ಶೋಕಸಾಗರದಲ್ಲಿ ಮುಳುಗಿದ ಪಳ್ಳಿಕೆರೆ ಪರಿಸರ
ಅಪಘಾತದಲ್ಲಿ ಒಂದೇ ಕುಟುಂಬದ 6 ಮಂದಿ ದುರ್ಮರಣ
-(2).jpg)
ಕಾಸರಗೋಡು, ಜೂ.14: ಒಂದೇ ಕುಟುಂಬದ ಆರು ಮಂದಿಯನ್ನು ಬಲಿಪಡೆದುಕೊಂಡ ಅಪಘಾತ ಪ್ರಕರಣವು ಪಳ್ಳಿಕೆರೆ ಪರಿಸರವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಸುದ್ದಿ ತಿಳಿದು ನೂರಾರು ಮಂದಿ ಮೃತರ ಮನೆಗೆ ಆಗಮಿಸುತ್ತಿದ್ದು, ಸಂತೈಸಲು ಸಾಧ್ಯವಾಗುತ್ತಿಲ್ಲ.
ಸೋಮವಾರ ಸಂಜೆ ವೇಳೆ ಪಳ್ಳಿಕೆರೆ ಪಂಚಾಯತ್ ಕಚೇರಿ ಸಮೀಪ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಚೇಟುಕುಂಡುವಿನ ಸಕೀನಾ (38). ಪುತ್ರ ಸಜೀರ್ ( 22), ಸಹೋದರಿ ಶಾನಿರಾ (18), , ಸಕೀನಾರ ಸಹೋದರ ಪತ್ನಿ ರಂಸೀನಾ (19), ಖೈರುನ್ನಿಸಾ ( 31) ಮತ್ತು ಪುತ್ರಿ ಫಾತಿಮಾ (2) ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಸಜೀರ್ರ ಸ್ನೇಹಿತ ಹರ್ಷಾದ್ (17), ಖೈರುನ್ನಿಸಾರ ಮಕ್ಕಳಾದ ಅಜ್ಮಲ್ (5) ಪುತ್ರ ಇನಾಂ (1) ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಂಜಾನ್ ಇಫ್ತಾರ್ಗೆ ಕಾಸರಗೋಡು ವಿದ್ಯಾನಗರದಲ್ಲಿರುವ ಸಂಬಂಧಿಕರ ಮನೆಗೆ ಬರುತ್ತಿದ್ದಾಗ ಘಟನೆ ನಡೆದಿತ್ತು. ಮೃತದೇಹಗಳನ್ನು ಕಾಞಂಗಾಡ್‌ನ ಖಾಸಗಿ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದ್ದು,ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.







