ಮುಡಿಪು: ಅತ್ಯಾಧುನಿಕ ಶೌಚಾಲಯ ಹಾಗೂ ಶಾಲಾ ಕಟ್ಟಡ ಉದ್ಘಾಟನೆ

ಕೊಣಾಜೆ, ಜೂ.13: ಶಿಕ್ಷಣವು ನಮ್ಮಲ್ಲಿ ಪ್ರಮುಖವಾಗಿ ಮಾನವೀಯತೆ ಹಾಗೂ ಪ್ರಾಮಾಣಿಕತೆಯೊಂದಿಗೆ ವ್ಯಕ್ತಿತ್ವವನ್ನು ನಿರ್ಮಿಸಬೇಕು. ವಿದ್ಯಾರ್ಥಿಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸುವ ಅನಿವಾರ್ಯತೆ ಇರುತ್ತದೆ. ವಿದ್ಯಾರ್ಥಿಗಳು ಧೈರ್ಯಶಾಲಿಗಳಾಗಿ ಇವೆಲ್ಲವನ್ನು ಎದುರಿಸಿ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬೇಕು ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
ಮುಡಿಪು ಸಮೀಪದ ಇನ್ಫೊಸಿಸ್ ಕಂಪೆನಿಯ ಸಹಕಾರದೊಂದಿಗೆ ಮುಡಿಪುವಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಒಂದು ಕೋಟಿ ಇಪ್ಪತ್ತು ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಅತ್ಯಾಧುನಿಕ ಶೌಚಾಲಯ, ಹೂದೋಟವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಸುಗಮವಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಬಡ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಸಹಕಾರಿಯಾಗಲೆಂದು ಇನ್ಫೊಸಿಸ್ ಕಂಪೆನಿಯು ನೀಡಿದ ಕೊಡುಗೆಯು ಸ್ಥಳೀಯರು ಸಂಸ್ಥೆಯ ಮೇಲೆ ಪ್ರೀತಿ, ವಿಶ್ವಾಸ ಬೆಳೆಸುವಂತೆ ಮಾಡಿದೆ. ಈಗಾಗಲೇ ಕಾಲೇಜಿಗೆ 1 ಕೋಟಿ 20 ಲಕ್ಷ ರೂ. ವೌಲ್ಯದ ಶೌಚಾಲಯ, ಹೂದೋಟ ನೀಡಿದ್ದು ವಿದ್ಯಾರ್ಥಿಗಳು ಈ ಬಾರಿ ನೂರು ಶೇ. ಫಲಿತಾಂಶ ಗಿಟ್ಟಿಸಿದರೆ ಮತ್ತೆ ಕಾಲೇಜಿಗೆ ದುಬಾರಿ ಉಡುಗೊರೆ ನೀಡುವುದಾಗಿ ಇನ್ಫೊಸಿಸ್ ಕಂಪೆನಿಯವರು ಭರವಸೆ ನೀಡಿರುವುದಾಗಿ ಸಚಿವ ಖಾದರ್ ಹೇಳಿದರು.
ಇದೀಗ ಕಾಲೇಜಿನಲ್ಲಿ ಪದವಿ ತರಗತಿಗಳು ನಡೆಯುತ್ತಿದ್ದು ಸೂಕ್ತವಾದ ಕೊಠಡಿಗಳ ಕೊರತೆ ಮನಗಂಡು ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದ್ದು ಕೆಲವೇ ದಿವಸಗಳಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಪದವಿ ಕಾಲೇಜಿನ ನೂತನ ಕಟ್ಟಡ ನಿರ್ಮಾಣವಾಗಲಿದೆ ಎಂದರು.
ಇನ್ಫೊಸಿಸ್ ಕಂಪೆನಿಯ ಮುಡಿಪು ಶಾಖೆಯ ಸಾಫ್ಟ್‌ವೇರ್ ಹಿರಿಯ ಮೇಲ್ವಿಚಾರಕ ಗೋಪಿ ಕೆ.ಕೆ ಮಾತನಾಡಿ, ತಮ್ಮ ಸಂಸ್ಥೆಯು ಗಳಿಸಿದ ಲಾಭಾಂಶದಲ್ಲಿ ಸಮಾಜಕ್ಕೂ ಒಳಿತಾಗಬೇಕೆಂಬ ದೃಷ್ಟಿಯಿಂದ ಇಂತಹ ಯೋಜನೆ ಹಮ್ಮಿಕೊಂಡಿದ್ದು, ಮುಖ್ಯವಾಗಿ ತಾವು ನೀಡಿದ ಉಡುಗೊರೆಯನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿದಾಗಲೇ ತಾವು ಮಾಡಿದ ಪರಿಶ್ರಮಕ್ಕೆ ಪ್ರತಿಫಲ ದೊರೆತಂತಾಗುವುದೆಂದು ಹೇಳಿದರು.
ಮುಡಿಪು ಸರಕಾರಿ ಕಾಲೇಜಿನ ವತಿಯಿಂದ ಇನ್ಫೊಸಿಸ್ ಅಧಿಕಾರಿಗಳಾದ ಗೋಪಿ ಕೆ.ಕೆ, ಕರ್ನಲ್ ಸುರೇಶ್, ಕರ್ನಲ್ ಹರೀಶ್, ಕರ್ನಲ್ ಶಾಂತನು ಮಸ್ಕೇರಿ, ಉದಯ್ ಕುಮಾರ್‌ರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸಹಕಾರ ನೀಡಿದ ಬ್ರೈಟ್ ಶಿಕ್ಷಣ ಸಂಸ್ಥೆಯ ಜಲೀಲ್ ಮೋಂಟುಗೋಳಿಯವರನ್ನು ಗೌರವಿಸಲಾಯಿತು.
ಇದೇ ವೇಳೆ ರಾಷ್ಟ್ರೀಯ ಮಾಧ್ಯಮಿಕ ಸರ್ವಶಿಕ್ಷಣ ಅಭಿಯಾನದ ಯೋಜನೆಯಡಿ 48 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಪ್ರೌಢಶಾಲಾ ಕೊಠಡಿಗಳನ್ನು ಸಚಿವ ಖಾದರ್ ಲೋಕಾರ್ಪಣೆ ಮಾಡಿದರು.
ಕುರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಶೈಲಜಾ ಮಿತ್ತಕೋಡಿ ಸಭಾಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಡಿ,ಎಸ್ ಗಟ್ಟಿ, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸದಸ್ಯರಾದ ನವೀನ್ ಪಾದಲ್ಪಾಡಿ, ಹೈದರ್ ಕೈರಂಗಳ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಂತೋಷ್ ರೈ ಬೋಳಿಯಾರ್, ಪದವಿ ಪೂರ್ವ ಕಾಲೇಜು ಮೇಲುಸ್ತುವಾರಿ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ, ಪ್ರೌಢಶಾಲಾ ಮೇಲುಸ್ತುವಾರಿ ಸಮಿತಿ ಕಾರ್ಯಾಧ್ಯಕ್ಷ ಉಮರ್ ಪಜೀರು, ಪಜೀರು ಗ್ರಾ.ಪಂ.ಅಧ್ಯಕ್ಷ ಸೀತಾರಾಂ ಶೆಟ್ಟಿ, ಕುರ್ನಾಡು ಗ್ರಾ.ಪಂ ಮಾಜಿ ಅಧ್ಯಕ್ಷ ದೇವದಾಸ ಭಂಡಾರಿ, ಇರಾ ಗ್ರಾ.ಪಂ ಅಧ್ಯಕ್ಷ ರಝಾಕ್ ಕುಕ್ಕಾಜೆ, ಕೊಣಾಜೆ ಗ್ರಾ.ಪಂ ಅಧ್ಯಕ್ಷ ಶೌಕತ್ ಅಲಿ, ಮುಖಂಡರಾದ ಅಬ್ದುಲ್ ಜಲೀಲ್ ಮೋಂಟುಗೋಳಿ, ಅಬ್ದುಲ್ ನಾಸಿರ್ ನಡುಪದವು, ಪದ್ಮನಾಭ ನರಿಂಗಾನ, ಸಂತೋಷ್ ಶೆಟ್ಟಿ, ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಅಶ್ಫಾಕ್ ಅಹ್ಮದ್ ಮ್ಯಾಗೇರಿ, ಪದವಿ ಕಾಲೇಜು ಪ್ರಾಂಶುಪಾಲ ಗಿರಿಧರ್ ರಾವ್, ಉಪಪ್ರಾಂಶುಪಾಲ ಬಸವರಾಜ ಪಲ್ಲಕ್ಕಿ ಮೊದಲಾದವರು ಉಪಸ್ಥಿತರಿದ್ದರು.







