‘ಸಿಎಂಗೆ ದೂರು ನೀಡಿದಲ್ಲಿ ಅನುಪಮಾ ಶೆಣೈಗೆ ಭದ್ರತೆ’

ಕಾಪು, ಜೂ.13: ಕೂಡ್ಲಿಗಿಯ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಅವರಿಗೆ ಜೀವಬೆದರಿಕೆ ಇದ್ದಲ್ಲಿ ಈ ಬಗ್ಗೆ ಮುಖ್ಯಮಂತ್ರಿಗಳಿಗೆ ದೂರು ನೀಡಿದಲ್ಲಿ ಸೂಕ್ತ ಭದ್ರತೆ ನೀಡಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಹೇಳಿದ್ದಾರೆ.
ಸೋಮವಾರ ಕಾಪುವಿನ ರಾಜೀವ್ ಭವನದಲ್ಲಿ ರಾಜ್ಯಸಬೆಗೆ ಆಯ್ಕೆಯಾದ ಆಸ್ಕರ್ ಫೆರ್ನಾಂಡೀಸ್‌ರಿಗೆ ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಅಭಿನಂದನಾ ಸಮಾರಂಭದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ ಹೇಳಿದರು.
ಶೆಣೈ ಅವರನ್ನು ರಾಜೀನಾಮೆ ನೀಡಬೇಡಿ ಎಂದು ರಾಜ್ಯಸರಕಾರವೇ ಕೇಳಿಕೊಂಡಿತ್ತು. ಅಲ್ಲದೆ ಆಕೆ ಇರುವಲ್ಲಿ ಸಂಧಾನಕಾರರನ್ನು ಕಳುಹಿಸಿತ್ತು. ಆದರೆ ಸಂಧಾನಕಾರರಲ್ಲಿ ಮಾತನಾಡಲು ಮುಂದಾಗಲಿಲ್ಲ. ಆ ಬಳಿಕ ಸರಕಾರ ಏನೂ ಮಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಕೊನೆಗೆ ರಾಜೀನಾಮೆ ಅಂಗೀಕರಿಸಲೇ ಬೇಕಿತ್ತು ಎಂದರು.
ಒಂದು ವೇಳೆ ಅವರಿಗೆ ಜೀವಬೆದರಿಕೆ ಇದ್ದರೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿದಲ್ಲಿ ಅವರಿಗೆ ರಾಜ್ಯ ಸರಕಾರದಿಂದ ಸಂಪೂರ್ಣ ಭದ್ರತೆ ಒದಗಿಸಲಾಗುವುದು ಎಂದು ಅವರು ಹೇಳಿದರು.





