮೂತ್ರಪಿಂಡ ತಜ್ಞರ ಸಹಾಯಕನನ್ನೂ ಶುಕ್ರವಾರ ಬಂಧಿಸಲಾಗಿದ್ದು, ಜಾಲದಲ್ಲಿ ಈ ವೈದ್ಯರ ಪಾತ್ರದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಜಾಲಕ್ಕೆ ಸಂಬಂಧಿಸಿದ ಮೂತ್ರಪಿಂಡ ದಾನಿಯೋರ್ವನ ಮೂಲಕ ಮೂರನೇ ವೈದ್ಯರ ಹೆಸರು ಪೊಲೀಸರಿಗೆ ಲಭ್ಯವಾಗಿದೆ.ರಾವ್ ವಿಚಾರಣೆ ವೇಳೆಯಲ್ಲಿಯೂ ಈ ವೈದ್ಯರ ಹೆಸರನ್ನು ಆತ ಬಾಯಿಬಿಟ್ಟಿದ್ದ. ಹೀಗಾಗಿ ಅವರ ಬಗ್ಗೆ ಬಲವಾದ ಶಂಕೆ ಹೊಂದಿರುವ ಪೊಲೀಸರು ಅವರ ಸಹಾಯಕನ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಈ ಮೂವರೂ ವೈದ್ಯರಿಗೆ ಒಂದೆರಡು ದಿನಗಳಲ್ಲಿ ನೋಟಿಸ್ ನೀಡುವ ಸಾಧ್ಯತೆಯಿದೆ.
ಆಸ್ಪತ್ರೆಯ ಐವರು ಹಿರಿಯ ಅಧಿಕಾರಿಗಳಿಗೆ ಈಗಾಗಲೇ ಇಂತಹ ನೋಟಿಸ್ಗಳನ್ನು ಜಾರಿಗೊಳಿಸಲಾಗಿದೆ.