ಅತ್ಯಲ್ಪ ಬದಲಾವಣೆಯೊಂದಿಗೆ ‘ಉಡ್ತಾ ಪಂಜಾಬ್’ಗೆ ಹೈಕೋರ್ಟ್ ಅನುಮತಿ
ಮುಂಬೈ, ಜೂ.13: ಅನುರಾಗ್ ಕಶ್ಯಪ್ ನಿರ್ಮಾಣದ ‘ಉಡ್ತಾ ಪಂಜಾಬ್’ ಚಿತ್ರವನ್ನು ಕೇವಲ ಒಂದು ಕತ್ತರಿ ಪ್ರಯೋಗ ಹಾಗೂ ಮರು ವಿಮರ್ಶಿತ ಟಿಪ್ಪಣಿಯೊಂದಿಗೆ ಬಿಡುಗಡೆಗೊಳಿಸಲು ಬಾಂಬೆ ಹೈಕೋರ್ಟ್ ಸೋಮವಾರ ಹಸಿರು ನಿಶಾನೆ ತೋರಿಸಿದೆ.
ಶಾಹಿದ್ ಕಪೂರ್ ಗುಂಪಿನ ಮೇಲೆ ಮೂತ್ರ ವಿಸರ್ಜಿಸುತ್ತಿರುವ ದೃಶ್ಯವನ್ನು ತೆಗೆದು ಹಾಕಬೇಕು ಹಾಗೂ ಪಾಕಿಸ್ತಾನದ ಕುರಿತು ಯಾವುದೇ ಉಲ್ಲೇಖ ಚಿತ್ರದಲ್ಲಿರಬಾರದು ಎಂದು ನ್ಯಾಯಾಲಯವು ನಿರ್ಮಾಪಕರಿಗೆ ಆದೇಶಿಸಿದೆ.
ಏಕ್ತಾ ಕಪೂರ್‌ರ ಬಾಲಾಜಿ ಮೋಶನ್ ಪಿಕ್ಚರ್ಸ್‌ನೊಂದಿಗೆ ಚಿತ್ರವನ್ನು ನಿರ್ಮಾಣ ಮಾಡಿರುವ ಅನುರಾಗ್ ಕಶ್ಯಪ್‌ರ ಫ್ಯಾಂಟಂ ಫಿಲ್ಮ್, ಕೇಂದ್ರೀಯ ಚಲನಚಿತ್ರ ಪ್ರಮಾಣಪತ್ರ ಮಂಡಳಿಯು(ಸಿಬಿಎಫ್‌ಸಿ) ಸೂಚಿಸಿದ್ದ ಕತ್ತರಿ ಪ್ರಯೋಗಗಳಿಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಇದೀಗ ನ್ಯಾಯಾಲಯ ಸೂಚಿಸಿರುವ ಕತ್ತರಿ ಪ್ರಯೋಗಕ್ಕೆ ನಿರ್ಮಾಪಕರು ಒಪ್ಪಿದ್ದಾರೆ.
ಜನರ ಮನಸ್ಸಿನ ಮೇಲೆ ಪರಿಣಾಮವಾಗದಂತೆ ಕ್ಷುಲ್ಲಕವಾಗಿ ಕಲೆಯು ಅಶ್ಲೀಲವನ್ನು ಮುಂದಿರಿಸಬೇಕು. ಪ್ರಮಾಣಪತ್ರವನ್ನು ತಡೆಯುವುದು, ಮಾಮೂಲೆಂಬಂತೆ ಕತ್ತರಿ ಪ್ರಯೋಗಕ್ಕೆ ಸಲಹೆ ನೀಡುವುದು ಅನುತ್ಪಾದಕ ವಾಗುತ್ತದೆ. ಪಂಜಾಬ್ ಯೋಧರ ಹಾಗೂ ಹುತಾತ್ಮರ ನಾಡಾಗಿದೆ. ಜನರು ‘ಕಂಜರ್’ ಎಂಬ ಶಬ್ದವಿರುವ ಕೇವಲ ಒಂದು ಸಂಭಾಷಣೆಯ ಬಗ್ಗೆ ಅತಿಭಾವುಕರಾಗಲಾರರು ಎಂದು ನ್ಯಾಯಾಲಯ ಅಭಿಪ್ರಾಯಿಸಿದೆ.
ಸಿನೆಮಾದಲ್ಲಿ ಕೇಳಿದ್ದಾರೆನ್ನುವ ಕಾರಣಕ್ಕಾಗಿ ಪ್ರೌಢರು ಗ್ರಾಮ್ಯ ಶಬ್ದಗಳನ್ನು ಬಳಸಲಾರರು. ‘ಉಡ್ತಾ ಪಂಜಾಬ್’ನ ಕತೆಯನ್ನು ಕಾಲ್ಪನಿಕ ಪಾತ್ರಗಳ ಮೂಲಕ ಹೆಣೆಯಲಾಗಿದ್ದು, ಅವುಗಳಿಗೂ ವಾಸ್ತವ ಜೀವನಕ್ಕೂ ಸಂಬಂಧವಿಲ್ಲ. ಸಿಬಿಎಫ್‌ಸಿ ಚಿತ್ರಕ್ಕೆ ಕತ್ತರಿ ಪ್ರಯೋಗ ಮಾಡುವ ಕಾನೂನುಬದ್ಧ ಅಧಿಕಾರವಿದೆಯೆಂಬುದು ವಿವಾದಾತೀತ ಸಂಗತಿಯಾಗಿದ್ದು, ಸೃಜನಶೀಲತಾ ಸ್ವಾತಂತ್ರವು ಪ್ರಶ್ನಾತೀತವಲ್ಲ. ಆದಾಗ್ಯೂ ಸಿಬಿಎಫ್‌ಸಿ ತನ್ನ ಅಧಿಕಾರವನ್ನು ನಿರಂಕುಶವಾಗಿ ಬಳಸುವಂತಿಲ್ಲವೆಂಬುದನ್ನೂ ಅದು ಮನಸ್ಸಿನಲ್ಲಿಟ್ಟುಕೊಳ್ಳಬೇಕೆಂದು ನ್ಯಾಯಾಲಯ ಹೇಳಿದೆ.
ಚಿತ್ರ ಭಾರತದ ಸಮಗ್ರತೆಯನ್ನು ಪ್ರಶ್ನಿಸಿಲ್ಲ: ಬಾಂಬೆ ಹೈಕೋರ್ಟ್
ಮುಂಬೈ, ಜೂ.13: ‘ಉಡ್ತಾ ಪಂಜಾಬ್’ ಚಿತ್ರವು ಭಾರತದ ‘ಸಾರ್ವಭೌಮತೆ ಅಥವಾ ಸಮಗ್ರತೆ’ಯನ್ನು ಪ್ರಶ್ನಿಸುತ್ತಿಲ್ಲವೆಂದು ಬಾಂಬೆ ಹೈಕೋರ್ಟ್ ಇಂದು ಹೇಳಿದೆ. ಸೆನ್ಸಾರ್ ಮಂಡಳಿಯು ಚಿತ್ರಕ್ಕೆ ಮಾಡಿರುವ ಸರಣಿ ಕತ್ತರಿ ಪ್ರಯೋಗದ ಕುರಿತು ಅದು ಇಂದು ಮಧ್ಯಾಹ್ನ ತೀರ್ಪು ನೀಡುವ ಸಂಭವವಿದೆ.
ಚಿತ್ರವು ಮಾದಕ ದ್ರವ್ಯಗಳಿಗೆ ಉತ್ತೇಜನ ನೀಡುತ್ತಿದೆಯೇ ಎಂದು ಪರಿಶೀಲಿಸಲು ತಾವದರ ಸಂಪೂರ್ಣ ಚಿತ್ರಕತೆಯನ್ನು ಓದಿದ್ದೇವೆ. ನಗರಗಳ, ರಾಜ್ಯದ ಹೆಸರುಗಳನ್ನು ಉಲ್ಲೇಖಿಸುವ ಮೂಲಕ ಹಾಗೂ ಸೂಚನಾ ಫಲಕವೊಂದರಲ್ಲಿ ಚಿತ್ರವು ಭಾರತದ ಸಾರ್ವಭೌಮತೆ ಅಥವಾ ಸಮಗ್ರತೆಯನ್ನು ಪ್ರಶ್ನಿಸಿರುವುದು ಕಂಡುಬಂದಿಲ್ಲವೆಂದು ನ್ಯಾಯಾಲಯ ಹೇಳಿದೆ.
ಚಿತ್ರದ ಹೆಸರಿನಿಂದ ‘ಪಂಜಾಬ್’ ಹಾಗೂ ರಾಜ್ಯದ ಇತರ ಅನೇಕ ಸ್ಥಳಗಳ ಹೆಸರುಗಳ ಉಲ್ಲೇಖವನ್ನು ಕೈಬಿಡಬೇಕೆಂದು ಸೆನ್ಸಾರ್ ಮಂಡಳಿ ಆದೇಶಿಸಿತ್ತು.
ಸೃಜನಶೀಲತೆಯ ಸ್ವಾತಂತ್ರ ದುರುಪಯೋಗವಾಗುವ ಹೊರತು ಹಾಗೂ ಈ ವರೆಗೆ ಯಾರೂ ಮಧ್ಯಪ್ರವೇಶಿಸುವಂತಿಲ್ಲವೆಂದು ನ್ಯಾಯಾಲಯ ಸ್ಪಷ್ಟವಾಗಿ ತಿಳಿಸಿದೆ.







