6 ತಿಂಗಳೊಳಗೆ ಅವಧಿ ಮೀರಿದ ಔಷಧಿ ನಾಶ: ಸಚಿವ ಖಾದರ್
ರಾಜ್ಯದಲ್ಲಿ 10 ಕೋಟಿ ರೂ. ವೌಲ್ಯದ ಅವಧಿ ಮೀರಿದ ಔಷಧಿ, 1 ಕೋಟಿ ರೂ. ವೆಚ್ಚ ಅಂದಾಜು
.jpg)
ಮಂಗಳೂರು, ಜೂ.13: ರಾಜ್ಯದ ಜಿಲ್ಲೆಗಳ ಗೋದಾಮುಗಳಲ್ಲಿ ಕಳೆದ ಸುಮಾರು 13 ವರ್ಷಗಳಿಂದ ಸಂಗ್ರಹವಾಗಿರುವ ಅವಧಿ ಮೀರಿದ ಔಷಧಿಗಳನ್ನು ಮುಂದಿನ 6 ತಿಂಗಳೊಳಗೆ ನಾಶಪಡಿಸಲಾಗುವುದು, ಇದಕ್ಕಾಗಿ ಸುಮಾರು ಒಂದು ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ನಗರದ ಸರ್ಕ್ಯೂಟ್‌ಹೌಸ್‌ನಲ್ಲಿ ಸೋಮವಾರ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಧಿ ಮೀರಿದ ಔಷಧಿಗಳನ್ನು ನಾಶಪಡಿಸಲು ಆರು ತಿಂಗಳ ಹಿಂದೆ ನೀತಿಯನ್ನು ಜಾರಿಗೆ ತರಲಾಗಿದೆ. ಅದರ ಆಧಾರದಲ್ಲಿ ಟೆಂಡರ್ ಕರೆದು ಪರಿಸರ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ವೈಜ್ಞಾನಿಕವಾಗಿ ಆ ಎಲ್ಲಾ ಔಷಧಿಗಳನ್ನು ನಾಶಪಡಿಸಲಾಗುವುದು. ಬಳಿಕ ಪ್ರತಿ ವರ್ಷ ಈ ನಿಯಮದಡಿ ಅವಧಿ ಮೀರಿದ ಔಷಧಿಗಳನ್ನು ನಾಶಪಡಿಸಲು ಕ್ರಮ ಕೈಗೊಳ್ಳಲಾಗುವುದು. ಇದರ ವೆಚ್ಚವನ್ನು ಆರೋಗ್ಯ ಇಲಾಖೆ ಭರಿಸಲಿದೆ ಎಂದು ಹೇಳಿದರು.
ಹಿಂದೆ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಅವಧಿ ಮೀರಿದ ಔಷಧಿಗಳನ್ನು ಸಂಗ್ರಹಿಸಿ, ಜಿಲ್ಲಾ ಗೋದಾಮಿಗೆ ಕಳುಹಿಸಿ ಅಲ್ಲಿಂದ ರಾಜ್ಯ ಡ್ರಗ್ ಲಾಜಿಸ್ಟಿಕ್‌ಗೆ ಕಳುಹಿಸಿ ಬಳಿಕ ಕಂಪನಿಯಿಂದ ಬದಲಿ ಔಷಧಿಯನ್ನು ಪಡೆದುಕೊಳ್ಳಲಾಗುತ್ತಿತ್ತು. ಅವಧಿ ಮೀರಿದ ಔಷಧಿಗಳನ್ನು ಮಣ್ಣಿನಡಿ ಹೂಳುವ ವ್ಯವಸ್ಥೆ ಇತ್ತು. ಆದರೆ ಪರಿಸರ ಇಲಾಖೆಯ ವಿರೋಧದ ಹಿನ್ನೆಲೆಯಲ್ಲಿ 2000ನೆ ಇಸವಿಯಿಂದ ಅವಧಿ ಮೀರಿದ ಔಷಧಿಗಳನ್ನು ನಾಶಪಡಿಸಲು ಯಾವುದೇ ವ್ಯವಸ್ಥೆ ಇಲ್ಲದೆ ಹಾಗೇ ಇಡಲಾಗಿದೆ. ದ.ಕ. ಜಿಲ್ಲೆಯಲ್ಲಿ ಇಂತಹ ಸುಮಾರು 1.5 ಕೋಟಿ ರೂ.ಗಳಷ್ಟು ಅವಧಿ ಮೀರಿದ ಔಷಧಿ ಸಂಗ್ರಹವಾಗಿದೆ ಎಂದು ಅವರು ಹೇಳಿದರು.
ಸಾಂಕ್ರಾಮಿಕ ರೋಗ ನಿಯಂತ್ರಣ: ಜಿಲ್ಲೆಗೆ 3 ಮೊಬೈಲ್ ಘಟಕ
ಡೆಂಗ್, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರು ಆತಂಕ ಪಡಬೇಕಾಗಿಲ್ಲ. ಜಿಲ್ಲೆಗೆ ಈ ಸಂಬಂಧ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದ್ದು, ಪ್ರತಿ ಜಿಲ್ಲೆಗಳಲ್ಲೂ ತಪಾಸಣೆ, ಸ್ಪ್ರೇಯರ್ ಹಾಗೂ ದಾದಿಯರನ್ನು ಒಳಗೊಂಡ ಪ್ರತ್ಯೇಕ ಸಂಚಾರಿ ಘಟಕವನ್ನು ಸನ್ನದ್ಧಗೊಳಿಸಲಾಗಿದೆ ಎಂದು ಸಚಿವ ಖಾದರ್ ಹೇಳಿದರು.
ಜಿಲ್ಲೆಯಲ್ಲಿರುವ 64 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ 9 ಕೇಂದ್ರಗಳಲ್ಲಿ ವೈದ್ಯರ ಕೊರತೆ ಇದ್ದು, ಅದನ್ನ ನೀಗಿಸಲು ಖಾಸಗಿ ವೈದ್ಯಕೀಯ ಸಂಸ್ಥೆಗಳು ಮುಂದೆ ಬಂದಿವೆ. ಹಾಗಾಗಿ ಇನ್ನು ಮುಂದೆ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುವ ರೋಗಿಗಳು ವೈದ್ಯರು ಇಲ್ಲವೆಂಬ ನೆಪವೊಡ್ಡಿ ಅವರನ್ನು ಹಿಂದಕ್ಕೆ ಕಳುಹಿಸುವಂತಿಲ್ಲ. ವೈದ್ಯರು ಇಲ್ಲವೆಂದಾದಲ್ಲಿ, 108 (ಆ್ಯಂಬುಲೆನ್ಸ್) ಕರೆಯಿಸಿ, ಅದರಲ್ಲಿ ತಾಲೂಕು ಅಥವಾ ಜಿಲ್ಲಾ ಆಸ್ಪತ್ರೆಗೆ ರೋಗಿಯನ್ನು ಕಳುಹಿಸಿ ತಪಾಸಣೆಯ ಬಳಿಕ ವಾಪಸು ಬಿಡುವ ಕ್ರಮ ಆಗಬೇಕು. ರೋಗಿಗೆ ಸರಕಾರಿ ಆಸ್ಪತ್ರೆಗಳಲ್ಲಿ ನಿರ್ಲಕ್ಷ ವಹಿಸಿದ ಬಗ್ಗೆ ಯಾವುದೇ ರೀತಿಯ ದೂರು ಅಥವಾ ಸಾಂಕ್ರಾಮಿಕ ರೋಗಗಳ ಹಾವಳಿ ಕಂಡುಬಂದಲ್ಲಿ ಸಂಬಂಧಪಟ್ಟ ತಾಲೂಕು ಆರೋಗ್ಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಸಚಿವ ಖಾದರ್ ತಿಳಿಸಿದರು.
ಜೂ.15ರಿಂದ ಸ್ವಚ್ಛತಾ ಸಪ್ತಾಹ
ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಜೂನ್ 15ರಿಂದ 21ರವರೆಗೆ ಎಲ್ಲಾ ತಾಲೂಕುಗಳಲ್ಲಿ ಸ್ವಚ್ಛತಾ ಸಪ್ತಾಹ ನಡೆಸಲು ಆದೇಶ ನೀಡಲಾಗಿದೆ ಎಂದು ಸಚಿವ ಖಾದರ್ ಈ ಸಂದರ್ಭ ಹೇಳಿದರು.
ಡೆಂಗ್ ಸಾವು ಆಡಿಟ್ ಸಮಿತಿ ತಾಲೂಕು ಆರೋಗ್ಯ ಅಧಿಕಾರಿಗಳು ಸ್ಥಳೀಯ ಖಾಸಗಿ ಆಸ್ಪತ್ರೆಗಳಲ್ಲಿನ ಪ್ರತಿಯೊಂದು ಡೆಂಗ್ ಹಾಗೂ ಮಲೇರಿಯಾ ಸಾವು ಅಥವಾ ದಾಖಲಾದ ರೋಗಿಗಳ ಪ್ರಕರಣಗಳ ಕುರಿತಂತೆ ಮಾಹಿತಿ ಸಂಗ್ರಹಿಸಿ ಜಿಲ್ಲಾ ಆರೋಗ್ಯ ಅಧಿಕಾರಿಗೆ ಕಳುಹಿಸಬೇಕು. ಶಂಕಿತ ಡೆಂಗ್ ಸಾವಿನ ಪ್ರಕರಣಗಳ ಕುರಿತು ಈಗಾಗಲೇ ನೇಮಕ ಮಾಡಲಾಗಿರುವ ಜಿಲ್ಲಾ ಆರೋಗ್ಯಾಧಿಕಾರಿ ನೇತೃತ್ವದ ‘ಡೆಂಗ್ ಸಾವು ಆಡಿಟ್ ಸಮಿತಿ’ಯು ವರದಿಯನ್ನು ಪರಿಶೀಲಿಸಿ ಬೆಂಗಳೂರಿನ ತಜ್ಞ ಸಮಿತಿಗೆ ವರದಿಯನ್ನು ರವಾನಿಸಲಿದೆ ಎಂದು ಸಚಿವ ಖಾದರ್ ಈ ಸಂದರ್ಭ ತಿಳಿಸಿದರು.
ಗೋಷ್ಠಿಯಲ್ಲಿ ಪದ್ಮನಾಭ ನರಿಂಗಾನ, ಕವಿತಾ ಸನಿಲ್, ಕುಂಞ ಮೋನು, ದಿನೇಶ್ ರೈ, ಸಂತೋಷ್ ಶೆಟ್ಟಿ, ಮುಹಮ್ಮದ್ ಮೋನು ಉಪಸ್ಥಿತರಿದ್ದರು.







