ಟರ್ಕಿಯ ಸಿನೆಗಾಗ್ ನಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ ಯಹೂದಿಗಳು
ಸಹಬಾಳ್ವೆಯ ನಿದರ್ಶನ

ಟರ್ಕಿಯ ಯಹೂದಿ ಸಮುದಾಯ ರಂಝಾನ್ ಸಂದರ್ಭವನ್ನು ಬಳಸಿಕೊಂಡು ಮುಸ್ಲಿಂ ಸಮುದಾಯದ ಜೊತೆಗೆ ಏಕತೆಯನ್ನು ಪ್ರದರ್ಶಿಸಿದ್ದಾರೆ. ಅವರು ಎಡ್ರಿನ್ ನ ಸಿನಾಗೋಗ್ ಅಲ್ಲಿ ಹೊರಾಂಗಣ ಇಫ್ತಾರ್ ಕೂಟ ಏರ್ಪಡಿಸಿದ್ದಾರೆ.
ಈ ಹಬ್ಬವನ್ನು ಗ್ರೇಟ್ ಎಡ್ರಿನ್ ಸಿನಾಗೋಗ್ ನ ಹೊರಗಡೆ ಆಯೋಜಿಸಲಾಗಿದೆ. 1930ರಲ್ಲಿ ಥ್ರಾಸ್ ಪೋಗ್ರೋಮ್ ಸಂದರ್ಭ ನಗರದಿಂದ ಹೊರದೂಡಲ್ಪಟ್ಟಿದ್ದ ಯಹೂದಿ ಸಮುದಾಯದ ನೆನಪಿನಲ್ಲಿರುವ ಈ ಸ್ಥಳವನ್ನು ಸರ್ಕಾರ ಇತ್ತೀಚೆಗೆ ನವೀಕರಿಸಿದೆ. ಎಡ್ರಿನ್ ಅಲ್ಲಿ ಈಗ ಕೇವಲ ಒಂದೇ ಯಹೂದಿ ಕುಟುಂಬ ನೆಲೆಸಿದೆ. ಆದರೆ ಈ ಕಾರ್ಯಕ್ರಮಕ್ಕೆ ನಗರದ ಹೊರಗಿನಿಂದ ಹಲವರು ಬಂದಿದ್ದರು. ಅದರಲ್ಲಿ ಧಾರ್ಮಿಕ ಮತ್ತು ರಾಜಕೀಯ ಪ್ರತಿನಿಧಿಗಳೂ ಇದ್ದರು. ಮುಖ್ಯ ರಬ್ಬಿ ಇಸಾಕ್ ಹಲೇವಾ ಮತ್ತು ಗ್ರೀಸ್ ಕೊಮೊಟಿನಿಯ ಮುಸ್ಲಿಂ ಮುಫ್ತಿ ಕೂಡ ಇದ್ದರು.
ಹಲೇವಾ ಅವರ ಹೆತ್ತವರು ಮೂಲತಃ ಎಡ್ರಿನ್ ನಿವಾಸಿಗಳು. ಸಿನಾಗೋಗ್ ಹೊರಗಡೆ ಇಡಲಾಗಿದ್ದ ಸುತ್ತಾಕಾರದ ಮೇಜುಗಳಲ್ಲಿ ಕೂತಿದ್ದವರನ್ನು ಉದ್ದೇಶಿಸಿ ಮಾತನಾಡಿದ ಹಲೇವಾ ರಂಝಾನ್ ಅನ್ನು ಪವಿತ್ರ ತಿಂಗಳು ಎಂದು ಕರೆದಿದ್ದಾರೆ. ಅಲ್ಲದೆ ಟರ್ಕಿಯ ಯಹೂದಿ ಸಮುದಾಯ ಶಾಂತಿ ಮತ್ತು ಸಮಾಧಾನದಿಂದ ನೆಲೆಸಿದೆ ಎಂದರು. ಈ ಇಫ್ತಾರ್ ಅಲ್ಲಿ ನಮ್ಮ ಬ್ರೆಡ್ ಅನ್ನು ಜೊತೆಯಾಗಿ ಸೇವಿಸುವುದು ನಮ್ಮ ಸಹಬಾಳ್ವೆಗೆ ಅತ್ಯುತ್ತಮ ಉದಾಹರಣೆ ಎಂದು ಅವರು ಹೇಳಿದರು.
ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಕೂಡ ಕಾರ್ಯಕ್ರಮ ಆಯೋಜಿಸಿದವರಿಗೆ ಸಂದೇಶ ಕಳುಹಿಸಿ ಟರ್ಕಿಯ ಶಾಂತಿಯುತ ಸಹಬಾಳ್ವೆಗೆ ಒತ್ತು ನೀಡಿದ್ದಾರೆ. ಇತರ ದೇಶಗಳ ನೀತಿಗಳು ಏನೇ ಇದ್ದರೂ ಟರ್ಕಿಯಲ್ಲಿ ಮಾತ್ರ ಯಹೂದಿ ಸಮುದಾಯ ಬಹಳ ಪ್ರಾಮುಖ್ಯತೆ ಪಡೆದಿದ್ದಾರೆ ಎಂದು ಸಂಸತ್ತಿನ ಮಾನವ ಹಕ್ಕುಗಳ ಸಮಿತಿ ಮುಖ್ಯಸ್ಥ ಮುಸ್ತಾಫ ಯೆನೆರೊಗ್ಲು ಅವರು ಹೇಳಿದ್ದಾರೆ. ಒಂದು ಸಮುದಾಯದ ಕುರಿತ ಧ್ವೇಷ, ಧ್ವೇಷಪೂರಿತ ಭಾಷಣ ಮತ್ತು ಶತ್ರುತ್ವದ ವಿರುದ್ಧ ನಮ್ಮ ಹೋರಾಟ ನಿಲ್ಲದು. ವಿಭಿನ್ನ ಸಮುದಾಯಗಳು ನಮ್ಮ ಭೂಮಿಯನ್ನು ಶ್ರೀಮಂತಗೊಳಿಸುತ್ತವೆ ಎನ್ನುವುದೇ ನಮ್ಮ ಭಾವನೆಯಾಗಿದೆ ಎಂದು ಅವರು ಹೇಳಿದ್ದಾರೆ.
ಕೃಪೆ: www.haaretz.com