ಎಲಿಸಾ ಪರೀಕ್ಷೆಗೆ ಹೆಚ್ಚುವರಿ ಶುಲ್ಕ ಪಡೆದರೆ ದೂರು ನೀಡಿ!
_0.jpg)
ಮಂಗಳೂರು, ಜೂ.13: ದ.ಕ. ಜಿಲ್ಲೆಯಲ್ಲಿ ಡೆಂಗ್ ಹಾವಳಿ ಹೆಚ್ಚಾಗಿರುವಂತೆಯೇ, ರೋಗ ಪತ್ತೆಗಾಗಿ ನಡೆಸುವ ಎಲಿಸಾ ಪರೀಕ್ಷೆಗೆ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ 2,000 ರೂ.ಗಳಷ್ಟು ಶುಲ್ಕ ಪಡೆಯಲಾಗುತ್ತದೆ ಎಂದು ಖ್ಯಾತ ವೈದ್ಯರೇ ಆತಂಕ ವ್ಯಕ್ತಪಡಿಸಿದ್ದಾರೆ.
ನಗರದ ಸರ್ಕ್ಯೂಟ್‌ಹೌಸ್‌ನಲ್ಲಿ ಸೋಮವಾರ ಆರೋಗ್ಯ ಸಚಿವ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಡೆಂಗ್ ರೋಗದ ಕುರಿತ ಚರ್ಚೆಯ ವೇಳೆ, ಎಲಿಸಾ ಪರೀಕ್ಷೆಗೆ 500 ರೂ. ಶುಲ್ಕ ನಿಗದಿಪಡಿಸಲಾಗಿದೆ ಎಂದು ಆರೋಗ್ಯ ಅಧಿಕಾರಿ ಅರುಣ್ ಸಭೆಗೆ ತಿಳಿಸಿದರು.
ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಈ ಪರೀಕ್ಷೆಗಾಗಿ 2,000 ರೂ.ಗಳನ್ನು ರೋಗಿಗಳಿಂದ ಪಡೆಯಲಾಗುತ್ತಿದೆ ಎಂದು ನಗರದ ಖ್ಯಾತ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಆತಂಕ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಖಾದರ್, ಅಧಿಕ ಶುಲ್ಕ ಪಡೆಯುತ್ತಿರುವ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗೆ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಡೆಂಗ್ ರೋಗದ ವೇಳೆ ರಕ್ತಕಣಗಳು ಕಡಿಮೆಯಾಗುತ್ತವೆ ಎಂಬ ಆತಂಕವನ್ನು ಸೃಷ್ಟಿಸಲಾಗಿದೆ. ಇದರಿಂದ ಜನರು ಗಾಬರಿಗೊಳಗಾಗುತ್ತಾರೆ. ಹಾಗಾಗಿ ರೋಗ ಲಕ್ಷಣಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಕೆಲವೊಮ್ಮೆ ಆಸ್ಪತ್ರೆಗಳಲ್ಲಿ ಅಗತ್ಯ ಇಲ್ಲದವರಿಗೂ ರಕ್ತಕಣಗಳನ್ನು ನೀಡುವ ಕೆಲಸವಾಗುತ್ತದೆ. ಈ ಬಗ್ಗೆ ಜಾಗರೂಕತೆ ಅಗತ್ಯ ಎಂದು ಡಾ. ಶ್ರೀನಿವಾಸ ಕಕ್ಕಿಲ್ಲಾಯ ಸಲಹೆ ನೀಡಿದರು.
ತಾಲೂಕು ಆರೋಗ್ಯ ಕೇಂದ್ರಗಳು ಈ ಬಗ್ಗೆ ಸ್ಥಳೀಯವಾಗಿ ಮಾಹಿತಿ ನೀಡುವ ಕೆಲಸವನ್ನು ಮಾಡುವಂತೆ ಹಾಗೂ ಶಾಲಾ ಕಾಲೇಜುಗಳಲ್ಲಿಯೂ ಆರೋಗ್ಯಕ್ಕೆ ಸಂಬಂಧಿಸಿ ಮಾಹಿತಿ ಒದಗಿಸುವುದು, ಹೊಟೇಲ್‌ಗಳಲ್ಲಿ ಬಿಸಿ ನೀರು ಬಳಕೆಗೆ ಸೂಚನೆ ನೀಡುವುದು ಮೊದಲಾದ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯಾಧಿಕಾರಿಗಳಿಗೆ ಸಚಿವ ಖಾದರ್ ಸೂಚಿಸಿದರು.
ಕಚೇರಿ ಬಿಟ್ಟು- ಮನೆ ಮನೆಗಳಿಗೆ ಭೇಟಿ ನೀಡಿ: ಟಿಎಚ್‌ಒಗಳಿಗೆ ತಾಕೀತು!
ಸಭೆ ಆರಂಭದಲ್ಲೇ ಡೆಂಗ್ ಹಾಗೂ ಮಲೇರಿಯಾ ರೋಗಗಳ ಹಾವಳಿ ಕುರಿತಂತೆ ತಾಲೂಕು ಆರೋಗ್ಯ ಅಧಿಕಾರಿಗಳನ್ನು ತರಾಟೆಗೈದ ಸಚಿವ ಖಾದರ್, ಅಧಿಕಾರಿಗಳು ಕಚೇರಿಯನ್ನು ಬಿಟ್ಟು ಕ್ಷೇತ್ರಕ್ಕೆ ಹೋಗಿ ಬೀದಿಗಿಳಿದು ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು. ಸಾಂಕ್ರಾಮಿಕ ರೋಗಗಳ ಬಗ್ಗೆ ಯಾವುದೇ ದೂರು ಬಂದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಭೆಯಲ್ಲಿ ಸಚಿವ ಖಾದರ್ ಹೇಳಿದರು.
ಮಲೇರಿಯಾದಲ್ಲಿ ಇಳಿಕೆ!
ಕಳೆದ ವರ್ಷಕ್ಕೆ ಹೋಲಿಸಿದರೆ ಮಲೇರಿಯಾ ರೋಗವು ಮೇ ತಿಂಗಳಲ್ಲಿ ಶೇ.45ರಷ್ಟು ಕಡಿಮೆಯಾಗಿದೆ. ಜನವರಿಯಿಂದ ಮೇವರೆಗೆ ಹೋಲಿಕೆ ಮಾಡಿದರೆ ಶೇ. 9ರಷ್ಟು ಕಡಿಮೆಯಾಗಿದೆ ಎಂದು ಮಲೇರಿಯಾ ಅಧಿಕಾರಿ ಅರುಣ್ ಸಭೆಯಲ್ಲಿ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಖಾದರ್, ಮಳೆಗಾಲ ಈಗಷ್ಟೇ ಆರಂಭವಾಗಿರುವುದರಿಂದ ಮುಂದಿನ ಎರಡು ತಿಂಗಳು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಅಧಿಕವಾಗಿರುವುದರಿಂದ ಆರೋಗ್ಯ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.
ಸಭೆಯಲ್ಲಿ ಮನಪಾ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್, ಉಳ್ಳಾಲ ನಗರಸಭೆ ಅಧ್ಯಕ್ಷ ಕುಂಞಿ ಮೋನು, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಜಿಲ್ಲಾ ವೈದ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ಡಾ. ಸಿಕಂದರ್ ಪಾಷಾ, ಡಾ. ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.







