ಸುಳ್ಯ: 'ನಮ್ದೆ ತಪ್ಪು' ಕಿರುಚಿತ್ರ ಲೋಕಾರ್ಪಣೆ
ನೀರಿನ ಸಂರಕ್ಷಣೆಯ ಸಂದೇಶ ಸಾರುವ ಕಿರುಚಿತ್ರ

ಸುಳ್ಯ, ಜೂ.14: ಡ್ರೀಮ್ ಕ್ರಿಯೇಶನ್ಸ್ ಬ್ಯಾನರ್‌ನಡಿ ಚಂದ್ರಕಿರಣ್ ಪೆರ್ಲ ನಿರ್ದೇಶಿಸಿದ 'ನಮ್ದೆ ತಪ್ಪು' ಎಂಬ ಕಿರು ಚಿತ್ರ ಇತ್ತೀಚೆಗೆ ಬಿಡುಗಡೆಗೊಂಡಿತು.
ನೀರನ್ನು ರಕ್ಷಿಸಿ ಎಂಬ ಸಂದೇಶ ಸಾರುವ ಈ ಕಿರುಚಿತ್ರವನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡುವ ಮುಖಾಂತರ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಕಿರುಚಿತ್ರವನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೀರಿನ ಸಮಸ್ಯೆ ಅತ್ಯಂತ ಹೆಚ್ಚು ಬಾಧಿಸಿದ ಈ ವರ್ಷ ಇಂತಹ ಕಿರುಚಿತ್ರ ಸಮಾಜದ ಕಣ್ಣು ತೆರೆಸಲು ಸಹಕಾರಿಯಾಗಲಿ ಎಂದು ಹಾರೈಸಿದರು.
ವರದಿಗಾರ ಹರೀಶ್ ಬಂಟ್ವಾಳ್ ಶುಭ ಹಾರೈಸಿ, ಸುದ್ದಿ ಬಳಗದ ಕ್ರಿಯಾಶೀಲತೆಯನ್ನು ಈ ಕಿರುಚಿತ್ರ ತೋರಿಸಿಕೊಟ್ಟಿದೆ ಎಂದು ಹೇಳಿದರು.
ದುರ್ಗಾಕುಮಾರ್ ನಾಯರ್‌ಕೆರೆ ಮಾತನಾಡಿ, ಸಣ್ಣದೊಂದು ಒಳ್ಳೆಯ ಸಂದೇಶ ಕೂಡಾ ದೊಡ್ಡ ಬದಲಾವಣೆಗೆ ಕಾರಣವಾಗುತ್ತದೆ. ಸಾಮಾಜಿಕ ಜಾಲತಾಣಗಳ ಮೂಲಕ ಹೊರ ಪ್ರಪಂಚಕ್ಕೆ ಪ್ರಕಟಗೊಂಡ ಈ ಕಿರುಚಿತ್ರದಿಂದ ಕೂಡ ಅಂತಹ ಬದಲಾವಣೆ ಸಾಧ್ಯವಾಗಲಿ ಎಂದರು. ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ ಶುಭ ಹಾರೈಸಿದರು.
ಈ ಕಿರುಚಿತ್ರದ ಚಿತ್ರೀಕರಣವನ್ನು ಪ್ರಶಾಂತ್ ಶೇಣಿ ನಿರ್ವಹಿಸಿದ್ದು, ಚಂದ್ರಕಿರಣ್ ಪೆರ್ಲ, ರೋಹನ್, ಪವನ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಕಿರುಚಿತ್ರದ ನಿರ್ದೇಶಕ ಹಾಗೂ ನಟ ಚಂದ್ರಕಿರಣ್ ಪೆರ್ಲ ಸ್ವಾಗತಿಸಿ, ಪ್ರಸ್ತಾವನೆಗೈದರು. ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಹಸೈನಾರ್ ಜಯನಗರ ವಂದಿಸಿದರು.







