ಚುಟುಕು ಸುದ್ದಿಗಳು
ಶಂಕಿತ ಡೆಂಗ್‌ಗೆ ಮಹಿಳೆ ಬಲಿ
ಸುಬ್ರಹ್ಮಣ್ಯ, ಜೂ.13: ಶಂಕಿತ ಡೆಂಗ್ ಜ್ವರದಿಂದ ಬಳಲುತ್ತಿದ್ದಪಂಜ ಪಂಬೆತ್ತಾಡಿ ಮುಕ್ಕುಡ ನಿವಾಸಿ ರಾಜೇಶ್ವರಿ(43) ಚಿಕಿತ್ಸೆ ಫಲಕಾರಿಯಾ ಗದೆ ಸೋಮವಾರ ಮೃತ ಪಟ್ಟಿದ್ದಾರೆ.
ಮುಕ್ಕುಡ ಶ್ರೀರಾಮ ಜೋಯಿಸರ ಪತ್ನಿಯಾದ ಇವರು ಕಳೆದ ಮೂರು ನಾಲ್ಕು ದಿನಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಡಿಮೆ ರಕ್ತದೊತ್ತಡ ಸಮಸ್ಯೆ ಕೂಡ ಇದ್ದುದರಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತರು ಪತಿ, ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ.
ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ಕೊರತೆ: ತಪಾಸಣೆಗೆ ತೊಂದರೆ
ಕಾಸರಗೋಡು, ಜೂ.13: ಸಾಂಕ್ರಾಮಿಕ ರೋಗದ ಹಾವಳಿಯಿಂದ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಕಾಸರಗೋಡು ಸರಕಾರಿ ಜನರಲ್ ಆಸ್ಪತ್ರೆಯ ಹಲವು ಚಿಕಿತ್ಸಾ ಘಟಕಗಳು ಮುಚ್ಚಬೇಕಾದ ಸ್ಥಿತಿಗೆ ಬಂದಿದೆ. ಸರಕಾರಿ ಆಸ್ಪತ್ರೆಯಲ್ಲಿ ನಿರಂ ತರ ವಿದ್ಯುತ್ ಮೊಟಕುಗೊಳ್ಳುತ್ತಿದ್ದು, ವಿದ್ಯುತ್ ಕೊರತೆಯಿಂದ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಅನಾನುಕೂಲ ಪರಿಸ್ಥಿತಿ ಉಂಟಾಗಿದೆ. ಆಸ್ಪತ್ರೆಯ ಹೊಸ ಕಟ್ಟಡದಲ್ಲಿ ಮಾತ್ರ ಜನರೇಟರ್ ವ್ಯವಸ್ಥೆ ಇದೆ. ನೇತ್ರ ತಪಾ ಸಣಾ ಘಟಕ, ಕ್ಷಯ ರೋಗತಪಾಸಣಾ ಕೇಂದ್ರ, ಪುರುಷರ ವಾರ್ಡ,ಎಕ್ಸ್‌ರೇ ಘಟಕ ಹಳೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಆದರೆ ವಿದ್ಯುತ್ ಮೊಟಕುಗೊಳ್ಳುತ್ತಿ ರುವುದರಿಂದ ವೈದ್ಯರಿಗೆ ರೋಗಿಗಳ ತಪಾಸಣೆ ಸಾಧ್ಯವಾಗುತ್ತಿಲ್ಲ. ಕ್ಯಾಂಡಲ್ ಉರಿಸಿ ತಪಾಸಣೆ ನಡೆಸಬೇಕಿದೆ. ತಪಾಸಣಾ ಯಂತ್ರಗಳು ಮೂಲೆ ಸೇರಿವೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಸಾಂಕ್ರಾಮಿಕ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಸಾವಿರಾರು ಮಂದಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಬಡ ರೋಗಿಗಳಿಗೆ ನೆರವಾಗಬೇಕಾದ ಸರಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಬಗ್ಗೆ ಆಡಳಿತ ವರ್ಗ ಇನ್ನೂ ಕಣ್ತೆರಿದಿಲ್ಲ.
ವಶಪಡಿಸಿಕೊಂಡ ಮರಳಿನ ಬಹಿರಂಗ ಹರಾಜು
ಉಡುಪಿ, ಜೂ.13: ಬ್ರಹ್ಮಾವರ ಹೋಬಳಿಯ ಚೇರ್ಕಾಡಿ, ಹಲುವಳ್ಳಿ ಗ್ರಾಮದಲ್ಲಿ ಇತ್ತೀ ಚೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಗಳು ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಮರಳನ್ನು ವಶಪಡಿಸಿಕೊಂಡಿದ್ದು, ಅದರ ಬಹಿರಂಗ ಹರಾಜು ಇಂದು ನಡೆಯಲಿದೆ.
ಹರಾಜಿನಲ್ಲಿ ಮುಂಗಡವಾಗಿ 10,000ರೂ. ಭದ್ರತಾ ಠೇವಣಿಯಾಗಿ ಡಿಡಿ ಮೂಲಕ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೆಸರಿನಲ್ಲಿ ಪಾವತಿಸಬೇಕು. ಹರಾಜಿನಲ್ಲಿ ಗೆದ್ದ ಉಮೇದುವಾರರು ಹರಾಜಿನ ಮೊಬಲಗಿಗೆ ಶೇ.15 ಮಾರಾಟ ಕರ ತೆರಿಗೆಯನ್ನು ಪಾವತಿ ಮಾಡಿ ರಶೀದಿಯನ್ನು ಪಡೆದುಕೊಳ್ಳಬೇಕು. ಉಳಿದವರ ಹಣವನ್ನು ಕೂಡಲೇ ಹಿಂತಿರುಗಿಸಲಾಗುವುದು. ಹರಾಜನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ಹಕ್ಕನ್ನು ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಹೊಂದಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಕೃಷ್ಣ ಮಠದಲ್ಲಿ ಇಂದಿನಿಂದ ಸಸಿ ವಿತರಣೆ
ಉಡುಪಿ, ಜೂ.13: ಪೇಜಾವರ ಶ್ರೀವಿಶ್ವೇಶ ತೀರ್ಥರು ತಮ್ಮ ಪಂಚಮ ಪರ್ಯಾಯದ ಕ್ರಾಂತಿಕಾರಿ ಯೋಜನೆಯಾಗಿ ಪರ್ಯಾಯೋತ್ಸವ ದರ್ಬಾರ್ ಸಭೆಯಲ್ಲಿ ಘೋಷಿಸಿದ ‘ವೃಕ್ಷರಕ್ಷ ವಿಶ್ವರಕ್ಷ’ ಯೋಜನೆಯಂತೆ ಆಸಕ್ತ ಸಾರ್ವಜನಿಕರಿಗೆ ಕೃಷ್ಣನ ಹೆಸರಿನಲ್ಲಿ ನೆಟ್ಟು ಪೋಷಿಸಲು ಕೃಷ್ಣಮಠದಲ್ಲಿ ಸಸಿ ವಿತರಣಾ ಕೌಂಟರ್ ತೆರೆಯಲಿದ್ದಾರೆ. ಇದರ ಉದ್ಘಾಟನೆ ಇಂದು ಸಂಜೆ 5ಗಂಟೆಗೆ ನಡೆಯಲಿದೆ.
ಪೇಜಾವರ ಉಭಯ ಶ್ರೀಗಳು ಕೌಂಟರ್‌ನ್ನು ಉದ್ಘಾಟಿಸಲಿದ್ದು, ಉಡುಪಿ ಡಿಎಫ್‌ಒ ಎಂ.ವಿ. ಅಮರನಾಥ್, ಆರ್‌ಜಿ ಭಟ್, ವಲಯ ಅರಣ್ಯಾಧಿಕಾರಿ ರಮೇಶ್, ರವೀಂದ್ರ ಹಾಗೂ ಮಠದ ದಿವಾನರಾದ ಎಂ.ರಘುರಾಮಾಚಾರ್ಯ ಮತ್ತಿತರರು ಉಪಸ್ಥಿತರಿರುವರು.
ಆಸಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಪೇಜಾವರ ಶ್ರೀ ವಿಶ್ವೇಶ ತೀರ್ಥರಿಂದ ಸಸಿಗಳನ್ನು ಸ್ವೀಕರಿಸಬಹುದು ಎಂದು ಪ್ರಕಟನೆ ತಿಳಿಸಿದೆ. ಸಹಕಾರಿ ಬ್ಯಾಂಕ್: ನಕಲಿ ಚಿನ್ನಾಭರಣ ತಪಾಸಣೆ ಕಾಸರಗೋಡು, ಜೂ. 13: ಎರಡು ಸಹಕಾರಿ ಬ್ಯಾಂಕ್‌ಗಳಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟ ಘಟನೆ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲೆಯಲ್ಲಿರುವ ಎಲ್ಲಾ ಸಹಕಾರಿ ಬ್ಯಾಂಕ್‌ಗಳಲ್ಲಿರುವ ಚಿನ್ನಾಭರಣದ ತಪಾಸಣೆ ಇಂದಿನಿಂದ ಆರಂಭಗೊಳ್ಳಲಿದೆ. ಸಹಕಾರಿ ಇಲಾಖೆಯ ಉಸ್ತುವಾರಿ ಹೊಂದಿರುವ 85ಮಂದಿ ತಪಾಸಣೆ ನಡೆಸುವರು. ಮುಟ್ಟತ್ತೋಡಿ ಸಹಕಾರಿ ಬ್ಯಾಂಕ್‌ನ ಎರಡು ಶಾಖೆಗಳಲ್ಲಿ ನಾಲ್ಕು ಕೋಟಿ ರೂ.ಗೂ ಅಧಿಕ ನಕಲಿ ಚಿನ್ನಾಭರಣ ಪತ್ತೆಯಾದ ಹಿನ್ನಲೆಯಲ್ಲಿ ಅಧಿಕಾರಿಗಳು ತಪಾಸಣೆಗೆ ಮುಂದಾಗಿದ್ದಾರೆ. ಹತ್ತು ದಿನಗಳೊಳಗೆ ತಪಾಸಣೆ ಕಾರ್ಯಪೂರ್ಣಗೊಳ್ಳಲಿದೆ. ಜಿಲ್ಲೆಯ 69 ಸಹಕಾರಿ ಬ್ಯಾಂಕ್ ಮತ್ತು ಅದರ ಶಾಖೆಗಳಲ್ಲಿ ತಪಾಸಣೆ ನಡೆಯಲಿದೆ.
ಡೆಂಗ್ ಜ್ವರ ನಿಯಂತ್ರಣದ ಕುರಿತು ಸಭೆ
ಸುಬ್ರಹ್ಮಣ್ಯ, ಜೂ.13: ಸುಬ್ರಹ್ಮಣ್ಯ ಗ್ರಾಪಂನ ರಾಜೀವಗಾಂಧಿ ಸೇವಾಕೇಂದ್ರ ಸಭಾ ಭವನದಲ್ಲಿ ಡೆಂಗ್ ಜ್ವರ ನಿಯಂತ್ರಣಕ್ಕೆ ಅಗತ್ಯ ಕ್ರಮ ಕುರಿತು ಗ್ರಾಪಂ ಅಧ್ಯಕ್ಷೆ ಸುಶೀಲಾ ಎಚ್. ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸುಬ್ರಹ್ಮಣ್ಯ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ತ್ರಿಮೂರ್ತಿ ಡೆಂಗ್ ಜ್ವರ, ಇಲಿ ಜ್ವರದ ಲಕ್ಷಣಗಳು, ಮುಂಜಾಗ್ರತಾ ಕ್ರಮ, ನಿಯಂತ್ರಣ ಹಾಗೂ ರೋಗ ಗುಣಪಡಿಸುವ ಚಿಕಿತ್ಸೆಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಆಡಳಿತ ಮಂಡಳಿ ಸದಸ್ಯರು, ಆಶಾ ಕಾರ್ಯ ಕರ್ತೆಯರು, ಶಾಲಾ ಶಿಕ್ಷಕ ಹಾಗೂ ಅಧ್ಯಾಪಕ ವೃಂದ, ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾಯಕಿಯರು, ಕುಕ್ಕೆ ಶ್ರೀ ದೇವಳದ ಸಿಬ್ಬಂದಿ, ರೋಟರಿ ಮತ್ತು ರೋಟರಾಕ್ಟ್ ಕ್ಲಬ್, ಜೇಸಿ ಮತ್ತು ಜೇಸಿರೇಟ್ ಸಂಸ್ಥೆ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ರಿಕ್ಷಾಕ್ಕೆ ಮೀನಿನ ಟೆಂಪೊ ಢಿಕ್ಕಿ: ಇಬ್ಬರಿಗೆ ಗಾಯ
ಮುಲ್ಕಿ, ಜೂ. 13: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ಸು ನಿಲ್ದಾಣದ ಬಳಿ ಮೀನಿನ ಟೆಂಪೊ ರಿಕ್ಷಾಕ್ಕೆ ಢಿಕ್ಕಿ ಹೊಡೆದು ಇಬ್ಬರು ಗಾಯಗೊಂಡ ಘಟನೆ ನಡೆದಿದೆ.
ಬಳ್ಕುಂಜೆಯ ಕವಾತ್ತರಿನಿಂದ ಮುಲ್ಕಿ ಬಸ್ಸು ನಿಲ್ದಾಣದ ಕಡೆಗೆ ಬರುತ್ತಿದ್ದ ರಿಕ್ಷಾಕ್ಕೆ ಮಂಗಳೂರಿನಿಂದ ಮುಲ್ಕಿ ಕಡೆಗೆ ಸಾಗುತ್ತಿದ್ದ ಮೀನಿನ ಟೆಂಪೊ ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ಅಪಘಾತದಿಂದ ರಿಕ್ಷಾ ಜಖಂಗೊಂಡಿದ್ದು ರಿಕ್ಷಾದಲ್ಲಿದ್ದ ಚಾಲಕ ಸಹಿತ ಕವಾತ್ತಾರು ನಿವಾಸಿ ಉಮೇಶ್ ಸಹಿತ ಲಕ್ಷ್ಮಣ್ ದಾಸ್, ಕ್ಲೆಮೆಂಟ್ ಡಿಸೋಜ ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ಮಂಗಳೂರು ಉತ್ತರ ವಲಯ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.







