ಅಧಿಕಾರಕ್ಕೆ ಬಂದರೆ ಒಂದೇ ತಿಂಗಳಲ್ಲಿ ಪಂಜಾಬ್‌ನ ಮಾದಕ ದ್ರವ್ಯ ಪಿಡುಗು ಮಟ್ಟ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ಜಲಂಧರ್, ಜೂ.13: ಮುಂದಿನ ವರ್ಷದ ಚುನಾವಣೆಯಲ್ಲಿ ತನ್ನ ಪಕ್ಷವು ಅಧಿಕಾರಕ್ಕೆ ಬಂದಲ್ಲಿ ಪಂಜಾಬ್‌ನ ಮಾದಕ ದ್ರವ್ಯ ಸಮಸ್ಯೆಯನ್ನು ಒಂದೇ ತಿಂಗಳಲ್ಲಿ ಪರಿಹರಿಸುತ್ತೇವೆಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದಿಲ್ಲಿ ಹೇಳಿದ್ದಾರೆ.
ಆಳುತ್ತಿರುವ ಬಿಜೆಪಿ-ಅಕಾಲಿದಳ ಮೈತ್ರಿಕೂಟವು ರಾಜ್ಯದಲ್ಲಿ ಈ ಕಾನೂನುಬಾಹಿರ ವ್ಯಾಪಾರವನ್ನು ಪೋಷಿಸುತ್ತಿದೆಯೆಂದು ಅವರು ಆರೋಪಿಸಿದ್ದಾರೆ.
ಜಲಂಧರ್‌ನಲ್ಲಿ ರ್ಯಾಲಿಯೊಂದರ ನೇತೃತ್ವ ವಹಿಸಿದ್ದ ರಾಹುಲ್, ಇಲ್ಲಿನ ಸರಕಾರವು ತನ್ನ ಲಾಭಕ್ಕಾಗಿ ಮಾದಕ ದ್ರವ್ಯ ವ್ಯಾಪಾರಕ್ಕೆ ಪ್ರೋತ್ಸಾಹ ನೀಡುತ್ತಿದೆ. ತಮಗೆ ಅಧಿಕಾರ ದೊರೆತಲ್ಲಿ ಒಂದೇ ತಿಂಗಳಲ್ಲಿ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ. ಪೊಲೀಸರ ಕೈಗಳನ್ನು ಮುಕ್ತಗೊಳಿಸುವುದಷ್ಟೇ ತಾವು ಮಾಡಬೇಕಾದ ಕೆಲಸವಾಗಿದೆ. ಕೇವಲ ಕಾಂಗ್ರೆಸ್‌ನಿಂದ ಮಾತ್ರವೇ ಅದನ್ನು ಮಾಡಲು ಸಾಧ್ಯ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ದಾಳಿ ನಡೆಸಿದ ಅವರು, ಮೋದಿಜಿ ವ್ಯಾಪಾರವನ್ನು ಸುಲಭಗೊಳಿಸುವ ಮಾತನ್ನಾಡುತ್ತಿದ್ದಾರೆ. ಪಂಜಾಬ್‌ನಲ್ಲಿ ಸುಲಭವಾಗಿ ಮಾಡಬಹುದಾದ ವ್ಯಾಪಾರ ಕೇವಲ ಮಾದಕ ದ್ರವ್ಯಗಳದ್ದು ಮಾತ್ರವೆಂದು ಟೀಕಿಸಿದರು.
ಮಾದಕ ದ್ರವ್ಯ ವ್ಯಸನದ ಮೇಲೆ ಬೆಳಕು ಚೆಲ್ಲುವ ‘ಉಡ್ತಾ ಪಂಜಾಬ್’ ಚಿತ್ರದ ವಿರುದ್ಧ ಸೆನ್ಸಾರ್ ಮಂಡಳಿಯ ಕ್ರಮದ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ರಾಹುಲ್, ರಾಜ್ಯದಲ್ಲಿ ಮಾದಕ ದ್ರವ್ಯ ಸಮಸ್ಯೆ ವ್ಯಾಪಕವಾಗಿದೆ. ಚಿತ್ರವನ್ನು ಸೆನ್ಸಾರ್ ಮಾಡುವುದರಿಂದ ಅದು ನಿವಾರಣೆಯಾಗದು ಎಂದರು.
ಬಿಜೆಪಿಯು ಅಕಾಲಿದಳದ ಭಾಗಿದಾರ ಪಕ್ಷವಾಗಿದೆ. ಆದುದರಿಂದ ಮಾದಕ ದ್ರವ್ಯದ ವಿರುದ್ಧ ಪಂಜಾಬ್ ಸರಕಾರದ ‘ನಿಷ್ಕ್ರಿಯತೆಗೆ’ ಅದೂ ಸಮಾನ ದೋಷಿಯಾಗುತ್ತದೆಯೆಂದು ಕಾಂಗ್ರೆಸ್ ಹೇಳಿದೆ.
ಪಂಜಾಬ್‌ನ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಹಿತ ಹಲವು ಹಿರಿಯ ಕಾಂಗ್ರೆಸ್ ನಾಯಕರು ಹಾಜರಿದ್ದರು.





