ಪಡೀಲ್: ಮಲಗಿದ್ದ ವ್ಯಕ್ತಿಯ ಪ್ರಜ್ಞೆತಪ್ಪಿಸಿ ಕಳ್ಳತನ
8 ಲಕ್ಷ ರೂ. ಮೌಲ್ಯದ ನಗ-ನಗದು ಕಳವು

ಮಂಗಳೂರು, ಜೂ.13: ಬಾಲ್ಕನಿ ಬಾಗಿಲನ್ನು ಮುರಿದ ಕಳ್ಳರು ಮನೆಯೊಳಗೆ ಪ್ರವೇಶಿಸಿ ಮನೆಯಲ್ಲಿ ಮಲಗಿದ್ದ ವ್ಯಕ್ತಿಯನ್ನು ಪ್ರಜ್ಞೆ ತಪ್ಪಿಸಿ ಎಂಟು ಲಕ್ಷ ವೌಲ್ಯದ ಚಿನ್ನಾಭರಣಗಳನ್ನು ಕಳವುಗೈದ ಘಟನೆ ಪಡೀಲ್‌ನ ದರ್ಬಾರ್ ಹಿಲ್ ಎಂಬಲ್ಲಿ ರವಿವಾರ ರಾತ್ರಿ ನಡೆದಿದೆ.
ಬಾಲ್ಕನಿ ಬಾಗಿಲನ್ನು ಒಡೆದು ಒಳಬಂದ ಕಳ್ಳರು ಬೆಡ್‌ರೂಮಿನಲ್ಲಿ ಮಲಗಿದ್ದ ಜಯಪಾಲ್ ಎಂಬವರ ಮೂಗಿಗೆ ಮತ್ತು ಬರುವ ವಸ್ತುವನ್ನು ಹಿಡಿದು ಪ್ರಜ್ಞೆ ತಪ್ಪಿಸಿದ್ದಾರೆ. ಮನೆಯಲ್ಲಿದ್ದ 48 ಗ್ರಾಂ ತೂಕದ ಒಂದು ಚಿನ್ನದ ಹವಳದ ಸರ, 24 ಗ್ರಾಂ ಮೌಲ್ಯದ ಒಂದು ಚಿನ್ನದ ಹವಳದ ಸರ , 128 ಗ್ರಾಂ ಮೌಲ್ಯದ 8 ಚಿನ್ನದ ಬಳೆಗಳು, 48 ಗ್ರಾಂ ತೂಕದ ನಾಲ್ಕು ಸಪೂರ ಚಿನ್ನದ ಬಳೆಗಳು, 24 ಗ್ರಾಂ ಮೌಲ್ಯದ ನಾಲ್ಕು ಚಿನ್ನದ ಉಂಗುರಗಳು, 24 ಗ್ರಾಂ ಮೌಲ್ಯದ ಒಂದು ಚಿನ್ನದ ನೆಕ್ಲೆಸ್, 12 ಗ್ರಾಂ ಮೌಲ್ಯದ ಒಂದು ಚಿನ್ನದ ಬ್ರೆಸ್‌ಲೆಟ್, 40 ಗ್ರಾಂ ಮೌಲ್ಯದ ಚಿನ್ನ ಮತ್ತು 2 ವೈಟ್ ಗೋಲ್ಡ್ ಮಿಶ್ರ ಬಳೆಗಳು, ವಾಚ್‌ಗಳು ಹಾಗೂ 30 ಸಾವಿರ ರೂ. ನಗದನ್ನು ಕಳವುಗೈದಿದ್ದಾರೆ.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





