ಬಸವರಾಜ ಹೊರಟ್ಟಿಗೆ ‘ದಾಖಲೆಯ ವಿಜಯ’

ಬೆಂಗಳೂರು, ಜೂ. 13: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಹಾಗೂ ಮಾಜಿ ಸಚಿವ ಬಸವರಾಜ ಹೊರಟ್ಟಿ ಏಳನೆ ಬಾರಿಗೆ ಗೆಲುವು ಸಾಧಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಸೋಮವಾರ ಬೆಳಗಾವಿಯ ಜ್ಯೋತಿ ಕಾಲೇಜಿನಲ್ಲಿ ನಡೆದ ಮತ ಎಣಿಕೆಯಲ್ಲಿ ಬಸವರಾಜ ಹೊರಟ್ಟಿ 7,480 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಗಳಿಸುವ ಮೂಲಕ ಬಿಜೆಪಿಯ ಅಭ್ಯರ್ಥಿ ನಾಗರಾಜ್‌ರನ್ನು ಸೋಲಿಸಿದ್ದಾರೆ. ಸತತ ಏಳನೆ ಬಾರಿಯೂ ಗೆಲುವು ಸಾಧಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಹೊರಟ್ಟಿ ಪ್ರತಿಸ್ಪರ್ಧಿ ಬಿಜೆಪಿಯ ನಾಗರಾಜ-4,371 ಎರಡನೆ ಸ್ಥಾನದಲ್ಲಿದ್ದು, ಕಾಂಗ್ರೆಸ್ ಪಕ್ಷದ ಈಶ್ವರ-1,352 ಮತಗಳನ್ನು ಗಳಿಸುವ ಮೂಲಕ ಮೂರನೆ ಸ್ಥಾನಕ್ಕೆ ತಳಲ್ಪಟ್ಟಿದ್ದಾರೆ. ಬಸವರಾಜ ಹೊರಟ್ಟಿಯವರ ಗೆಲುವು ಘೋಷಣೆಯಾಗುತ್ತಿದ್ದಂತೆ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಸ್ಥಳದಲ್ಲಿದ್ದ ಶಿಕ್ಷಕರು, ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಶಿಕ್ಷಕರ ಗೆಲುವು: ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಶಿ ಹಾಗೂ ನನ್ನ ನಡುವಿನ ಸ್ಪರ್ಧೆಯಲ್ಲಿ ಶಿಕ್ಷಕರು ನನ್ನನ್ನು ಗೆಲ್ಲಿಸಿದ್ದು, ಇದು ಶಿಕ್ಷಕರ ಗೆಲುವು ಎಂದು ಬಣ್ಣಿಸಿದ ಬಸವರಾಜ ಹೊರಟ್ಟಿ, ಶಿಕ್ಷಕ ಮತದಾರರಿಗೆ ಇದೇ ವೇಳೆ ಅಭಿನಂದನೆಗಳನ್ನು ಸಲ್ಲಿಸಿದರು.
ನನ್ನ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಸಿದರೂ ಬಿಜೆಪಿ ಈ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ನನ್ನ ಮೇಲೆ ವಿಶ್ವಾಸವಿಟ್ಟು, ನನಗೆ ಮತ ನೀಡಿದ ಎಲ್ಲ ಶಿಕ್ಷಕರಿಗೆ ಧನ್ಯವಾದಗಳು. ನಾನು ಶಿಕ್ಷಕರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸುವುದಲ್ಲದೆ, ರಾಜ್ಯದ ಅಭಿವೃದ್ಧಿಗೆ ಶ್ರಮಿಸುವೆ ಎಂದು ಹೊರಟ್ಟಿ ಭರವಸೆ ವ್ಯಕ್ತಪಡಿಸಿದರು.
ಏಳನೆ ಬಾರಿಗೆ ಪಶ್ವಿಮ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‌ನ ಅಭ್ಯರ್ಥಿ ಬಸವರಾಜ ಹೊರಟ್ಟಿಯವರನ್ನು ಗೆಲ್ಲಿಸಿದ ಮತದಾರರಿಗೆ ಕೃತಜ್ಞತೆಗಳು. ಮುಂಬರುವ ದಿನಗಳಲ್ಲಿ ತಮ್ಮ ಅಖಂಡ ಬೆಂಬಲವನ್ನು ಇದೇ ರೀತಿ ಪಕ್ಷಕ್ಕೆ ನೀಡುವ ಮೂಲಕ ನಾಡಿನ ಹೊಸ ಮನ್ವಂತರಕ್ಕೆ ನಾಂದಿಯಾಡಬೇಕು’
-ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ







