ಮಥುರಾ ಉಗ್ರರ ಶಿಬಿರದ ಬದುಕಿನ ಇಣುಕು ನೋಟ

ಕೆರೆಗೆ ಅಭಿಮುಖವಾಗಿ ಇರುವ ಜಿಲ್ಲಾ ತೋಟಗಾರಿಕೆ ಅಧಿಕಾರಿಯ ಬಂಗಲೆಯನ್ನು ಈ ದೇವದೂತ ವಶಪಡಿಸಿಕೊಂಡಿದ್ದ. ಇದನ್ನು ತನ್ನ ಐಶಾರಾಮಿ ಮನೆಯಾಗಿ ಪರಿವರ್ತಿಸಿಕೊಂಡಿದ್ದ. ಎರಡು ಹವಾನಿಯಂತ್ರಣ ಯಂತ್ರ, ಹೀಟರ್, ಕಂಪ್ಯೂಟರ್, ಟೋಸ್ಟರ್, ಮಿಕ್ಸರ್, ಸ್ನಾನಗೃಹ ಹಾಗೂ ಗಿರಣಿ ಕೂಡಾ ಇಲ್ಲಿದ್ದವು. ಅವರ ಅನುಯಾಯಿಗಳು ಉದ್ಯಾನವನದ ಟೆಂಟ್‌ಗಳಲ್ಲಿ ವಾಸವಿದ್ದರು. ಚರಂಡಿಗೆ ಸುತ್ತ ಬಟ್ಟೆ ಕಟ್ಟಿ ಶೌಚಾಲಯಗಳನ್ನಾಗಿ ಪರಿವರ್ತಿಸಲಾಗಿತ್ತು.
ಪಾದದ ಬಳಿ ಮೂಳೆ ಮುರಿತ ಮತ್ತು ಜಜ್ಜಿದ ಗಾಯಕ್ಕೆ ವೃಂದಾವನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಮಲಾದೇವಿ (38) ಜವಾಹಾರ್‌ಬಾಗ್ ಮಥುರಾ ಉಗ್ರರ ಶಿಬಿರದಲ್ಲಿ ವಾಸವಿದ್ದ ದಿನಗಳ ಅನುಭವಗಳ ಬುತ್ತಿ ಬಿಚ್ಚಿಟ್ಟರು. ಪೊಲೀಸರ ನೆರವಿನಿಂದ ಜೂನ್ 2ರ ಸಂಜೆ ಪಾರ್ಕ್‌ನ ದೊಡ್ಡ ಗೋಡೆಯೊಂದನ್ನು ನೆಲಸಮ ಮಾಡುವವರೆಗೂ, ಸ್ವಾಧೀನ ಭಾರತ ಸುಭಾಶ್ ಸೇನೆಯ ಸದಸ್ಯರು ಸ್ವತಂತ್ರವಾಗಿ ತಮ್ಮ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದರು. ಪೊಲೀಸ್ ಕಾರ್ಯಾಚರಣೆಯ ಬಳಿಕ ದೇವಿಯವರು ಪತಿ ಹಾಗೂ ಸಹೋದರಿಯ ಸಂಪರ್ಕ ಕಡಿದುಕೊಂಡರು. ಅವರು ಇದೀಗ ಜೀವಂತ ಇದ್ದಾರೆಯೇ ಎನ್ನುವ ಬಗ್ಗೆಯೂ ಆಕೆಯಲ್ಲಿ ಅನುಮಾನವಿದೆ.
ವಿವಾಹ ಬಳಿಕ ಮಗುವನ್ನು ಪಡೆಯಲು ವಿಫಲವಾದ ದೇವಿ ಪದೇ ಪದೇ ಅಸ್ವಸ್ಥರಾಗುತ್ತಿದ್ದರು. ಈ ಸಂದರ್ಭದಲ್ಲಿ ಜೈಗುರುದೇವ್ ಅವರ ಅನುಯಾಯಿಗಳು ಅವರ ಪವಾಡ ಹಾಗೂ ಆಶೀರ್ವಾದದ ಶಕ್ತಿಯ ಬಲೆಗೆ ಬಿದ್ದರು. 2006ರಲ್ಲಿ ಈಕೆಯೂ ಅನುಯಾಯಿ ಗುಂಪು ಸೇರಿದಳು. 2012ರಲ್ಲಿ ಜೈಗುರುದೇವ್ ಮೃತಪಟ್ಟ ಬಳಿಕ, ಒಂದು ಗುಂಪು ಸಿಡಿದು ಮಥುರಾವನ್ನು ಆವಾಸ ಮಾಡಿಕೊಂಡಿತು. ಅದರಲ್ಲಿ ದೇವಿಯೂ ಸೇರಿದ್ದರು. ‘‘2012ರಲ್ಲಿ ಬಾಬಾಜಿ ಮೃತಪಟ್ಟಾಗ, ಅವರ ಮೃತದೇಹವನ್ನು ನೋಡಲು ನಮಗೆ ಅವಕಾಶವನ್ನೂ ನೀಡದೆ, ನಮ್ಮನ್ನು ಆಶ್ರಮದಿಂದ ಹೊರಹಾಕಲಾಯಿತು. ಅವರ ಮರಣ ಪ್ರಮಾಣಪತ್ರಕ್ಕಾಗಿ ಮಥುರಾ ಜಿಲ್ಲಾಧಿಕಾರಿಯವರಲ್ಲಿ ಆಗ್ರಹಿಸಿದೆವು. ಹೀಗೆ ಜವಾಹರ್‌ಬಾಗ್‌ನಲ್ಲಿ ಪ್ರತಿಭಟನೆ ಆರಂಭವಾಯಿತು.
ನೇತಾಜಿ ನಿರ್ಭೀತಿಯಿಂದ ನಮ್ಮ ಪರವಾಗಿ ಹೋರಾಡಿದರು’’ ಎಂದು ಅವರು ವಿವರಿಸುತ್ತಾರೆ. ಯಾದವ್ ಇವರ ಪಾಲಿಗೆ ಹೊಸ ದೇವದೂತ ಆಗಿದ್ದ. ಕೆರೆಗೆ ಅಭಿಮುಖವಾಗಿ ಇರುವ ಜಿಲ್ಲಾ ತೋಟಗಾರಿಕೆ ಅಧಿಕಾರಿಯ ಬಂಗಲೆಯನ್ನು ಈ ದೇವದೂತ ವಶಪಡಿಸಿಕೊಂಡಿದ್ದ. ಇದನ್ನು ತನ್ನ ಐಶಾರಾಮಿ ಮನೆಯಾಗಿ ಪರಿವರ್ತಿಸಿಕೊಂಡಿದ್ದ. ಎರಡು ಹವಾನಿಯಂತ್ರಣ ಯಂತ್ರ, ಹೀಟರ್, ಕಂಪ್ಯೂಟರ್, ಟೋಸ್ಟರ್, ಮಿಕ್ಸರ್, ಸ್ನಾನಗೃಹ ಹಾಗೂ ಗಿರಣಿ ಕೂಡಾ ಇಲ್ಲಿದ್ದವು. ಅವರ ಅನುಯಾಯಿಗಳು ಉದ್ಯಾನವನದ ಟೆಂಟ್‌ಗಳಲ್ಲಿ ವಾಸವಿದ್ದರು. ಚರಂಡಿಗೆ ಸುತ್ತ ಬಟ್ಟೆ ಕಟ್ಟಿ ಶೌಚಾಲಯಗಳನ್ನಾಗಿ ಪರಿವರ್ತಿಸಲಾಗಿತ್ತು.
ಯಾದವ್ ಅವರ ನಿರ್ಭೀತ ಮಾತಿನ ಮೋಡಿ, ಇವರನ್ನು ಹಾಗೂ ಪತಿಯನ್ನು ಅವರತ್ತ ಸೆಳೆಯಿತು. ಮದುವೆಯಾಗಿ ಆರು ವರ್ಷ ಕಳೆದರೂ ಇನ್ನೂ ಆಕೆಗೆ ಸಂತಾನ ಭಾಗ್ಯ ಇಲ್ಲದ ಕಾರಣ ತಂಗಿಯ ಮಕ್ಕಳಾದ ಸನ್ನಿ ಡಿಯೋಲ್ (10) ಹಾಗೂ ರಿಂಕಲ್ (8) ಅವರನ್ನು ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಿದ್ದಾರೆ. ತಂಗಿ ಹಾಗೂ ತಂಗಿಯ ಗಂಡ ಸೇರಿ ಆರು ಮಂದಿಯೂ ಒಂದು ಕೊಠಡಿಯಲ್ಲಿ ವಾಸವಾಗಿದ್ದರು. ಸುಮಾರು 2,500 ಮಂದಿ ಇಂಥದ್ದೇ ಬಾಳ್ವೆ ನಡೆಸುತ್ತಿದ್ದರು.
ಪಾರ್ಕ್‌ನಲ್ಲಿ ಸಂಸಾರ
ಶಿಬಿರದಲ್ಲಿ ಮಕ್ಕಳಿಂದ ‘ನೇತಾಜಿ’ ಎಂದು ಕರೆಸಿಕೊಳ್ಳಲ್ಪಡುತ್ತಿದ್ದ ರಾಮ ವೃಕ್ಷ ಯಾದವ್, ಶಿಬಿರದಲ್ಲಿದ್ದ ಎಲ್ಲರ ಸೂಕ್ಷ್ಮಾತಿಸೂಕ್ಷ್ಮ ಮಾಹಿತಿಯನ್ನೂ ಸಂಗ್ರಹಿಸಿಕೊಂಡಿದ್ದ. ಪ್ರತಿದಿನ ಮುಂಜಾನೆ ದೇವಿ ಕೂಡಾ ಎಲ್ಲರಂತೆ ಪ್ರಾರ್ಥನೆಗೆ ಸರದಿಯಲ್ಲಿ ನಿಲ್ಲುತ್ತಿದ್ದರು. ಎದುರಿನ ವೇದಿಕೆ ಬಳಿ ಪುರುಷರು ಹಾಗೂ ಮಹಿಳೆಯರು ಪ್ರತ್ಯೇಕ ಸಾಲು ಮಾಡಬೇಕಿತ್ತು. ಪ್ರವೇಶದ್ವಾರದಿಂದ 30 ಮೀಟರ್ ದೂರದಲ್ಲೇ ಪ್ರಾರ್ಥನೆ ನಡೆಯುತ್ತಿತ್ತು. ಯಾದವ್ ಆರಿಸಿದ ಹಿರಿಯರೊಬ್ಬರ ನೇತೃತ್ವದಲ್ಲಿ 20 ನಿಮಿಷ ಪ್ರಾರ್ಥನೆ ನಡೆಯುತ್ತಿತ್ತು. ಈ ಪಂಥಕ್ಕೆ ಆಕಾಶನೀಲಿ ಬಣ್ಣದ ಧ್ವಜ ಇತ್ತು. ಬಿಳಿಯ ಗೋಲದಲ್ಲಿ ಭಾರತದ ಅರ್ಧ ನಕ್ಷೆ ಚಿತ್ರಿಸಲಾಗಿತ್ತು. ಬೆಳಗ್ಗಿನ ಪ್ರಾರ್ಥನೆ ಅವರ ಪ್ರಕಾರ, ‘‘ಆಝಾದ್ ಹಿಂದ್ ಸರಕಾರದ ರಾಷ್ಟ್ರಗೀತೆ. ಪ್ರತಿದಿನ ಪ್ರಾರ್ಥನೆಯ ಅವಧಿಯಲ್ಲಿ ಸಂಕಲ್ಪ್ ಹೇ ಶಹೀದೊ ಕಾ, ದೇಶಭಕ್ತೊ ಕಿ ಮಂಜಿಲ್ ತಕ್ಷಾ, ಸ್ವಾಧೀನ ಭಾರತ ಕಾ ಝಂಡಾ ಲೆಹರಾನೆ ಲಗಾ...ಹೀಗೆ ನಾದಲಹರಿ ತೇಲಿ ಬರುತ್ತಿತ್ತು. ಕೊನೆಗೆ ಜೈಹಿಂದ್, ಜೈ ಸುಭಾಷ್ ಎಂಬಲ್ಲಿಗೆ ಅಂತ್ಯವಾಗುತ್ತಿತ್ತು’’ ಎಂದು ನೆನಪಿಸಿಕೊಳ್ಳುತ್ತಾರೆ.
‘‘ವಿವಿಧ ಗುಂಪುಗಳಲ್ಲಿದ್ದ ಮಕ್ಕಳು ತರಬೇತಿಗಾಗಿ ಬೆಳಗ್ಗೆ 6ಕ್ಕೆ ಏಳಬೇಕಾಗುತ್ತಿತ್ತು. ಮಕ್ಕಳು ವ್ಯಾಯಾಮ ನಡೆಸುವಾಗ, ಪುರುಷರು ಕೂಡಾ ಶಸ್ತ್ರಾಸ್ತ್ರ ತರಬೇತಿ ಹಾಗೂ ದೈಹಿಕ ಕಸರತ್ತು ಕಲಿಯುತ್ತಿದ್ದರು. ಬೆಳಗ್ಗೆ 8:30ರಿಂದ ಮಧ್ಯಾಹ್ನ 12ವರೆಗೆ ಉಪಾಹಾರ. ಮಧ್ಯಾಹ್ನದ ಊಟ ಇರಲಿಲ್ಲ. ಸಂಜೆ 4ರಿಂದ 8ರವರೆಗೆ ರಾತ್ರಿ ಊಟ ನೀಡಲಾಗುತ್ತಿತ್ತು. ಊಟಕ್ಕೆ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ. ಪುರುಷರ ಊಟಕ್ಕೆ ಮೈದಾನಕ್ಕೆ ಚಾಪೆ ಹಾಸಲಾಗುತ್ತಿತ್ತು. ಮಹಿಳೆಯರಿಗೆ ಮಹಿಳೆಯರು, ಪುರುಷರಿಗೆ ಪುರುಷರು ಊಟ ಬಡಿಸುತ್ತಿದ್ದರು.’’
‘‘ಮಕ್ಕಳಿಗೆ ಮೂರು ಬಾರಿ ಕಿಚಡಿ ಇದ್ದರೆ, ಸಾಮಾನ್ಯವಾಗಿ ಉಪಾಹಾರಕ್ಕೆ ಎಣ್ಣೆ ಹಾಕದ ಮೂರು ರೋಟಿ ಇರುತ್ತಿತ್ತು. ರಾತ್ರಿ ಭೋಜನ ಮಾತ್ರ ಉತ್ತಮವಾಗಿತ್ತು. ಅನ್ನ, ದಾಲ್ ಹಾಗೂ ಸಬ್ಜಿ ಇರುತ್ತಿತ್ತು’’ ಎಂದು ತನ್ನ ತಂದೆ ತಾಯಿಯನ್ನು ಹುಡುಕಿಕೊಂಡು ಲೂಧಿಯಾನಾದಿಂದ ಮಥುರಾಗೆ ಬಂದಿದ್ದ ಕೋಮಲ್ ಹೇಳಿದರು. ಮೋತಿಲಾಲ್ ಮೌರ್ಯ (59) ಹಾಗೂ ಲಾಖಿದೇವಿ (52) ಇಬ್ಬರೂ ಈಗ ಮಥುರಾ ಜೈಲಿನಲ್ಲಿದ್ದಾರೆ. ಜೀವವಿಮಾ ನಿಗಮದ ಪ್ರತಿನಿಧಿಯಾಗಿದ್ದ ಮೌರ್ಯ ತಮ್ಮ ಉದ್ಯೋಗ, ಎರಡು ಮಹಡಿಯ ಮನೆ ಮತ್ತು ಐದು ಮಕ್ಕಳನ್ನು ತೊರೆದು 2014ರಲ್ಲಿ ಲೂಧಿಯಾನಾದಿಂದ ಜವಾಹರ್‌ಬಾಗ್‌ಗೆ ಬಂದು ಸ್ವಾಮೀಜಿ ವೇಷಧಾರಿ ಉಗ್ರರ ತಂಡ ಸೇರಿದ್ದ.
ಪ್ರತಿಯೊಬ್ಬರ ಕೆಲಸವನ್ನೂ ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗುತ್ತಿತ್ತು. ಮಹಿಳೆಯರಿಗೆ ಗುಡಿಸುವ, ರೋಟಿ ಹಾಗೂ ಅನ್ನ ತಯಾರಿಸುವ ಕೆಲಸ. ಪುರುಷರಿಗೆ ಕಾವಲು ಹಾಗೂ ನಿರ್ವಹಣೆ ಕೆಲಸ. ಕ್ಯಾಂಟೀನ್ ಮೇಲುಸ್ತುವಾರಿಗೆ ಒಂದು ತಂಡವಿತ್ತು. ಒಂದು ತಂಡ ಸ್ವಚ್ಛತೆ ಕಾಪಾಡುವ ಹೊಣೆ ಹೊತ್ತಿದ್ದರೆ ಮತ್ತೊಂದಕ್ಕೆ ತೋಟಗಾರಿಕೆ ಕೆಲಸ ವಹಿಸಲಾಗಿತ್ತು.
ಆಶ್ರಮದಲ್ಲಿ ಉಳಿಯಲು ಬಯಸುವವರು ಶಿಸ್ತು ಹೊಂದಿರಬೇಕಿತ್ತು. ಕೆಲ ನಿಯಮಗಳೂ ಇದ್ದವು. ಯಾರೂ ಅನುಮತಿ ಇಲ್ಲದೆ ಮುಖ್ಯದ್ವಾರದಿಂದ ಹೊರಹೋಗುವಂತಿರಲಿಲ್ಲ. ನೀಡುತ್ತಿದ್ದ ಆಹಾರ ಪ್ರಮಾಣ ನಿಗದಿಪಡಿಸಲಾಗಿತ್ತು. ಕೈತೋಟದಿಂದ ಹಣ್ಣುಗಳನ್ನು ಕೀಳಲು ನಿರ್ದಿಷ್ಟ ತಂಡಕ್ಕೆ ಮಾತ್ರ ಅವಕಾಶ ಇತ್ತು. ಇತರ ನಿವಾಸಿಗಳು ಹಣ್ಣು ಕೀಳುವಂತಿರಲಿಲ್ಲ. ಛಾಯಾಗ್ರಹಣ ನಿಷೇಧ. ಸಣ್ಣ ಪುಟ್ಟ ಜಗಳ ಹಾಗೂ ವಾಗ್ವಾದಕ್ಕೂ ದಂಡ ವಿಧಿಸುವ ಪದ್ಧತಿ ಇತ್ತು.
‘‘ತಪ್ಪುಮಾಡಿದವರನ್ನು ನೇತಾಜಿ ಬರ್ಬರವಾಗಿ ಹೊಡೆಯುತ್ತಿದ್ದರು. ಒಮ್ಮೆ ಇಬ್ಬರು ನೀರಿಗಾಗಿ ಜಗಳವಾಡುತ್ತಿದ್ದರು. ಈ ಪೈಕಿ ಒಬ್ಬನಿಗೆ ಮರದ ಬಡಿಗೆಯಿಂದ ಚೆನ್ನಾಗಿ ಥಳಿಸಲಾಯಿತು. ಮತ್ತೆ ಕೆಲ ಅಪರಾಧಗಳಿಗೆ, ಎಲ್ಲ ನಿವಾಸಿಗಳ ಒಂದು ದಿನದ ಆಹಾರದ ವೆಚ್ಚವನ್ನು ಭರಿಸುವ ಶಿಕ್ಷೆ ನೀಡಲಾಗುತ್ತಿತ್ತು’’ ಎಂದು ಮಧ್ಯಪ್ರದೇಶದ ರೇವಾ ಜಿಲ್ಲೆಯಿಂದ ಆಗಮಿಸಿದ್ದ ಚಿಲ್ಲರೆ ವ್ಯಾಪಾರಿ ಹಜಾರಿಲಾಲ್ ಗುಪ್ತಾ ಹೇಳುತ್ತಾರೆ. ಒಂದು ದಿನ ನಿವಾಸಿಯ ಮಗುವೊಂದು ಹಕ್ಕಿಯನ್ನು ಕೊಂದಾಗ, ಆ ಕುಟುಂಬಕ್ಕೆ ಒಂದು ದಿನದ ಆಹಾರಕ್ಕಾಗುವಷ್ಟು ವೆಚ್ಚ ಭರಿಸುವಂತೆ ಸೂಚಿಸಲಾಯಿತು.
1986ಲ್ಲಿ ಅಲಹಾಬಾದ್‌ನಲ್ಲಿ ಒಂದು ವಾರದ ಕಾರ್ಯಕ್ರಮಕ್ಕಾಗಿ ಜೈಗುರುದೇವ್ ಆಮಿಸಿದ್ದರು. ಆಗ ಗುಪ್ತಾ ಕೂಡಾ ಅಲ್ಲಿಗೆ ಬಂದಿದ್ದರು. ಸಮಾರಂಭದಲ್ಲಿ ಪಾಲ್ಗೊಂಡ ಗುಪ್ತಾ ತಕ್ಷಣದಿಂದಲೇ ಅವರ ಭಕ್ತರಾದರು. ‘‘ಅವರ ಮಾತಿನಿಂದಲೇ ಅವರು ದೇವರು ಎನ್ನುವುದು ನನಗೆ ಮನದಟ್ಟಾಯಿತು. ಒಂದು ವರ್ಷದಲ್ಲಿ ಅವರ ದರ್ಶನಕ್ಕಾಗಿ ನಾಲ್ಕು ಬಾರಿ ಮಥುರಾಗೆ ಹೋದೆ. ಬಳಿಕ ಯಾದವ್, ವಿಧಿಸಂದೇಶ ಸತ್ಯಾಗ್ರಹ ಯಾತ್ರೆಯಲ್ಲೂ ಪಾಲ್ಗೊಂಡರು. ತಮ್ಮ ಗುರು ಮೃತಪಟ್ಟಿದ್ದಾರೆ ಎಂಬ ಸುದ್ದಿ ತಿಳಿದು ಅವರು ಅಲ್ಲಿಗೆ ಬಂದಿದ್ದರು. 2012ರಲ್ಲಿ ಬಾಬಾ ಮೃತಪಟ್ಟಿದ್ದಾರೆ ಎಂದು ಗೊತ್ತಾದಾಗ, ಅವರ ಪಾರ್ಥಿವ ಶರೀರ ನೋಡಲೂ ಅವಕಾಶ ನೀಡದೆ, ಬಡಿಗೆ ಹಿಡಿದು ಓಡಿಸಿದರು. ಏನು ಕೇಳಲೂ ಅವಕಾಶ ನೀಡಲಿಲ್ಲ. ಅವರು ಗುರೂಜಿಯನ್ನು ಹುದುಗಿಸಿದ್ದರೇ? ಅವರು ಜೀವಂತವಿದ್ದಾರೆಯೇ? ಇದ್ದರೆ ಎಲ್ಲಿದ್ದಾರೆ? ಎಂದು ತಿಳಿಯುವುದು ನಮ್ಮ ಉದ್ದೇಶವಾಗಿತ್ತು. ಅವರು ಸತ್ತಿದ್ದರೆ ಮರಣ ಪ್ರಮಾಣಪತ್ರ ನೀಡಿ. ನಾವು ಸತ್ಯ ತಿಳಿಯುವ ಸಲುವಾಗಿ ಮಾತ್ರ ಮಥುರಾಗೆ ಬಂದಿದ್ದೇವೆ’’ ಎಂದು ಹೇಳಿದರು.
ಜವಾಹರ್‌ಬಾಗ್‌ನಲ್ಲಿ ಹೋಮಿಯೋಪಥಿ ಕ್ಲಿನಿಕ್ ಕೂಡಾ ಇತ್ತು. ಅಲೋಪಥಿ ಚಿಕಿತ್ಸೆಗಾಗಿ ಇಬ್ಬರು ವೈದ್ಯರು ವ್ಯಾನ್‌ನಲ್ಲಿ ಪ್ರತೀ ಶುಕ್ರವಾರ ಬರುತ್ತಿದ್ದರು.
ಸಂದರ್ಶಕರ ಪ್ರವಾಹ
ಜವಾಹರ್‌ಬಾಗ್‌ನ ನಿವಾಸಿಗಳಿಗೆ ಎರಡು ವರ್ಷಕ್ಕೂ ಹಿಂದೆ ಜವಾಹರ್‌ಪಾರ್ಕ್ ಮನೋರಂಜನೆ ತಾಣವಾಗಿತ್ತು. ಹಲವರು ವಕೀಲರು ಪದೇ ಪದೇ ಭೇಟಿ ನೀಡುತ್ತಿದ್ದರು.
‘‘ನೇತಾಜಿ ಅಂತಿಮ ಕದನಕ್ಕಾಗಿ ಸನ್ನದ್ಧರಾಗಿದ್ದರು’’ ಎಂದು 23 ವರ್ಷದ ಮಿಂಟೂ ಸಿಂಗ್ ಹೇಳುತ್ತಾರೆ. ಜೂನ್ 2ರ ಘಟನೆಯಲ್ಲಿ ಇವರ ಗದ್ದಕ್ಕೆ ಗುಂಡು ತಗುಲಿದ್ದು, ವೃಂದಾವನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಂಗ್ ಹಾಗೂ ದೇವಿ ಸೇರಿ ಏಳು ಮಂದಿ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೊಡ್ಡ ಕೆಂಪು ಕಾರುಗಳಲ್ಲಿ ಮುಖಂಡನನ್ನು ಭೇಟಿ ಮಾಡಲು ಪ್ರಭಾವಿ ವ್ಯಕ್ತಿಗಳೂ ಬರುತ್ತಿದ್ದರು. ಅತಿಥಿಗಳು ಬಂದಾಗಲೆಲ್ಲ ನೇತಾಜಿ, ಬೇಲದ ಹಣ್ಣಿನ ಶರಬತ್ ತಯಾರಿಸಲು ಮಹಿಳೆಯರಿಗೆ ಸೂಚಿಸುತ್ತಿದ್ದರು. ಹಲವು ಬಾರಿ ಎಸ್ಪಿಮುಕುಲ್ ದ್ವಿವೇದಿ ಕೂಡಾ ಆಗಮಿಸಿದ್ದರು. ದ್ವಿವೇದಿ, ಜೂನ್ 2ರ ದಾಳಿ ವೇಳೆ ಹತ್ಯೆಗೀಡಾಗಿದ್ದಾರೆ. ಈ ಆವರಣದೊಳಗೆ ರಾತ್ರಿ ವೇಳೆ ಆಹಾರ ಧಾನ್ಯಗಳನ್ನು ಹೊತ್ತ ಲಾರಿಗಳು ಬಂದಾಗ ಇಡೀ ಶಿಬಿರ ಚುರುಕುಗೊಳ್ಳುತ್ತಿತ್ತು. ವಿವಿಧ ಕಾರಣಗಳಿಗೆ ಮರಗಳನ್ನು ಕೂಡಾ ಕಡಿಯಲಾಗುತ್ತಿತ್ತು.
ಮಾರ್ಚ್ 14ರಿಂದ ಒಂದು ವಾರ ಜವಾಹರ್‌ಬಾಗ್ ದೀಪಾವಳಿಯಂತೆ ಕಂಗೊಳಿಸುತ್ತಿತ್ತು. ಸ್ವಾಧೀನ ಭಾರತ ಸುಭಾಶ್ ಸೇನೆ ಇಲ್ಲಿ ಸತ್ಯಾಗ್ರಹ ಆರಂಭಿಸಿ, ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಆಚರಣೆ ಆಯೋಜಿಸಲಾಗಿತ್ತು. ಸತ್ಯಾಗ್ರಹಿಗಳು ಆಲಂಕಾರಿಕ ದೀಪಗಳನ್ನು ವ್ಯವಸ್ಥೆ ಮಾಡಿದರು. ಯಾದವ್ ಆರು ದಿನಗಳ ಕಾಲ ಸತ್ಸಂಗ ಆಯೋಜಿಸಿದ್ದರು. ಏಳನೆ ದಿನವಾದ ಭಂಡಾರದಂದು ಉನ್ನತ ಅಧಿಕಾರಿಗಳನ್ನು ಹಾಗೂ ರಾಜಕಾರಣಿಗಳನ್ನು ಆಹ್ವಾನಿಸಲಾಗಿತ್ತು.
‘‘ಇಲ್ಲಿ ವಾಸವಾಗಿದ್ದ ಬಹುತೇಕ ಮಂದಿ ರೈತರು ಅಥವಾ ಸಣ್ಣ ಪುಟ್ಟ ಉದ್ಯೋಗ ಮಾಡಿಕೊಂಡಿದ್ದವರು. ಇತರ ಕೆಲವರು ಬಿಹಾರ, ಪಂಜಾಬ್, ಮಧ್ಯಪ್ರದೇಶ, ಛತ್ತೀಸ್‌ಗಡ, ಉತ್ತರ ಪ್ರದೇಶದ ಇತರ ನಗರಗಳಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದವರು. ಇಲ್ಲಿಗೆ ಬಂದ ಪ್ರತಿಯೊಬ್ಬರೂ ಈ ಕಾರಣಕ್ಕೆ ಇಲ್ಲಿಗೆ ಬಂದವರಲ್ಲ. ಯಾದವ್ ಹಾಗೂ ಅನುಯಾಯಿಗಳು ಇವರಿಗೆ ಉದ್ಯೋಗ ಮತ್ತು ಜಮೀನು ನೀಡುವ ಆಸೆ ತೋರಿಸಿದ್ದರು. ಉದ್ಯೋಗ ನೀಡುವ ಭರವಸೆಯ ಕರಪತ್ರಗಳನ್ನು ಕಳುಹಿಸುತ್ತಿದ್ದರು. ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣಗಳಲ್ಲಿ ಕೆಲವರನ್ನು ನಿಲ್ಲಿಸಿ, ನಗರಕ್ಕೆ ಬಂದ ರೈತರನ್ನು ತಮ್ಮ ಸಂಘಟನೆಗೆ ಸೇರುವಂತೆ ಮನವೊಲಿಸಲಾಗುತ್ತಿತ್ತು’’ ಎಂದು ಜವಾಹರ್‌ಬಾಗ್ ಕಾಲನಿಯ ನಿವಾಸಿ ಸಂಜಯ ಚೌಧರಿ ಹೇಳಿದರು.
ಎರಡು ತಿಂಗಳ ಹಿಂದೆ ಸರಕಾರ ವಿದ್ಯುತ್ ಸಂಪರ್ಕ ಕಡಿತಗೊಳಿಸಿದಾಗ, ಅನುಯಾಯಿಗಳು ಬಿದಿರಿನ ತಾತ್ಕಾಲಿಕ ಕಂಬಗಳನ್ನು ಹಾಕಿ ಸೌರ ಪ್ಯಾನಲ್ ವಿದ್ಯುತ್ ವ್ಯವಸ್ಥೆ ಮಾಡಿಕೊಂಡಿದ್ದರು. ಪಾರ್ಕಿನ ಸುತ್ತಲೂ ಮರಗಳಿಗೆ ಧ್ವನಿವರ್ಧಕಗಳನ್ನು ಅಳವಡಿಸಿ ಇದರ ಮೂಲಕ ಆಹಾರ, ಪ್ರಾರ್ಥನೆ ಹಾಗೂ ವ್ಯಾಯಾಮಕ್ಕೆ ಕರೆಯಲಾಗುತ್ತಿತ್ತು. ಕೆಲವೊಂದು ವಿಶೇಷ ಘೋಷಣೆಗಳಿಗೂ ಅದನ್ನು ಬಳಸಲಾಗುತ್ತಿತ್ತು.ಕಳೆದ ಜನವರಿಯಲ್ಲಿ ಯಾದವ್ ಮಕ್ಕಳಿಗೆ ತರಗತಿಗಳನ್ನು ಆರಂಭಿಸಿದ್ದರು. ಉದ್ಯಾನವನದಲ್ಲಿದ್ದ ಕೆರೆ, ತರಗತಿ ಕೊಠಡಿಯಾಗಿ ಮಾರ್ಪಾಡಾಯಿತು. ಬದಿಗಳಿಗೆ ಕಪ್ಪುಬಣ್ಣ ಬಳಿದು, ಕರಿಹಲಗೆಯಾಗಿ ಅದನ್ನು ಬಳಸಲಾಗುತ್ತಿತ್ತು. ಇದರ ಜತೆಗೆ ‘‘ಶಹೀದೊನ್ ಕೆ ಗುರುದೇವ್ ನೇತಾಜಿ ಸುಭಾಶ್ಚಂದ್ರ ಬೋಸ್.. ಮೇರಾ ನೇತಾಜಿ ಕೋ ಝಂಡಾ ಫೆರ್ಹಾನಾ ವಿಶ್ವ ಮೈನ್’’ ಎಂಬ ಘೋಷಣೆಗಳೂ ಅಲ್ಲಿದ್ದವು. ಬೋಧನೆಗೆ ಯಾವುದೇ ನಿಗದಿತ ಕ್ರಮ ಇರಲಿಲ್ಲ. ತಮಗೆ ಗೊತ್ತಿರುವ ವಿಷಯಗಳನ್ನು ಯಾರಾದರೂ ಬೋಧಿಸಬಹುದಿತ್ತು. ರಾತ್ರಿ 10ರವರೆಗೆ ತರಗತಿಗಳು ನಡೆಯುತ್ತಿದ್ದವು.
ಅಲ್ಲಾಡದ ಅನುಯಾಯಿ ನಂಬಿಕೆ
ಜೂನ್ 2ರ ಘಟನೆ ಬಳಿಕ ತಮ್ಮ ಕುಟುಂಬ ಎಲ್ಲಿ ಛಿದ್ರವಾಗಿದೆ ಎನ್ನುವುದು ಮಿಂಟು ಸಿಂಗ್‌ಗೆ ಕೂಡಾ ಗೊತ್ತಿಲ್ಲ. ತಂದೆ, ತಾಯಿ ಹಾಗೂ ಆರು ಮಂದಿ ಸಹೋದರರು 2014ರಲ್ಲಿ ಬರೇಲಿಯಿಂದ ಇಲ್ಲಿಗೆ ಬಂದಿದ್ದರು. 2,500 ಮಂದಿ ಅನುಯಾಯಿಗಳ ಜತೆಗೆ ಇವರೂ ವಾಸವಾಗಿದ್ದರು. ಮಥುರಾ ಪಟ್ಟಣದ ಹೃದಯ ಭಾಗದಲ್ಲಿ 270 ಎಕರೆ ವಿಶಾಲ ಪ್ರದೇಶವನ್ನು ಈ ಶಿಬಿರ ಅತಿಕ್ರಮಿಸಿಕೊಂಡಿತ್ತು. ಈ ಘಟನಾವಳಿಗಳ ಬಳಿಕ ಸಿಂಗ್ ಅವರ ನಂಬಿಕೆ ಬದಲಾಗಿದೆ ಎಂದು ತಿಳಿದುಕೊಂಡರೆ ಅದು ತಪ್ಪು. ರಕ್ತದ ಕಲೆಗಳಿರುವ ಹಾಸಿಗೆಯಿಂದ ಎದ್ದು ಕುಳಿತುಕೊಂಡು, ಗಲಭೆಯಲ್ಲಿ ಹತರಾದ ಜೈ ಗುರುದೇವ್ ಅಥವಾ ರಾಮ್ ವೃಕ್ಷ ಯಾದವ್ ಅವರ ಗುಣಗಾನ ಮಾಡುತ್ತಾರೆ. ಇಂದಿಗೂ ಎಲ್ಲ ಅನುಯಾಯಿಗಳು ಅವರನ್ನು ಭಗವಾನ್‌ಜಿ ಎಂದೇ ಕರೆಯುತ್ತಾರೆ ಹಾಗೂ ಆಝಾದ್ ಹಿಂದ್ ಸರಕಾರ ಹೇಗೆ ಒಂದಲ್ಲ ಒಂದು ದಿನ ದೇಶಕ್ಕೆ ಬರುತ್ತದೆ ಎಂಬ ಅಚಲ ನಂಬಿಕೆಯಿಂದ ಇದ್ದಾರೆ.
ಒಪ್ಪಂದಕ್ಕೆ ಕಟ್ಟುಬಿದ್ದು, ದೇವಿ ಹಾಗೂ ಇತರ ಆರು ರೋಗಿಗಳು ಕೂಡಾ ‘‘ಜೈಹಿಂದ್, ಜೈ ಸುಭಾಸ್’’ ಎಂಬ ಮಂತ್ರವನ್ನೇ ಪಠಿಸುತ್ತಾರೆ!
ಕೃಪೆ: ದ ಹಿಂದೂ







