ಮಾನಸಿಕ ಅಸ್ವಸ್ಥರು ಮರಳಿ ಮನೆಗೆ

ಉಡುಪಿ, ಜೂ.13: ಮಾನಸಿಕ ಅಸ್ವಸ್ಥತೆಯಿಂದ ರಸ್ತೆ ಬದಿಯಲ್ಲಿ ಅಲೆದಾಡುತ್ತಿದ್ದ ರಾಜ್ಯ ಹಾಗೂ ಹೊರರಾಜ್ಯದ ಎಂಟು ಮಂದಿಗೆ ಶಂಕರಪುರದ ವಿಶ್ವಾಸದ ಮನೆ ಅನಾಥಾಶ್ರಮದಲ್ಲಿ ಆರೈಕೆ ಹಾಗೂ ಚಿಕಿತ್ಸೆ ನೀಡಿ ಗುಣಮುಖರನ್ನಾಗಿಸಿದ್ದು, ಇದೀಗ ಇವರನ್ನು ಅವರವರ ಮನೆಗಳಿಗೆ ತಲುಪಿಸುವ ಸಿದ್ಧತೆಯನ್ನು ನಡೆಸಲಾಗುತ್ತಿದೆ.
ಮಹಾರಾಷ್ಟ್ರದ ಸುಶೀಲಾ 2011ರ ಜ.16ರಂದು ಮಂಗಳೂರಿನಲ್ಲಿ, ಮಹಾರಾಷ್ಟ್ರದ ಪ್ರಕಾಶ್ 2013ರ ಫೆ.26ರಂದು ಶಿರ್ವ ಪೇಟೆಯಲ್ಲಿ, ತುಮಕೂರಿನ ವಿಜಯ ಕುಮಾರಿ 2014ರ ಸೆ.7ರಂದು, ಮಹಾರಾಷ್ಟ್ರದ ಶಂಕರ್ 2015ರ ಫೆ.18ರಂದು ಬ್ರಹ್ಮಾವರ ಗಾಂಧಿ ಮೈದಾನದ ಬಳಿ, ತುಮಕೂರಿನ ಅನಿತಾ 2015ರ ಜು.22ರಂದು ಕುಂದಾಪುರದ ಹೆಮ್ಮಾಡಿ ಬಸ್ ನಿಲ್ದಾಣದಲ್ಲಿ, ತುಮಕೂರಿನ ಪ್ರಭಾಕರ್ 2015ರ ಅ.31ರಂದು ಸಂತೆಕಟ್ಟೆ ರಾ.ಹೆ.ಯಲ್ಲಿ, ತುಮಕೂರಿನ ವಿಠಲ್ 2016ರ ಫೆ.9ರಂದು ಮಣಿಪಾಲದ ಎಂಐಟಿ ಬಳಿ, ರಾಯಚೂರಿನ ಚೆನ್ನಬಸವ 2016ರ ಮಾ.24ರಂದು ಕಲ್ಯಾಣ ಪುರ ಸಂತೆಕಟ್ಟೆಯಲ್ಲಿ ಪತ್ತೆಯಾಗಿದ್ದರು.
ಸರಿಯಾದ ಆಹಾರವಿಲ್ಲದೆ, ದುರ್ವಾಸನೆಯಿಂದ ತುಂಬಿ ರಸ್ತೆ ಬದಿ ಅಲೆದಾಡುತ್ತಿದ್ದ ಇವರೆಲ್ಲರನ್ನು ವಿಶ್ವಾಸದ ಮನೆಗೆ ಕರೆತಂದು ಸರಿಯಾದ ಆರೈಕೆ ಹಾಗೂ ಚಿಕಿತ್ಸೆ ನೀಡಿ ಗುಣಮುಖರನ್ನಾಗಿಸಲಾಯಿತು. ಆದರೆ ವಿಳಾಸದ ಕೊರತೆಯಿಂದ ಅವರನ್ನು ಈವರೆಗೆ ಮನೆಗೆ ತಲುಪಿಸಲು ಸಾಧ್ಯವಾಗಿಲ್ಲ. ಈಗ ಈ ಎಂಟು ಮಂದಿಯ ವಿಳಾಸ ಪತ್ತೆ ಯಾಗಿದ್ದು, ಡಿಜಿಎಂಬಿಸಿ ಟ್ರಸ್ಟ್ ಆಡಳಿತ ಮಂಡಳಿಯು ಸಂಸ್ಥೆಯ ಸ್ವಂತ ವಾಹನದಲ್ಲಿ ಇವರನ್ನು ಅವರ ಮನೆಗಳಿಗೆ ತಲುಪಿಸುವ ಕೆಲಸವನ್ನು ಇಂದು ನಡೆಸಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಪಾ.ಸುನೀಲ್ ಜಾನ್ ಡಿಸೋಜ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.್ದಗೋಷ್ಠಿಯಲ್ಲಿ ಮ್ಯಾಥ್ಯೂ ಝೇರಿಯರ್, ವಿನ್ಸೆಂಟ್, ಎಡ್ವರ್ಡ್ ಮೆನೇಜಸ್ ಉಪಸ್ಥಿತರಿದ್ದರು.





