ಇನ್ನೂ ಐದು ಉದ್ಯೋಗಗಳು ಸೌದೀಕರಣದ ಹೊಸ್ತಿಲಲ್ಲಿ
ಸೌದಿ ಸಂಕಟ

ರಿಯಾದ್, ಜೂನ್ 14: ವಿವಿಧ ಕ್ಷೇತ್ರಗಳಲ್ಲಿ ಸೌದೀಕರಣವನ್ನು ಪ್ರೋತ್ಸಾಹಿಸುವ ಅಂಗವಾಗಿ ಹೊಸ ಐದು ಉದ್ಯೋಗ ಕ್ಷೇತ್ರಗಳನ್ನು ಸೌದಿ ಪ್ರಜೆಗಳಿಗೆ ಮಾತ್ರ ಮೀಸಲಿರಿಸಲಾಗುವುದು ಎಂದು ಕಾರ್ಮಿಕ ಸಚಿವಾಲಯದ ಮೂಲಗಳು ತಿಳಿಸಿವೆ. ವಾಹನ ಮಾರಾಟ ಕಂಪೆನಿಗಳು, ವಾಹನ ಬಾಡಿಗೆ ನೀಡುವ ರೆಂಟ್ ಎ ಕಾರ್ ಸಂಸ್ಥೆಗಳು, ಚಿನ್ನಾಭರಣದ ಅಂಗಡಿಗಳು, ತರಕಾರಿ ಮಾರಾಟ, ಚಿಲ್ಲರೆ ಮಾರಾಟ ಅಂಗಡಿಗಳನ್ನು ಸ್ವದೇಶಿಗಳಿಗೆ ಮೀಸಲಿಡುವ ಯೋಜನೆಗಳು ತಯಾರಾಗಿವೆ. ಮೊಬೈಲ್ ಅಂಗಡಿಗಳ ಬಳಿಕ ಈ ಕ್ಷೇತ್ರಗಳಲ್ಲಿ ಕೂಡಾ ಸೌದೀಕರಣವನ್ನು ಯೋಜಿಸಲಾಗಿದೆ.
ವಾಹನಗಳನ್ನು ತರಿಸಿ ಮಾರಾಟ ಮಾಡುವ ಬೃಹತ್ ಏಜೆನ್ಸಿಗಳು ಬಹುರಾಷ್ಟ್ರೀಯ ಕಂಪೆನಿಗಳನ್ನು ಉಪಯೋಗಿಸಿ ವಾಹನಗಳನ್ನು ಮಾರುವ ಸ್ವದೇಶಿ ಸಂಸ್ಥೆಗಳು ಸೌದೀಕರಣದ ವ್ಯಾಪ್ತಿಗೊಳಗಾಗಲಿವೆ.
ವಾಹನ ಬಾಡಿಗೆ ಕೊಡುವ ರೆಂಟ್ ಎ ಕಾರ್ ಸಂಸ್ಥೆಗಳು ಕಾರ್ಮಿಕ ಸಚಿವಾಲಯ ಸೌದೀಕರಣಕ್ಕೆ ಕಣ್ಣಿಟ್ಟಿರುವ ಇನ್ನೊಂದು ಕ್ಷೇತ್ರವಾಗಿದೆ. ಸ್ವದೇಶಿಗಳು ಕೆಲಸಮಾಡಲು ಸಿದ್ಧವಿರುವ ಎಲ್ಲ ಕ್ಷೇತ್ರಗಳಲ್ಲಿಯೂ ವಿದೇಶಿಗಳ ಬದಲಾಗಿ ಸ್ವದೇಶಿಗಳನ್ನೇ ನೇಮಕಗೊಳಿಸಲಾಗುವುದು ಎಂದು ಕಾರ್ಮಿಕ ಸಹ ಸಚಿವ ಅಹ್ಮದ್ ಅಲ್‌ಹುಮೈದಾನ್ ಹೇಳಿದ್ದಾರೆ, ಚಿನ್ನಾಭರಣದ ಅಂಗಡಿಗಳು. ತರಕಾರಿ ಮಾರುಕಟ್ಟೆಗಳಲ್ಲಿಯೂ ಸೌದೀಕರಣವನ್ನು ಆರಂಭಿಸಲಾಗಿದ್ದರೂ ಈ ಕ್ಷೇತ್ರವನ್ನು ಈ ಸಲ ಶೇ. 100ರಷ್ಟು ಸ್ವದೇಶಿಗಳಿಗೆ ಮೀಸಲಿರಿಸಲಾಗುವುದು ಎಂದು ವರದಿಯಾಗಿದೆ.







