ಥಮ್ಸ್ ಅಪ್ ಬಾಟಲಿಯಲ್ಲಿ ಸತ್ತ ಹಾವು ?

ಎಲ್ಲೂರು, ಜೂ.14: ಪಶ್ಚಿಮ ಗೋದಾವರಿ ಜಿಲ್ಲೆಯ ತಾನುಕು ಪಟ್ಟಣದಲ್ಲಿ ಕಡಾಲಿ ಪ್ರಸಾದ್ ಎಂಬವರು ಸ್ಥಳೀಯ ಅಂಗಡಿಯಿಂದ ಖರೀದಿಸಿದ ಥಮ್ಸ್ ಅಪ್ ಬಾಟಲಿಯೊಂದರಲ್ಲಿ ಸಣ್ಣ ಹಾವೊಂದು ಸತ್ತ ಸ್ಥಿತಿಯಲ್ಲಿ ಶನಿವಾರ ಪತ್ತೆಯಾಗಿದೆ.
ಕಡಾಲಿ ಪ್ರಸಾದ್ ಸಂಬಂಧಿಕರ ಮನೆಗೆ ತೆರಳುವಾಗ ಆರು ಥಮ್ಸ್ ಅಪ್ ಬಾಟಲಿ ಖರೀದಿಸಿದ್ದರು. ಆದರೆ ಬಾಲಿಯೊಂದರಲ್ಲಿ ಸಣ್ಣ ಹಾವೊಂದು ಪತ್ತೆಯಾದಾಗ ಅವರು ನಿಜಕ್ಕೂ ಆಘಾತಗೊಂಡರು.
ಪ್ರಸಾದ್ ತಡ ಮಾಡದೆ ತಾನು ಖರೀದಿಸಿದ ಅಂಗಡಿಗೆ ತೆರಳಿದರು. ಅಂಗಡಿಯ ಮಾಲಿಕನಿಗೆ ಸತ್ತ ಹಾವು ಇರುವ ಥಮ್ಸ್ ಅಪ್ ಬಾಟಲಿ ತೋರಿಸಿ ಆತನನ್ನು ತರಾಟೆಗೆ ತೆಗೆದುಕೊಂಡರು. ಆದರೆ ಅಂಗಡಿ ಮಾಲಿಕನಿಂದ ಯಾವುದೇ ಪ್ರತಿಕ್ರಿಯೆ ಕಂಡು ಬರಲಿಲ್ಲ. ಗ್ರಾಹಕ ಪ್ರಸಾದ್ ಇದೀಗ ನ್ಯಾಯಾಲಯದ ಮೊರೆ ಹೋಗುವ ಚಿಂತನೆ ನಡೆಸಿದ್ದಾರೆ.
"ಅದೃಷ್ಟವಶಾತ್ ಸತ್ತ ಹಾವನ್ನು ನಾನು ಬಾಟ್ಲಿಯಲ್ಲಿ ನೋಡಿದೆ. ಒಂದು ವೇಳೆ ನೋಡದೆ ಇರುತ್ತಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ?" ಎಂದು ಪ್ರಶ್ನಿಸಿರುವ ಪ್ರಸಾದ್ ಈ ಸಂಬಂಧ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.





