ಮಂಗಳೂರು: ಮೀನುಗಾರರಿಗೆ ಬಯೋಮೆಟ್ರಿಕ್ ಕಾರ್ಡ್ ಕಡ್ಡಾಯ
ಜೂ.20-30ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಶಿಬಿರ

ಮಂಗಳೂರು,ಜೂ.13: ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಮೀನುಗಾರರು ಬಯೋಮೆಟ್ರಿಕ್ ಗುರುತಿನ ಚೀಟಿಯನ್ನು ಹೊಂದುವುದು ಕಡ್ಡಾಯವಾಗಿದ್ದು, ಕರಾವಳಿ ಕರ್ನಾಟಕದಲ್ಲಿ ಜೂ. 20ರಿಂದ 30ರವರೆಗೆ ಅಲ್ಲಲ್ಲಿ ಶಿಬಿರಗಳನ್ನು ಮಾಡಿ ಗುರುತಿನ ಚೀಟಿ ವಿತರಿಸಲು ಮೀನುಗಾರಿಕಾ ಇಲಾಖೆ ನಿರ್ಧರಿಸಿದೆ. ದ.ಕ. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಇಂದು ಮೀನುಗಾರಿಕೆ ಹಾಗೂ ಕ್ರೀಡಾ ಸಚಿವರಾದ ಅಭಯಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ಮೀನುಗಾರರ ಸಮಸ್ಯೆಗಳ ಕುರಿತಂತೆ ನಡೆದ ಸಭೆಯಲ್ಲಿ ಕರ್ನಾಟಕ ಮೀನುಗಾರಿಕಾ ಇಲಾಖೆಯ ನಿರ್ದೇಶಕರಾದ ಎಚ್.ಎಸ್. ವೀರಪ್ಪ ಗೌಡ ಈ ವಿಷಯ ತಿಳಿಸಿದರು. ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯ ಸುರಕ್ಷತೆಯ ಬಗ್ಗೆ ಕರಾವಳಿ ಪಡೆ ಗಂಭೀರವಾಗಿದ್ದು, ಮೀನುಗಾರರಿಗೆ ಬಯೋಮೆಟ್ರಿಕ್ ಕಾರ್ಡನ್ನು ಕಡ್ಡಾಯಗೊಳಿಸಲಾಗಿದೆ. ಈಗಾಗಲೇ ಇದನ್ನು ವಿತರಿಸುವ ಕಾರ್ಯ ನಡೆಯುತ್ತಿದೆ. ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಎಲ್ಲಾ ಮೀನುಗಾರರು ಬಯೋಮೆಟ್ರಿಕ್ ಕಾರ್ಡ್ ಹೊಂದಿರುವುದನ್ನು ಸಂಬಂಧಪಟ್ಟ ದೋಣಿಗಳ ಮಾಲಕರು ಖಾತರಿಪಡಿಸಿಕೊಳ್ಳಬೇಕು. ಮೀನುಗಾರರ ವೇಷದಲ್ಲಿ ಸಮುದ್ರದ ಮೂಲಕ ಭಯೋತ್ಪಾದಕರು ದೇಶದಲ್ಲಿ ಆತಂಕ ಸೃಷ್ಟಿಸುವ ಅಪಾಯವಿರುವ ಹಿನ್ನೆಲೆಯಲ್ಲಿ ಮೀನುಗಾರರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಮೀನುಗಾರಿಕಾ ಇಲಾಖೆಯು ಜೂ.20ರಿಂದ 10 ದಿನಗಳ ಕಾಲ ಕರಾವಳಿ ಕರ್ನಾಟಕದಾದ್ಯಂತ ಬಂದರು, ಬೀಚ್ ಪ್ರದೇಶಗಳಲ್ಲಿ ಈ ಶಿಬಿರವನ್ನು ಹಮ್ಮಿಕೊಂಡು ಬಯೋ ಮೆಟ್ರಿಕ್ ಕಾರ್ಡ್ ವಿತರಿಸಲಿದೆ ಎಂದು ಅವರು ಹೇಳಿದರು. ಕರಾವಳಿ ಕರ್ನಾಟಕದ ದೋಣಿಗಳಲ್ಲಿ ಹೊರಗಿನ ರಾಜ್ಯಗಳಿಂದ ಬಂದು ದುಡಿಯುವ ಮೀನುಗಾರರು ಬಹಳಷ್ಟಿದ್ದು ಅವರಿಗೂ ಬಯೋ ಮೆಟ್ರಿಕ್ ಕಾರ್ಡ್ ಒದಗಿಸಬೇಕು ಎಂಬ ಆಗ್ರಹ ಸಭೆಯಲ್ಲಿ ಮೀನುಗಾರರಿಂದ ವ್ಯಕ್ತವಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಅಭಯ ಚಂದ್ರಜೈನ್, ಈ ಬಗ್ಗೆ ಈಗಾಗಲೇ ಕೇಂದ್ರ ಸರಕಾರದ ಗಮನಕ್ಕೆ ತರಲಾಗಿದೆ. ಸದ್ಯ ಶಿಬಿರದಲ್ಲಿ ರಾಜ್ಯದ ಮೀನುಗಾರರಿಗೆ ಮಾತ್ರವೇ ಬಯೋಮೆಟ್ರಿಕ್ ಕಾರ್ಡ್ ನೀಡಲಾಗುವುದು. ಹೊರ ರಾಜ್ಯದಿಂದ ಬಂದಿರುವ ಮೀನುಗಾರರು ತಮ್ಮ ಗುರುತಿಗಾಗಿ ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯ ಎಂದು ಹೇಳಿದರು.
ಸ್ಮಾರ್ಟ್ ಸಿಟಿಯಡಿ ಮೀನುಗಾರಿಕೆ- ಬಂದರಿಗೆ ಒತ್ತು
ಹಳೆ ಮೀನುಗಾರಿಕಾ ಬಂದರಿನಲ್ಲಿ ಹೂಳು, ಸಂಪರ್ಕ ರಸ್ತೆ ಸಮಸ್ಯೆ ಬಗ್ಗೆ ಮೀನುಗಾರರು ಸಭೆಯ ಗಮನ ಸೆಳೆದರು. ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಜೆ.ಆರ್.ಲೋಬೋ, ಕೇಂದ್ರದ ದ್ವಿತೀಯ ಹಂತದ ಸ್ಮಾರ್ಟ್ ಸಿಟಿಗೆ ಮಂಗಳೂರು ಆಯ್ಕೆಗೊಳ್ಳುವ ನಿಟ್ಟಿನಲ್ಲಿ ಇದೀಗ ಮೀನುಗಾರಿಕೆ ಮತ್ತು ಬಂದರಿಗೆ ಒತ್ತು ನೀಡಿ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗುತ್ತಿದೆ. ಆ ಮೂಲಕ ಸ್ಮಾರ್ಟ್ ಸಿಟಿಗೆ ಈ ಬಾರಿ ಕೇಂದ್ರದಿಂದ ಅವಕಾಶ ದೊರಕಿದ್ದಲ್ಲಿ ಸಾಕಷ್ಟು ಅನುದಾನ ದೊರೆಯಲಿದ್ದು, ಬಂದರು ಅಭಿವೃದ್ದಿಯಾಗಲಿದೆ ಎಂದರು. ಹಳೆ ಬಂದರು ತೃತೀಯ ಹಂತದ ಕಾಮಗಾರಿಗೆ ಸಂಬಂಧಿಸಿ ಆರ್ಥಿಕ ಇಲಾಖೆಯಿಂದ ಅನುದಾನ ಬಿಡುಗಡೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಅಧಿಕಾರಿಗಳು ಸಭೆಯ ಗಮನ ಸೆಳೆದಾಗ, ಈ ಬಗ್ಗೆ ಕೇಂದ್ರದ ಗಮನ ಸೆಳೆಯಲಾಗುವುದು. ಸಮಸ್ಯೆ ಜಟಿಲವಾಗಿರುವುದರಿಂದ ಮುಖ್ಯಮಂತ್ರಿಯ ಗಮನಕ್ಕೂ ತರಲಾಗುವುದು ಎಂದು ಸಚಿವ ಅಭಯಚಂದ್ರ ಜೈನ್ ತಿಳಿಸಿದರು.
ಮೀನುಗಾರರಿಂದ ಸಮಸ್ಯೆಗಳ ಸರಮಾಲೆ...!
ಸಭೆಯಲ್ಲಿ ಭಾಗವಹಿಸಿದ್ದ ಮೀನುಗಾರರಿಂದ ಹಲವಾರು ಸಮಸ್ಯೆಗಳು ವ್ಯಕ್ತವಾದವು. ಮೀನುಗಾರಿಕಾ ಇಲಾಖೆ, ಬಂದರು ಇಲಾಖೆ ಹಾಗೂ ಆಹಾರ ಇಲಾಖೆಯಿಂದ ಮೀನುಗಾರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಅಳಲೂ ಸಭೆಯಲ್ಲಿ ಕೇಳಿ ಬಂತು.
ಮಾಸಿಕ ಸಬ್ಸಿಡಿ ಸೀಮೆಎಣ್ಣೆ ನೀಡುವಲ್ಲಿ ಆಹಾರ ಇಲಾಖೆಯಿಂದ ತಕರಾರು. ತಿಂಗಳ ಅಂತ್ಯದವರೆಗೆ ಅವಕಾಶವಿದ್ದರೂ, ತಿಂಗಳ 20ನೆ ತಾರೀಕಿನೊಳಗೆ ಪಡೆಯಬೇಕೆಂಬ ಒತ್ತಡ ಹಾಕಲಾಗುತ್ತಿದೆ. ಇದರಿಂದ ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಸಭೆಯಲ್ಲಿ ಮೀನುಗಾರ ಮುಖಂಡ ಅಲಿಹಸನ್ ಅಸಮಾಧಾನ ವ್ಯಕ್ತಪಡಿಸಿದರು.
ಸ್ಟೇಟ್‌ಬ್ಯಾಂಕ್ ಮೀನುಮಾರುಕಟ್ಟೆ ದುರಸ್ತಿಗೆ ಆಗ್ರಹ
ಖ್ಯಾತ ಕ್ರೀಡಾ ಪಟುವಾಗಿದ್ದರೂ ಜೀವನೋಪಾಯಕ್ಕಾಗಿ ನಗರದ ಸ್ಟೇಟ್‌ಬ್ಯಾಂಕ್ ಮೀನುಮಾರುಕಟ್ಟೆ ಬಳಿ ಪ್ಲಾಸ್ಟಿಕ್ ಚೀಲಗಳನ್ನು ಮಾರಾಟ ಮಾಡುತ್ತಿದ್ದ ಗೀತಾ ಬಾಯಿ ಮೀನುಗಾರ ಮಹಿಳೆಯರ ಪರವಾಗಿ ಮಾತನಾಡುತ್ತಾ, ಸ್ಟೇಟ್‌ಬ್ಯಾಂಕ್ ಮೀನುಮಾರುಕಟ್ಟೆಯನ್ನು ದುರಸ್ತಿಗೊಳಿಸಬೇಕೆಂದು ಆಗ್ರಹಿಸಿದರು.
ಮಾರುಕಟ್ಟೆಗೆ ವ್ಯವಸ್ಥೆ ಮಾಡಿಸಿ: ಕೆಲವು ಕಡೆಗಳಲ್ಲಿ ಮಳೆಗಾಲದ ವೇಳೆ ಮೀನುಗಾರ ಮಹಿಳೆಯರು ಕೊಡೆ ಹಿಡಿದು ಮೀನು ಮಾರಾಟ ಮಾಡುವ ಪರಿಸ್ಥಿತಿ ಇದೆ. ಇರುವ ಹಳೆಯ ಕೆಲ ಮಾರುಕಟ್ಟೆಗಳು ನಾದುರಸ್ತಿಯಲ್ಲಿವೆ. ಮಾರುಕಟ್ಟೆ ನಿರ್ಮಾಣಕ್ಕೆ ಕೇಂದ್ರ ಸರಕಾರದಿಂದ ಸಬ್ಸಿಡಿ ದೊರಕುತ್ತಿದ್ದು, ಎಲ್ಲಾ ಕಡೆಗಳಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಿ ಮೀನುಗಾರ ಮಹಿಳೆಯರು ಗೌರವಯುತವಾಗಿ ತಮ್ಮ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ವಾಸುದೇವ ಬೋಳೂರು ಆಗ್ರಹಿಸಿದರು. ಮೀನುಗಾರ ಮಹಿಳೆಯರಿಗೆ ದೊರೆಯುವ ಉಳಿತಾಯ ಪರಿಹಾರದಡಿ ಕಳೆದ ಎರಡು ವರ್ಷಗಳಿಂದ ಬಾಕಿ ನೀಡಲಾಗಿಲ್ಲ ಎಂದು ವಾಸುದೇವ ಬೋಳೂರು ಸಭೆಯಲ್ಲಿ ತಿಳಿಸಿದಾಗ, ಹಳೆಯ ಬಾಕಿಯನ್ನು ಸಂಗ್ರಹಿಸಲಾಗತ್ತಿದ್ದು, ಅದನ್ನು ಪಾವತಿಸಲು ಕ್ರಮ ಕೈಗೊಳ್ಳುವುದಾಗಿ ಮೀನುಗಾರಿಕಾ ಇಲಾಖಾ ನಿರ್ದೇಶಕ ವೀರಪ್ಪ ಗೌಡ ತಿಳಿಸಿದರು.
ಸಭೆಯಲ್ಲಿ ಕೇಳಿಬಂದ ಮೀನುಗಾರರ ಇತರ ಕೆಲ ಸಮಸ್ಯೆಗಳು:
*ಆ್ಯಂಕರ್‌ಗಳನ್ನು ಹಾಕಿ ನದಿಯಲ್ಲಿ ಮರಳುಗಾರಿಕೆ ನಡೆಸುತ್ತಿರುವುದರಿಂದ ನಾಡದೋಣಿ ಮೀನುಗಾರಿಕೆಯ ಬಲೆಗಳು ಹಾಳಾಗಿ ನಷ್ಟವಾಗುತ್ತಿದೆ.
*ಮೀನುಗಾರರ ಸಂಕಷ್ಟ ಪರಿಹಾರವನ್ನು 1 ಲಕ್ಷ ರೂ.ನಿಂದ 10 ಲಕ್ಷ ರೂ.ಗಳಿಗೆ ಏರಿಕೆ ಮಾಡಬೇಕು.
* ಅಳಿವೆ ಬಾಗಿಲಿನಲ್ಲಿ ಹೂಳೆತ್ತಲು ಖಾಯಂ ಯಂತ್ರವನ್ನು ಇಡಬೇಕು. ಬಾಕ್ಸ್ ಮಾಡಬಹುದು....
ನೆರೆಯ ರಾಜ್ಯದ ಮೀನುಗಾರರಿಗೆ ದಂಡ
ಮಳೆಗಾಲದಲ್ಲಿ ಸುಮಾರು 60 ದಿನಗಳ ಕಾಲ ಮೀನುಗಾರಿಕೆಗೆ ಇರುವ ನಿಷೇಧವನ್ನು ಕರಾವಳಿ ಕರ್ನಾಟಕದ ಮೀನುಗಾರರು ಕಡ್ಡಾಯವಾಗಿ ಪಾಲಿಸುತ್ತಿದ್ದಾರೆ. ಆದರೆ ಕೇರಳ, ತಮಿಳುನಾಡು ಸೇರಿದಂತೆ ನೆರೆಯ ರಾಜ್ಯಗಳ ಮೀನುಗಾರರು ಈ ಅವಧಿಯಲ್ಲೂ ಮೀನುಗಾರಿಕೆ ನಡೆಸುತ್ತಿದ್ದಾರೆ ಎಂದು ಮೀನುಗಾರ ಮುಖಂಡರಾದ ನಿತಿನ್ ಕುಮಾರ್ ಆಕ್ಷೇಪಿಸಿದರು. ನೆರೆಯ ರಾಜ್ಯದ ಮೀನುಗಾರರು ಮೀನುಗಾರಿಕೆ ನಡೆಸದಂತೆ ಈಗಾಗಲೇ ಸಂಬಂಧಪಟ್ಟ ರಾಜ್ಯಗಳಿಗೆ ಪತ್ರ ಬರೆಯಲಾಗಿದೆ. ನಾಡದೋಣಿ ಮೀನುಗಾರರಿಗೆ ಈ ಬಗ್ಗೆ ಸುಳಿವು ದೊರಕಿದ್ದಲ್ಲಿ ಅಂತಹ ದೋಣಿಗಳ ನಂಬರ್ ನೀಡಿದರೆ ಅವುಗಳನ್ನು ವಶಪಡಿಸಿಕೊಂಡು ದಂಡ ವಿಧಿಸಲಾಗುವುದು ಎಂದು ಮೀನುಗಾರಿಕಾ ಇಲಾಖೆಯ ನಿರ್ದೇಶಕರಾದ ಎಚ್.ಎಸ್. ವೀರಪ್ಪ ಗೌಡ ಹೇಳಿದರು. ಬಾಕ್ಸ್ ಮಾಡಬಹುದು....
ನಾಡದೋಣಿ ಮೀನುಗಾರರಿಗೆ ಬುಲ್ ಟ್ರೋಲ್‌ಗಳ ಸಮಸ್ಯೆ!
ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ತೊಡಗಿರುವ ನಾಡದೋಣಿ ಮೀನುಗಾರರು ಸಮುದ್ರದ 10 ಕಿ.ಮೀ. ವ್ಯಾಪ್ತಿಯೊಳಗೆ ಮೀನುಗಾರಿಕೆ ಮಾಡಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದಾರೆ. ಆದರೆ ಕಳೆದ ಮೂರು ವರ್ಷಗಳಿಂದ ಬುಲ್‌ಟ್ರಾಲ್‌ಗಳು ಕೂಡಾ ಈ ವ್ಯಾಪ್ತಿಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿರುವುದರಿಂದ ನಾಡದೋಣಿ ಮೀನುಗಾರರಿಗೆ ತೊಂದರೆಯಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ನಾಡದೋಣಿ ಮೀನುಗಾರರು ಸಭೆಯಲ್ಲಿ ಆಗ್ರಹಿಸಿದರು. ಕರ್ನಾಟಕ ಕರಾವಳಿ ಮೀನುಗಾರರ ಒಕ್ಕೂಟದ ನಿರ್ಣಯದ ಪ್ರಕಾರ ಸಮುದ್ರ ತೀರದಿಂದ 12 ನಾಟಿಕಲ್ ಮೈಲು ದೂರದವರೆಗೆ ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶವಿದೆ. ಅಲ್ಲಿ ಬೇರೆಯವರಿಗೆ ಅವಕಾಶ ನೀಡದಿರುವ ನಿರ್ಣಯವನ್ನು ಪಾಲಿಸಬೇಕು ಎಂದು ಮೀನುಗಾರ ಮುಖಂಡರಾದ ವಾಸುದೇವ ಬೋಳೂರು ಸಭೆಯಲ್ಲಿ ಆಗ್ರಹಿಸಿದಾಗ, ಮೀನುಗಾರರು ತಮ್ಮೆಳಗೆ ಸೌಹಾರ್ದತೆಯಿಂದ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು.







